ಮಣಿಪಾಲ ಸಿಗ್ಮ ಹೆಲ್ತ್ ವಿಮಾ ಕಂಪನಿ ಲಿಮಿಟೆಡ್ ನ ಸೇವಾ ನ್ಯೂನತೆಗೆ ಬಿಸಿಮುಟ್ಟಿಸಿದ ಗ್ರಾಹಕರ ನ್ಯಾಯಾಲಯ; ಪರಿಹಾರಕ್ಕೆ ಆದೇಶ

ರಾಜ್ಯ

ಅಪರೂಪದ ಈ ಪ್ರಕರಣದಲ್ಲಿ ಗ್ರಾಹಕರ ಹಕ್ಕಿನ ಮಹತ್ವ ಮತ್ತೊಮ್ಮೆ ಸಾಬೀತಾಗಿದೆ

ಮಂಗಳೂರು: ಬಂಟ್ವಾಳದ ಪೆರ್ನೆ ನಿವಾಸಿ ಗೀತಾ ಬಿ. ಎಸ್ ರವರು ಮಣಿಪಾಲ ಸಿಗ್ಮ ಹೆಲ್ತ್ ವಿಮಾ ಕಂಪನಿಯ ಪ್ರೊ -ಹೆಲ್ತ್ ಪ್ರೊಟೆಕ್ಟ್ ಮತ್ತು ಪಾಲಿಸಿ ಸಂಖ್ಯೆ PROHLR010042018 ನ ಮೆಡಿಕ್ಲೈಮ್ ಪಾಲಿಸಿಯನ್ನು ಹೊಂದಿದ್ದರು. ಸದ್ರಿ ಪಾಲಿಸಿ 06/05/2021 ರಿಂದ 05/05/2022 ರವರೆಗೆ ಸಿಂಧುತ್ವ ಹೊಂದಿತ್ತು . ಈ ಯೋಜನೆ ಪ್ರಕಾರ, ಸದ್ರಿ ಪಾಲಿಸಿ ಫ್ಯಾಮಿಲಿ ಫ್ಲೋಟರ್ ಆಗಿದ್ದು , ರೂ.32,102/- ಪ್ರೀಮಿಯಂ ಅನ್ನು ಗೀತಾರವರು 05/05/2021 ರಂದು ಪಾವತಿಸಿದ್ದರು. ದೂರುದಾರರಿಗೆ ಪಾಲಿಸಿಯನ್ನು ಮಂಜೂರು ಮಾಡುವ ಮೊದಲು ವೈದ್ಯಕೀಯ ಪರೀಕ್ಷೆಗಳು ಇತ್ಯಾದಿ ಅಗತ್ಯವಿರುವ ಎಲ್ಲಾ ಪೂರ್ವ- ಅವಶ್ಯಕ ಪರೀಕ್ಷೆಗಳನ್ನು, ನಿಯಮಾನುಸಾರ ಅನುಸರಿಸಲಾಗಿ, ಅಗತ್ಯ ಷರತ್ತುಗಳನ್ನು ಪೂರೈಸಲಾಗಿತ್ತು . ಪ್ರಸ್ತುತ ಪಾಲಿಸಿಯನ್ನು ಗೀತಾ ಬಿ.ಎಸ್ ರವರು 04/05/2016 ರಿಂದ ಪ್ರಾರಂಭಿಸಿ, ನಂತರ ಕಾಲಕಾಲಕ್ಕೆ ಅಗತ್ಯವಾದ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ ಮುಂದುವರಿಸುತ್ತಾ ಬಂದಿದ್ದರು. ಪ್ರಸ್ತುತ ಪಾಲಿಸಿಯು 5ನೇ ವರ್ಷದ ನಿರಂತರ ಕವರೇಜ್ ಆಗಿತ್ತು .

