ತಾಂಟಲು ‘ನಾಯಕ’ ಫಿಕ್ಸ್..ಖೆಡ್ಡಾ ತೋಡಿ ಹಳ್ಳಕ್ಕೆ ಬಿದ್ದ ‘ಮಹಾನಾಯಕ’ .!
2028 ಕ್ಕೆ ‘ಹಸ್ತ’ ಕ್ಕೆ ಗುನ್ನ ಇಡುತ್ತಾ ಅಹಿಂದ.?
2026 ಮೇ 26. ಕಾಂಗ್ರೆಸ್ ಹೈಕಮಾಂಡ್ ಭಾಗ್ಯಗಳ ಸರದಾರ ಸಿದ್ದರಾಮಯ್ಯ ಅವರನ್ನು ಪಟ್ಟದಿಂದ ಕೆಳಗಿಳಿಸಿ ಡಿಕೆಶಿ ಅವರನ್ನು ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸಿತು. ಕಾಂಗ್ರೆಸ್ಸಿಗರದ್ದು ಇದೆಂತಹಾ ನಡೆ.? ಇದು ತಪ್ಪು ಹೆಜ್ಜೆ ಅಲ್ಲವೇ.? ರಾಜಕೀಯ ವಿಮರ್ಶಕರಿಂದ ಮಾತುಗಳು ಕೇಳಿ ಬಂದಿದ್ದವು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ಸಿಗೆ ಆಸರೆಯಾಗಿದ್ದ ಕರ್ನಾಟಕವನ್ನು ಕೈಯಾರೆ ಕಳೆದುಕೊಳ್ಳುತ್ತಾ ಅನ್ನುವ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಹರಿದಾಡಿತ್ತು. ಇದಕ್ಕೆ ಕಾರಣಗಳು ಇತ್ತು. ಸುದೀರ್ಘ ಎಂಟು ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆ ಬರದೇ ಆಡಳಿತ ನಡೆಸಿದ ಖ್ಯಾತಿ ಸಿದ್ದರಾಮಯ್ಯ ಅವರದ್ದು. ಅರಸು ದಾಖಲೆ ಮುರಿದು ಹಲವು ಭಾಗ್ಯಗಳನ್ನು ಜಾರಿಗೆ ತಂದು ಭಾಗ್ಯಗಳ ಸರದಾರ ಎಂಬ ಕೀರ್ತಿಗೆ ಭಾಜನರಾಗಿದ್ದರು. ಅಧಿಕಾರ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಪೂರ್ಣಾವಧಿ ಸಿಎಂ ನಾನೇ ಎಂದು ವೇದಿಕೆಗಳಲ್ಲಿ ಅಬ್ಬರಿಸುತ್ತಿದ್ದರು. ಆದರೆ ಯಾವುದೇ ಸಕಾರಣವಿಲ್ಲದೇ ಏಕಾಏಕಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿತ್ತು. ಸಿದ್ದು ಹೈಕಮಾಂಡ್ ನಡೆಗೆ ಯಾವುದೇ ಪ್ರತಿರೋಧ ತೋರಿಸದೇ ಸೈಲೆಂಟ್ ಆಗಿದ್ದರು.
