ಮಂಗಳೂರು: ಅಡ್ಯಾರಿನ ಬೊಂಡ ಫ್ಯಾಕ್ಟರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಅಂಕಿತ ಅಧಿಕಾರಿ ಆಹಾರ ಸುರಕ್ಷತೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಮಂಗಳೂರು ಮತ್ತು ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರೆ ಆಹಾರ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಅಡ್ಯಾರಿನಲ್ಲಿರುವ ನ್ಯಾಚುರಲ್ಸ್ ಐಸ್ ಕ್ರೀಂ ಕಂಪೆನಿಯ ಬೊಂಡ ಪ್ಯಾಕ್ಟರಿಯಲ್ಲಿ ಎಳನೀರು ಕುಡಿದು ಸುತ್ತ ಮುತ್ತಲಿನ ಪರಿಸರದ ನಿವಾಸಿಗಳು ಅಸ್ವಸ್ಥರಾದ ಹಿನ್ನಲೆಯಲ್ಲಿ ಬೊಂಡ ಪ್ಯಾಕ್ಟರಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮುಖ್ಯಸ್ಥರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ, ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ತಿಳುವಳಿಕೆ ನೋಟೀಸ್ ನೀಡಿ ಬಂದ್ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ನಂತರ ಅಧಿಕಾರಿಗಳ ತಂಡ ತುಂಬೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆ, ಬಿ.ಸಿ.ರೋಡಿನ ಪರ್ಲಿಯ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಬಂಟ್ವಾಳ, ಪುಷ್ಪರಾಜ್ ಆಸ್ಪತ್ರೆ ಕಲ್ಲಡ್ಕ, ಮಂಗಳೂರು ನಗರದ ಹೈಲ್ಯಾಂಡ್ , ಯುನಿಟಿ, ದೇರಳಕಟ್ಟೆಯ ಕಣಚೂರು, ಯೆನೆಪೋಯ, ಇಂಡಿಯಾನ, ಕೊಲಾಸೊ ಹಾಗೂ ವಿವಿಧ ಆಸ್ಪತ್ರೆಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದುವರೆಗೆ ಒಟ್ಟು 137 ಮಂದಿ ಬೊಂಡಾ ಪೆಕ್ಟರಿಯಿಂದ ಎಳನೀರು ಕುಡಿದು ಅಸ್ವಸ್ಥರಾಗಿದ್ದು, ಹೊರರೋಗಿಗಳಾಗಿ 84, ಒಳರೋಗಿಗಳಾಗಿ 53 ಮಂದಿ ಚಿಕಿತ್ಸೆ ಪಡೆದಿದ್ದಾರೆ. 23 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿರುತ್ತಾರೆ. ಆಸ್ಪತ್ರೆಯಲ್ಲಿರುವ ಎಲ್ಲರ ಆರೋಗ್ಯವು ಸ್ಥಿರವಾಗಿರುತ್ತದೆ. ಆರೋಗ್ಯ ಇಲಾಖೆಯಿಂದ ನಿರಂತರವಾಗಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿರುತ್ತಾರೆ.
