ಖಾಸಗಿ ಶಾಲೆಗಳಲ್ಲಿ ಡೊನೇಷನ್ ತೆಗೆದುಕೊಳ್ಳುವಂತಿಲ್ಲ. ಒಂದು ವೇಳೆ ತೆಗೆದುಕೊಂಡಿದ್ದು ಗಮನಕ್ಕೆ ಬಂದರೆ ಅಥವಾ ದಾಖಲೆ ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ ಮಾಡುವುದು ನಮ್ಮ ಕೈಯಲ್ಲಿಲ್ಲ. ಅದಕ್ಕೆ ಕ್ಯಾಂಪ್ಸ್(ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ) ಇರುತ್ತದೆ. ಅಲ್ಲಿ ತೆಗೆದುಕೊಂಡ ತೀರ್ಮಾನದಂತೆ ಶುಲ್ಕ ಪಡೆಯಲು ಅವಕಾಶವಿದೆ. ಅದರಲ್ಲಿ ಶಿಕ್ಷಣ ಇಲಾಖೆ ಮೂಗು ತೂರಿಸಲು ಸಾಧ್ಯವಿಲ್ಲ. ಆದರೆ ಶುಲ್ಕ ಸಂಗ್ರಹ ನೆಪದಲ್ಲಿ ಡೊನೇಷನ್ ಪಡೆಯುವುದು ತಪ್ಪು ಎಂದು ಹೇಳಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಡೊನೇಷನ್ ಪಡೆಯುತ್ತಿದ್ದಾರೆ ಎಂಬುದು ನಮ್ಮ ಗಮನಕ್ಕೂ ಬಂದಿದೆ. ಆದರೆ ದಾಖಲೆ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ. ಡೊನೇಷನ್ ಕೇಳುವುದು ತಪ್ಪು. ಕೊಡುವುದು ತಪ್ಪು. ಡೊನೇಷನ್ ಪಡೆದಿರುವ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
“ಖಾಸಗಿ ಶಾಲೆಗಳಿಗೆ ಒಂದು ಸಲಹೆ ಕೊಡುತ್ತೇನೆ. ಕಾನೂನಿನ ಪ್ರಕಾರವೇ ಶಾಲೆಯಲ್ಲಿ ಫೀಸ್ ತೆಗೆದುಕೊಳ್ಳಬೇಕು. ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಖಾಸಗಿ ಶಾಲೆಗಳು ಸಹಾಯ ಮಾಡಬೇಕು. ಅಕ್ರಮವಾಗಿ ಫೀಸ್ ತೆಗೆದುಕೊಂಡರೆ, ಹೆಚ್ಚಿನ ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡಿದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