ರಾಜ್ಯದ ಮಾಸ್ ಲೀಡರ್ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಕೆಳಗಿಳಿಸಿದ್ದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಬಹುದು ಅನ್ನುವ ನಿರೀಕ್ಷೆ ಎಲ್ಲರಲ್ಲಿತ್ತು. ವಿರೋಧ ಪಕ್ಷಗಳು ಕೂಡ ಜೋಶ್ ನಲ್ಲಿತ್ತು. ಆದರೆ ಡಿಕೆಶಿ ಪರ್ವ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳಿಗೆ ಶಾಕ್ ಮೇಲೆ ಶಾಕ್ ಕೊಟ್ಟರು. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಗೆ ಮುಟ್ಟಿ ನೋಡುವಷ್ಟು ಹೊಡೆತ ನೀಡಿದರು. ಡಿಕೆಶಿ ಡೇರಿಂಗ್ ನಡೆ, ಚಾಣಾಕ್ಷ ತಂತ್ರಗಾರಿಕೆ, ಹಿಂದುತ್ವ ಮಾಡೆಲ್, ಅಭಿವೃದ್ಧಿಯ ಕನಸು ಇವೆಲ್ಲವೂ ಡಿಕೆಶಿಗೆ ದೊಡ್ಡ ಇಮೇಜ್ ತಂದುಕೊಟ್ಟಿತು. ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ ಡಿಕೆಶಿ ಮನೆಮಾತಾದರು. ಡಿಕೆಶಿ ವಿರುದ್ಧ ನಿಂತು ಮಾತನಾಡುವ ಒಬ್ಬನೇ ಒಬ್ಬ ಗಂಡಸು ವಿರೋಧಪಕ್ಷದಲ್ಲಿಲ್ಲ ಅನ್ನುವ ವಾತಾವರಣ ಸೃಷ್ಟಿಯಾಗಿತ್ತು. 2028 ಕ್ಕೂ ಡಿಕೆಶಿ ಅವರದ್ದೇ ಚಕ್ರಾಧಿಪತ್ಯ ಅನ್ನುವಷ್ಟು ಮಟ್ಟಿಗೆ ಅವರ ಇಮೇಜ್ ವೃದ್ಧಿಯಾಗಿತ್ತು.

ಆದರೆ ಎಲ್ಲಾ ಬಣ್ಣವನ್ನು ಮಸಿ ನುಂಗಿತು ಅನ್ನುವಂತೆ ಕಳೆದೊಂದು ವಾರದಿಂದ ರಾಜ್ಯದಲ್ಲಿ ಧೂಳೆಬ್ಬಿಸಿದ ಸ್ಟಿಂಗ್ ಆಪರೇಷನ್ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿಯೊಬ್ಬರ ಸ್ಟಿಂಗ್ ವಿಡಿಯೋ ಬಯಲಾಗುವ ಮೂಲಕ ಕಾಂಗ್ರೆಸ್ಸಿನಲ್ಲೇ ತಳಮಳ ಸೃಷ್ಟಿಯಾಗಿದೆ. ಇಮೇಜ್ ಬಿಲ್ಡಪ್ ಮಾಡಿಕೊಂಡಿದ್ದ ಡಿಕೆಶಿ ಗೆ ಈ ವಿಚಾರ ದೊಡ್ಡ ಹೊಡೆತ ನೀಡಿದೆ. ಧಂ ಇಲ್ಲದೆ ನಿದ್ರಾವಸ್ತೆಯಲ್ಲಿದ್ದ ವಿರೋಧ ಪಕ್ಷಕ್ಕೆ ಚಿಗಿತುಕೊಳ್ಳಲು ದೊಡ್ಡ ಅವಕಾಶ ಸಿಕ್ಕಿದಂತಾಗಿದೆ. ಬಿಜೆಪಿ ಸೈಲೆಂಟ್ ಮೂಡ್ ನಲ್ಲಿದ್ದರೆ, ಜೆಡಿಎಸ್ ನ ಕುಮಾರಸ್ವಾಮಿ ಅಬ್ಬರದ ಎಂಟ್ರಿ ಕೊಟ್ಟಿದ್ದಾರೆ. ಡಿಕೆಶಿ ಅವರಿಗೆ ತಾಂಟುವ ನಾಯಕರಿದ್ದರೆ ಅದು ರಾಜ್ಯದಲ್ಲಿ ಕುಮಾರಸ್ವಾಮಿ ಒಬ್ಬರೇ ಅನ್ನುವ ರೀತಿಯ ಬಿಲ್ಡಪ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯಡಿಯೂರಪ್ಪ ನಂತರ ಕಾಂಗ್ರೆಸ್ ಎದುರಿಸುವ ಮಾಸ್ ಲೀಡರ್ ಬಿಜೆಪಿಯಲ್ಲಿಲ್ಲ . 