ದಿನಾಂಕ 03/06/2021 ರಂದು ಗೀತಾರವರು ಹೊಟ್ಟೆನೋವು ಇರುವುದಾಗಿ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿ, ದಿನಾಂಕ 05/06/2021 ರವರೆಗೆ ಅದೇ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ತದ ನಂತರ ವೈದ್ಯಕೀಯ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಮ್.ಸಿ.ಆಸ್ಪತ್ರೆಗೆ ದಾಖಲಾದರು. ವೈದ್ಯರ ಸಲಹೆ ಮೇರೆಗೆ ಗೀತಾರವರಿಗೆ ಸೆಪ್ಸಿಸ್, ಹೆಪಟೈಟಿಸ್ ಖಾಯಿಲೆ ಇತ್ತು. ಆ ಸಮಯದಲ್ಲಿ ಅವರು ಮೆಡಿಕ್ಲೈಮ್ ಪಾಲಿಸಿಯನ್ನು ನಂಬಿ, ಸದ್ರಿ ವಿಮಾ ಪಾಲಿಸಿಯು ನಗದು ರಹಿತ ಸೇವಾ ಸೌಲಭ್ಯ ಹೊಂದಿದೆ ಎಂದು ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಗೀತಾರವರು 11-06-21ರವರೆಗೆ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಆದರೆ, ವಿಮಾ ಪಾಲಿಸಿಯಲ್ಲಿ ತಿಳಿಸಿರುವಂತೆ ಕಂಪನಿಯವರು ನಗದು ರಹಿತ ಚಿಕಿತ್ಸೆಯನ್ನು ಒದಗಿಸದೇ, ಯಾವುದೇ ಕಾನೂನು ಬದ್ಧ ಸಕಾರಣವಿಲ್ಲದೆ, ಸೇವಾ ಸೌಲಭ್ಯವನ್ನು ನಿರಾಕರಿಸಿರುತ್ತಾರೆ. ಅಲ್ಲದೇ, ಕ್ಲೇಮ್ ಹಣವನ್ನು ಮರುಪಾವತಿಯೂ ಮಾಡದೇ ನ್ಯೂನತಾಯುಕ್ತ ಸೇವೆಯನ್ನು ನೀಡಿದ್ದು,ಇದರಿಂದಾಗಿ ಗೀತಾರವರಿಗೆ ಸಾಕಷ್ಟು ಖರ್ಚು- ವೆಚ್ಚಗಳಾಗಿರುತ್ತದೆ ಹಾಗೂ ಸೇವೆಯ ಕೊರತೆಯಾಗಿರುತ್ತದೆ.

ವಿಮಾ ಕಂಪೆನಿಯ ದ್ವಂಧ ನೀತಿಯಿಂದ ನೊಂದ ಗೀತಾರವರು ತನ್ನ ಪರ ವಕೀಲರಾದ ಪುತ್ತೂರಿನ ‘ಕಜೆ ಲಾ ಚೇಂಬರ್ಸ್’ ಇದರ ಮುಖ್ಯಸ್ಥರಾದ ನ್ಯಾಯವಾದಿ ಶ್ರೀ ಮಹೇಶ್ ಕಜೆ ಅವರ ಮುಖಾಂತರ ಆರಂಭದಲ್ಲಿ ವಿಮಾ ಕಂಪನಿಯವರಿಗೆ ನೋಟಿಸ್ ಜ್ಯಾರಿ ಮಾಡಿದ್ದರು. ಆದರೆ, ಕಂಪನಿಯವರು ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇದ್ದಾಗ, ಅವರ ವಿರುದ್ಧ ಮಂಗಳೂರು ಗ್ರಾಹಕರ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಜಿಲ್ಲಾ ಗ್ರಾಹಕರ ಆಯೋಗ ವಿಚಾರಣೆಯನ್ನು ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ವಾದವನ್ನು ಆಲಿಸಿ, ದೂರನ್ನು ಪುರಸ್ಕರಿಸಿ, ಎದುರುದಾರರ ಕಂಪನಿಯವರು ಬಿಲ್ಲಿನ ಮೊತ್ತವಾದ ರೂ.2,16,590/-ಗಳನ್ನು ಶೇ.8% ಬಡ್ಡಿ ಸಹಿತ ಸೇರಿಸಿ ಪಾವತಿಸಲು ಭಾದ್ಯಸ್ಥರಾಗಿರುತ್ತಾರೆ ಹಾಗೂ 35,000/- ಪರಿಹಾರ ನೀಡಲು ಬದ್ದರು ಎಂದು
ಆದೇಶ ಮಾಡಿರುತ್ತಾರೆ.

ನಂತರವೂ ಕಂಪನಿಯವರು ಹಣ ಪಾವತಿ ಮಾಡದೇ ಇದ್ದಾಗ ದೂರುದಾರರು ಮತ್ತೆ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದು, ಇದೀಗ ಕಂಪನಿಯವರು ಸದ್ರಿ ಮೊತ್ತವನ್ನು ನ್ಯಾಯಾಲಯಕ್ಕೆ ಠೇವಣಿ ಇರಿಸಿದ್ದಾರೆಂದು ವರದಿಯಾಗಿದೆ. ಅಪರೂಪದ ಈ ಪ್ರಕರಣದಲ್ಲಿ ಗ್ರಾಹಕರ ಹಕ್ಕಿನ ಮಹತ್ವ ಮತ್ತೊಮ್ಮೆ ಸಾಬೀತಾಗಿದೆ.