ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ತನಿಖಾ ತಂಡದ ಅಧಿಕಾರಿಗಳಿಗೆ ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ರವರು ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತನಿಖಾ ತಂಡಕ್ಕೆ ಪ್ರಕರಣದ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು ಎನ್ನಲಾಗಿದೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವ ಮುನ್ನ, ವಿಚಾರಣೆಯ ನಂತರ ಕೆಲ ಮಾಹಿತಿ ಸೋರಿಕೆಯಾದ ಹಿನ್ನೆಲೆ ಖಡಕ್ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ. ಎಸ್ಐಟಿ ವಿಚಾರಣೆಗೂ ಮುನ್ನ ಅಜ್ಞಾತ ಸ್ಥಳದಿಂದ ಆರೋಪಿ ಚಾಲಕ ಕಾರ್ತಿಕ್ ವಿಡಿಯೋ ಹರಿಬಿಟ್ಟಿದ್ದನು. ವಕೀಲ ದೇವರಾಜೇಗೌಡ ಎಸ್ಐಟಿ ವಿಚಾರಣೆ ನಂತರ ರಾಜಕಾರಣಿಗಳ ಆಡಿಯೋ ಬಿಡುಗಡೆ ಮಾಡಿದ್ದರು.
ಸದ್ಯ ಪ್ರಕರಣ ಸಂಬಂಧ ಆರು ಪ್ರತ್ಯೇಕ ತಂಡಗಳಾಗಿ ತನಿಖಾ ತಂಡ ರಚನೆಯಾಗಿದ್ದು, ಒಂದು ತಂಡದ ತನಿಖೆ ಮತ್ತೊಂದು ತನಿಖಾ ತಂಡದ ಜೊತೆ ಚರ್ಚಿಸುವಂತಿಲ್ಲ. ಏನೇ ಮಾಹಿತಿ ಇದ್ದರೂ ಸಹ ತನಿಖಾ ಮುಖ್ಯಸ್ಥರ ಗಮನಕ್ಕೆ ತರಬೇಕು. ಎಸ್ಐಟಿ ಮುಖ್ಯಸ್ಥರ ಬಳಿ ಮಾತ್ರ ಚರ್ಚೆ ಮಾಡಬೇಕೆಂದು ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಕೋರ್ಟ್ ಪ್ರೊಸಿಡಿಂಗ್ಸ್, ಆರೋಪಿ ಪತ್ತೆ ಕಾರ್ಯ, ಹೇಳಿಕೆ ದಾಖಲು, ಟೆಕ್ನಿಕಲ್, ಡಿಜಿಟಲ್ ಎವಿಡೆನ್ಸ್, ಮಹಜರು ಪ್ರಕ್ರಿಯೆ ಹೀಗೆ ಪ್ರತ್ಯೇಕವಾಗಿ ಆರು ತಂಡಗಳಿಂದ ತನಿಖೆ ನಡೆಸಲಾಗುತ್ತಿದೆ. ಮಾಧ್ಯಮಗಳಿಗೆ ಯಾವುದೇ ಕಾರಣಕ್ಕೂ ತನಿಖಾ ಮಾಹಿತಿ ಸೋರಿಕೆಯಾಗದಂತೆ ಸೂಚನೆ ನೀಡಲಾಗಿದ್ದು, ಒಂದು ವೇಳೆ ತನಿಖಾ ಮಾಹಿತಿ ಸೋರಿಕೆಯಾದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನು ಬಿ.ಕೆ. ಸಿಂಗ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
