ಐಸಿಎಸ್ ನಂಟು ಆರೋಪ; ಉಳ್ಳಾಲದ ಮಾಜಿ ಶಾಸಕರ ಮೊಮ್ಮಗನಿಗೆ ಹೈಕೋರ್ಟ್ ಜಾಮೀನು

ರಾಜ್ಯ

ರಾಜ್ಯದಲ್ಲಿ ಕುತೂಹಲ ಕೆರಳಿಸಿದ್ದ, ಭಯೋತ್ಪಾದಕ ಸಂಘಟನೆ ಐಸಿಸ್‌ ಲಿಂಕ್‌ ಪ್ರಕರಣದಲ್ಲಿ ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬ ಅವರ ಮೊಮ್ಮಗ ಉಮ್ಮರ್‌ ಅಬ್ದುಲ್‌ ರೆಹಮಾನ್‌ಗೆ ಜಾಮೀನು ಮಂಜೂರು ಮಾಡಿದೆ. ಐಸಿಸ್ ಬಾವುಟ, ಕರಪತ್ರ ಮೊಬೈಲ್‌ನಲ್ಲಿದ್ದರೆ ಆತ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ ಎಂದು ದಿಲ್ಲಿಯ ಮಾನ್ಯ ಉಚ್ಚ ನ್ಯಾಯಾಲಯ ಹೇಳಿದೆ.

ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬ ಅವರ ಮೊಮ್ಮಗನ ಐಸಿಸ್ ನಂಟು ಕೇಸ್‌ನಲ್ಲಿ ಈ ಮಹತ್ವದ ಬೆಳವಣಿಗೆ ಆಗಿದೆ. ಯುಎಪಿಎ ಕಾಯಿದೆಯಡಿ ಈತನನ್ನು ರಾಷ್ಟ್ರೀಯ ತನಿಖಾ ದಳ 2021ರ ಅಗಸ್ಟ್ 21, ರಂದು ಐಸಿಸ್ ನಂಟಿನ ಆರೋಪದಡಿ ಬಂಧಿಸಿತು. ರೆಹಮಾನ್‌ ಬಂಧನ ಪ್ರಶ್ನಿಸಿ ವಿಚಾರಣಾಧೀನ ಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ವಿಚಾರಣಾಧೀನ ಕೋರ್ಟ್ ಜಾಮೀನು‌ ನಿರಾಕರಿಸಿದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ ಸುದೀರ್ಘ ವಿಚಾರಣೆ ಬಳಿಕ ದೆಹಲಿ ಹೈಕೋರ್ಟ್ ಉಮ್ಮರ್ ಅಬ್ದುಲ್ ರೆಹಮಾನ್ ಜಾಮೀನು ನೀಡಿ ಆದೇಶ ಹೊರಡಿಸಿದೆ.

“ಉಗ್ರ ಸಂಘಟನೆ ಬಗೆಗಿನ ಆಕರ್ಷಣೆಯನ್ನು ಉಗ್ರ ನಂಟು ಎನ್ನಲು ಆಗುವುದಿಲ್ಲ. ಐಸಿಸ್ ಪರ ವಿಡಿಯೋ ಡೌನ್‌ಲೋಡ್ ಮಾಡುವುದು, ಭಾಷಣ ಆಲಿಸುವುದನ್ನು ಯುಎಪಿಎ ಕಾಯಿದೆಯಡಿ ತರಲು ಆಗುವುದಿಲ್ಲ. ಈ ಸಾಕ್ಷ್ಯ ಬಳಸಿ ಯುಎಪಿಎ ಸೆಕ್ಷನ್ 38 ಮತ್ತು 39ರಡಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ” ಎಂದಿದೆ. ಆರೋಪಿ ಮೊಬೈಲ್‌ನಲ್ಲಿ ಉಗ್ರ ಒಸಾಮಾ ಬಿನ್‌ ಲಾಡೆನ್, ಐಸಿಸ್ ಬಾವುಟಗಳ ಚಿತ್ರ, ಐಸಿಸ್ ಪರ ಭಾಷಣಗಳ ತುಣುಕು ಸಿಕ್ಕಿದೆ” ಎಂದು ಎನ್‌ಐಎ ವಾದಿಸಿದರೆ, “ಇದೆಲ್ಲದರ ಮೂಲಕ ಆತನಿಗೆ ಐಸಿಸ್ ನಂಟಿದೆ ಎನ್ನಲು‌ ಆಗುವುದಿಲ್ಲ. ಯಾಕೆಂದರೆ ಇವುಗಳು ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್‌ನೆಟ್‌ನಲ್ಲಿ ಸಿಗುತ್ತವೆ. ಕುತೂಹಲ ಇರುವ ಯಾರು ಬೇಕಾದರೂ ‌ಮೊಬೈಲ್, ಕಂಪ್ಯೂಟರ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಬಹುದು. ಹಾಗಾಗಿ ಇದನ್ನು ಇಟ್ಟುಕೊಂಡು ಐಸಿಸ್ ನಂಟನ್ನು ಸಾಬೀತು ಪಡಿಸಲು ಆಗುವುದಿಲ್ಲ” ಎಂದು ದೆಹಲಿ ಉಚ್ಚ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ.