ಕಳೆದ ವಿಧಾನ ಸಭೆ ಚುನಾವಣೆ ವೇಳೆ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಕೊಡಿಸುವುದಾಗಿ ಗೋವಿಂದಬಾಬು ಅವರ ಬಳಿಯಿಂದ ಚೈತ್ರಾ ಕುಂದಾಪುರ ಒಟ್ಟು 4 ಕೋಟಿ ರೂಪಾಯಿ ಹಣ ಪಡೆದಿದ್ದರು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಕುಂದಾಪುರ ಹಣ ನೀಡದೇ ವಂಚಿಸಿದ್ದಾರೆ ಎಂದು ಗೋವಿಂದಬಾಬು ಪೂಜಾರಿ ಅವರು ದೂರು ನೀಡಿದ ಹಿನ್ನಲೆಯಲ್ಲಿ ಚೈತ್ರ ಕುಂದಾಪುರ ಎಂಬ ಹಿಂದೂ ಕಾರ್ಯಕರ್ತೆಯನ್ನು ಪೊಲೀಸರು ಬಂಧಿಸಿದ್ದರು.
ಕೋಟ್ಯಾಂತರ ರೂಪಾಯಿ ತೆಗೆದುಕೊಂಡು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಧನರಾಜ್ ಎಂಬಾತ ಬೇಲ್ ಮೇಲೆ ಜೈಲಿನಿಂದ ಹೊರಬಂದು ಸಾಕ್ಷಿ ಹೇಳಿದರೆ ಕೊಲೆ ಮಾಡುವುದಾಗಿ ಸಲೂನ್ ಮಾಲೀಕ ರಾಮು ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.
25/03/2024 ರಂದು ರಾತ್ರಿ 10:30 ಗಂಟೆಗೆ, ನಾನು ನಾಗೇಶ್, ಸಂಜಯ್ @ ಸಂಜು ಕುಮಾರ್ ಮತ್ತು ಗೋವಿಂದ ಜೊತೆಗೆ ಶಾನ್ ಹೋಟೆಲ್ನಲ್ಲಿ ಊಟ ಮಾಡುತ್ತಿರುವ ಸಮಯ ಚೈತ್ರ ಕುಂದಾಪುರ ಪ್ರಕರಣದ ಆರೋಪಿಗಳಾದ ಧನರಾಜ್ ಮತ್ತು ಮನು ಸೇರಿ 8 ಮಂದಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದು, ನಾನು ಆತನ ಭವಿಷ್ಯ ಹಾಳು ಮಾಡಿಕೊಂಡಿದ್ದೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಕಾಲುಗಳಿಂದ ಹಲ್ಲೆ ನಡೆಸಿದ್ದಾರೆ. ಈತನು ಕಡಗ (ಸ್ಟೀಲ್ ಬಳೆ) ಯನ್ನು ಉಪಯೋಗಿಸಿ ಬಹಳ ಬಲವಾಗಿ ನನಗೆ ಹೊಡೆದಿದ್ದಾನೆ, ಅವನ ಕಿರಿಯ ಸಹೋದರ ಮನು ಸಹ ನನಗೆ ತನ್ನ ಕೈಗಳಿಂದ ಹೊಡೆದಿದ್ದಾನೆ. ಮತ್ತು ಧನರಾಜ್ ಜೊತೆಗೆ ಬಂದ ಇತರ 8 ಜನರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ನನ್ನ ಕಿವಿ ಹರಿದಿತ್ತು. ಇದಲ್ಲದೆ ಸಂಜಯ್ @ ಸಂಜು ಕುಮಾರ್ ಅವರ ಮೇಲೂ ಹಲ್ಲೆ ನಡೆಸಿದ್ದು, ಮೂಗಿನ ಮೇಲೆ ರಕ್ತಸ್ರಾವವಾಗಿದೆ. ಅಪರಾಧ ನಡೆದ ಸ್ಥಳದಿಂದ ಹೊರಡುವ ಮೊದಲು, ಅವರು ತಮ್ಮ ಮತ್ತು ಚೈತ್ರಾ ಕುಂದಾಪುರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಸತ್ಯವನ್ನು ಹೇಳಿದರೆ ನನ್ನನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದರು. ಈ ಹಿಂದೆ ಧನರಾಜ್ ನನ್ನ ಹೇರ್ ಕಟಿಂಗ್ ಸಲೂನ್ ಬಳಿ 3 ಬಾರಿ ಬಂದು ನ್ಯಾಯಾಲಯಕ್ಕೆ ಸಾಕ್ಷಿ ನೀಡದಂತೆ ಬೆದರಿಕೆ ಹಾಕಿದ್ದ. ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ಅವರಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳಲು ನನ್ನ ವಿರುದ್ಧ ಈ ಅಪರಾಧಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಂಚನೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ರಾಮು, ಚೈತ್ರಾ ವಂಚನೆ ಪ್ರಕರಣದಲ್ಲಿ ಗೋಪಾಲ್ ಜೀ ಪಾತ್ರ ಸೃಷ್ಟಿಸಿ ಕಡೂರಿನ ರಾಮು ಸಲೂನ್ನಲ್ಲಿ ಚೆನ್ನಾ ನಾಯ್ಕಗೆ ಧನರಾಜ್ ಮೇಕಪ್ ಮಾಡಿಸಿದ್ದ. ಈ ಹಿನ್ನಲೆ ವಂಚನೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ರಾಮುವಿಗೆ ಸಾಕ್ಷಿ ಹೇಳದಂತೆ ಬೆದರಿಕೆ ಒಡ್ಡಿದ್ದಾನೆ. ಇದೀಗ ಪ್ರಕರಣ ದಾಖಲಿಸದ ಬೀರೂರು ಪೊಲೀಸರ ವಿರುದ್ಧ ರಾಮು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ನ್ಯಾಯಕ್ಕಾಗಿ ಎಸ್ಪಿ ವಿಕ್ರಮ್ ಆಮ್ಟೆ ಮೊರೆ ಹೋಗಿದ್ದಾರೆ.