2028 ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಕಾ ಅಂತಿದ್ದ ಬಿಜೆಪಿ ಕಾರ್ಯಕರ್ತರು ಇದೀಗ ಕುಮಾರಸ್ವಾಮಿ ಅವರ ಎಂಟ್ರಿಯಿಂದಾಗಿ ಮತ್ತೆ ಅಧಿಕಾರದ ಕನಸು ಕಾಣಲು ಆರಂಭಿಸಿದ್ದಾರೆ. ಷಡ್ಯಂತ್ರದ ಸ್ಟಿಂಗ್ ಆಪರೇಶನ್ ಹಿಂದೆ ಇರುವ ಒಬ್ಬೊಬ್ಬ ಕಾಂಗ್ರೆಸ್ ನಾಯಕರ ಜಾತಕ ಬಿಡಿಸುತ್ತಿದ್ದಾರೆ ದಿನಕ್ಕೊಂದು ಪತ್ರಿಕಾಗೋಷ್ಠಿ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರು, ಸಚಿವರು, ಮುಖಂಡರು ಮೀಡಿಯಾ ಕಣ್ಣುತಪ್ಪಿಸಿ ತೆರಳುತ್ತಿದ್ದಾರೆ. ಟಿವಿ ಡಿಬೇಟ್ ಗಳಿಗೆ ಕಾಂಗ್ರೆಸ್ ವಕ್ತಾರರನ್ನು ಕಳುಹಿಸದೆ ನುಣುಚಿಕೊಳ್ಳುತ್ತಿದ್ದಾರೆ. ಒಂದು ಸ್ಟಿಂಗ್ ವಿಡಿಯೋ ಕಾಂಗ್ರೆಸ್ಸಿನ ಜಂಘಾ ಬಲವನ್ನು ಹುದುಗಿಸಿದೆ. ಏನೂ ಪ್ರತಿಕ್ರಿಯೆ ನೀಡಬೇಕೆಂದು ತೋಚದೆ ರಾಜ್ಯ ಸರಕಾರ ಸಂಕಷ್ಟಕ್ಕೆ ಸಿಲುಕಿದೆ. ಕಾಂಗ್ರೆಸ್ ಸರಕಾರವನ್ನು ಬೆಂಡೆತ್ತುವ ಮೂಲಕ ಕುಮಾರಸ್ವಾಮಿ ಪವರ್ ಫುಲ್ ಬ್ಯಾಟ್ಸ್ ಮ್ಯಾನ್ ಆಗಿ ಮಿಂಚುತ್ತಿದ್ದಾರೆ.
ಕುರುಬ ಸಮುದಾಯದ ಅನಭಿಷಿಕ್ತ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಅವರದೇ ಪಕ್ಷದವರು ಷಡ್ಯಂತ್ರ ರೂಪಿಸಿದ ಬಗ್ಗೆ ಆ ಸಮುದಾಯದಲ್ಲಿ ದೊಡ್ಡ ಅತೃಪ್ತಿ ಎದ್ದಿದೆ. ಜೊತೆಗೆ ಅಹಿಂದ ಸಮುದಾಯದಲ್ಲೂ ಅಸಹನೆ ಎದ್ದೇಳುತ್ತಿದೆ. ಡಿಕೆಶಿ ಸಿಎಂ ಆಗಿದ್ದರೂ ಒಕ್ಕಲಿಗ ಸಮುದಾಯದಲ್ಲಿ ಈಗಲೂ ಕುಮಾರಸ್ವಾಮಿ ಯವರಷ್ಟು ಹಿಡಿತ ಹೊಂದಿಲ್ಲ. ಕಳೆದ ಕೆಲ ತಿಂಗಳುಗಳಿಂದ ಒಕ್ಕಲಿಗ ಸಮುದಾಯದಲ್ಲಿ ಪವರ್ ಫುಲ್ ಹಿಡಿತ ಹೊಂದಲು ಪ್ರಯತ್ನಿಸುತ್ತಿರುವ ಹೊತ್ತಿಗೆ ಕುಮಾರಸ್ವಾಮಿ ಅವರ ದಿಢೀರ್ ಎಂಟ್ರಿ ಡಿಕೆಶಿ ಗೆ ಮರ್ಮಾಘಾತ ಕೊಟ್ಟಿದೆ. ಒಕ್ಕಲಿಗ ಸಮುದಾಯ ಈಗಲೂ ದೇವೆಗೌಡರ ಕುಟುಂಬವನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ..

ಸ್ಟಿಂಗ್ ವಿಡಿಯೋ ಹಿಂದೆ ಕಾಂಗ್ರೆಸ್ಸಿಗರದ್ದೇ ಕೈವಾಡವಿದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಈ ಸ್ಟಿಂಗ್ ವಿಡಿಯೋ ಪ್ರಮುಖ ಕಾರಣ. ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ಅವರನ್ನು ಪದವಿಯಿಂದ ಕೆಳಗಿಳಿಸಲಾಯಿತು. ಅವರ ವಿರುದ್ಧ ದೊಡ್ಡ ಷಡ್ಯಂತ್ರ ನಡೆಸಲಾಯಿತು. ಈ ಸ್ಟಿಂಗ್ ವಿಡಿಯೋ ದ ಮಾಸ್ಟರ್ ಮೈಂಡ್ ಕಾಂಗ್ರೆಸ್ ಪಕ್ಷದ ಮಹಾನಾಯಕರೇ ಎಂದು ಓಪನ್ನಾಗಿ ಕುಮಾರಸ್ವಾಮಿ ಹಂತ ಹಂತವಾಗಿ ಬಿಟ್ಟ ಬಾಣಕ್ಕೆ ಕಾಂಗ್ರೆಸ್ ನ ಒಂದು ಬಣ ಶೇಕ್ ಆಗಿ ಹೋಗಿದೆ. ಕುಮಾರಸ್ವಾಮಿ ಗೆ ಕೌಂಟರ್ ಕೊಡಲು ಕಾಂಗ್ರೆಸ್ ನಲ್ಲಿ ಯಾರೂ ಮುಂದೆ ಬರುತ್ತಿಲ್ಲ. ಇದೇ ಸುವರ್ಣಾವಕಾಶ ಎಂದು ಕುಮಾರಸ್ವಾಮಿ ದಿನಕ್ಕೊಂದು ರೀತಿಯ ದಾಖಲೆ ಬಿಡುಗಡೆ ಮಾಡುತ್ತಾ ಸ್ಟಿಂಗ್ ಆಪರೇಶನ್ ಷಡ್ಯಂತ್ರ ಜೀವಂತ ಇಡುವಲ್ಲಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಮೌನ ನಡೆ ಸಾರ್ವಜನಿಕವಾಗಿ ಕಾಂಗ್ರೆಸ್ ಬಗ್ಗೆ ಅನುಮಾನ ಹೆಚ್ಚಾಗಲು ಕಾರಣವಾಗಿದೆ.
ಇತ್ತ ಅಹಿಂದ ನಾಯಕ ಸಿದ್ದರಾಮಯ್ಯ ವಿರುದ್ಧ ಸ್ವಪಕ್ಷದಲ್ಲೇ ಷಡ್ಯಂತ್ರ ನಡೆದಿದೆ ಅನ್ನುವ ಮಾತುಗಳು ಹರಿದಾಡತೊಡಗಿದೆ. ಸಿದ್ದರಾಮಯ್ಯ ಅವರನ್ನು ಖೆಡ್ಡಾಕ್ಕೆ ಬೀಳಿಸಿದ್ದು ಅವರದ್ದೇ ಪಕ್ಷದ ಮಹಾನಾಯಕರು ಅನ್ನುವ ಗುಸು ಗುಸು ಆರಂಭವಾಗಿದೆ. ಇದು ಒಟ್ಟಾರೆ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದ ಅಹಿಂದ ವರ್ಗವನ್ನು ಕೆರಳಿಸುವಂತೆ ಮಾಡಿದೆ. ದಿನಕಳೆದಂತೆ ಸಿದ್ದರಾಮಯ್ಯ ಬಗ್ಗೆ ಸಿಂಪತಿ ವಾತಾವರಣ ಸೃಷ್ಟಿಯಾಗುತ್ತಿದೆ. ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ಪದವಿಯಿಂದ ಕೆಳಗಿಳಿಸಲಾಗಿದೆ ಅನ್ನುವುದು ಹರಡತೊಡಗಿದೆ. ಇತ್ತ ಸೃಷ್ಟೀಕರಣ ನೀಡಬೇಕಾದ ಸರಕಾರದ ಮಂದಿ ಮೌನಕ್ಕೆ ಶರಣಾಗಿರುವುದು ಅನುಮಾನ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಎದುರಾಳಿಯೇ ಇಲ್ಲ ಅನ್ನುವ ರೀತಿಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಕುಮಾರಸ್ವಾಮಿ ತಾಂಟುವ ನಡೆ ಹುಬ್ಬೇರಿಸುವಂತೆ ಮಾಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದ ಅಹಿಂದ ಮತಗಳು ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಅನ್ನುವ ಕಾರಣಕ್ಕೆ ಕಾಂಗ್ರೆಸ್ ಕೈ ತಪ್ಪುವ ಭೀತಿ ಎದುರಾಗಿದೆ. ಒಂದು ವೇಳೆ ಹಾಗೇನಾದರೂ ಆದರೆ 2028 ರಲ್ಲಿ ಕಾಂಗ್ರೆಸ್ ಕತೆ ಗೋವಿಂದ! ಇತ್ತ ಎಸ್ ಐ ಆರ್ ಕೂಡ ಕಾಂಗ್ರೆಸ್ ಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ನಿರೀಕ್ಷಿತ ಮಟ್ಟದ ಸ್ಥಾನ ಪಡೆಯುವುದು ಅನುಮಾನ. ಇದರ ಜೊತೆಗೆ ಸಿದ್ದರಾಮಯ್ಯ ಪಾಳೆಯದ ಮತಗಳು ಜೆಡಿಎಸ್ ಪಾಲಾದರೆ ರಾಜ್ಯದಲ್ಲಿ ಮತ್ತೊಮ್ಮೆ ಮೈತ್ರಿ ಸರಕಾರ ಖಚಿತ. ಸಂಕಷ್ಟದ ಕಾಲದಲ್ಲಿ ಸಿದ್ದರಾಮಯ್ಯ ಪರ ಕುಮಾರಸ್ವಾಮಿ ಬೆಂಬಲಕ್ಕೆ ನಿಂತರು ಅನ್ನುವ ಕಾರಣಕ್ಕೆ ಅವರ ಸಮುದಾಯವೇನೂ ಕಾಂಗ್ರೆಸ್ ವಿರುದ್ಧ ನಿಂತರೆ ಕಾಂಗ್ರೆಸ್ಸಿಗೆ ದೊಡ್ಡ ಗಂಡಾಂತರ ಖಚಿತ. ಈ ನಡುವೆ ಕುಮಾರಸ್ವಾಮಿ 2028 ರಲ್ಲಿ ಮೈತ್ರಿಕೂಟದ ಸಿಎಂ ಆದರೂ ಅಚ್ಚರಿಯಿಲ್ಲ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಮತ್ತೊಮ್ಮೆ ಡಿಕೆಶಿ ಸಿಎಂ ಆಗುವ ಚಾನ್ಸ್ ಕೂಡ ಕಡಿಮೆ. ಸಿದ್ದರಾಮಯ್ಯ ಬಣ ಹೊಸ ಹೆಸರು ತೇಲಿಬಿಟ್ಟು ಠಕ್ಕರ್ ಕೊಡುವ ಸಾಧ್ಯತೆ ಕೂಡ ಇದೆ.
ಕಾಂಗ್ರೆಸ್ ಗೆ ಎದುರಾಳಿಯೇ ಇಲ್ಲದೆ ಅನಾಯಾಸವಾಗಿ ಗೆಲ್ಲುವ ಅವಕಾಶವಿದ್ದ ರಾಜ್ಯದಲ್ಲಿ ‘ಪಟ್ಟ’ ಕ್ಕಾಗಿ ಅದೇ ಪಕ್ಷದವರು ನಡೆಸಿದ ಸ್ಟಿಂಗ್ ಷಡ್ಯಂತ್ರ ತಾವೇ ತೋಡಿದ ಹಳ್ಳಕ್ಕೆ ತಾವೇ ಬೀಳುವ ಪರಿಸ್ಥಿತಿ ಬಂದಿರುವುದಂತೂ ಸತ್ಯ.
