ಸರ್ಕಾರದ ಜಾಗ, ಜನರ ತೆರಿಗೆ ಹಣ ನುಂಗಿ “ನಾವು RTI ವ್ಯಾಪ್ತಿಗೆ ಬರಲ್ಲ” ಎಂದ ಭ್ರಷ್ಟ ಸಂಘಗಳಿಗೆ ಹೈಕೋರ್ಟ್ ಚಾಟಿ ಏಟು! ಕಲಂ 2(h) ಅಡಿಯಲ್ಲಿ ಬಿದ್ದಿತು ಕಾನೂನಿನ ಬ್ರಹ್ಮಾಸ್ತ್ರ!
✍️. Arjun Mule.
ಸರ್ಕಾರದಿಂದ ಉಚಿತ ಜಮೀನು, ಕೋಟಿಗಟ್ಟಲೆ ಅನುದಾನ ಮತ್ತು ಸವಲತ್ತುಗಳನ್ನು ಪಡೆದುಕೊಂಡು, ಜನಸಾಮಾನ್ಯರು ಮಾಹಿತಿ ಹಕ್ಕು ಕಾಯ್ದೆಯಡಿ (RTI Act, 2005) ಲೆಕ್ಕ ಕೇಳಿದಾಗ ಮಾತ್ರ “ನಾವು ಖಾಸಗಿ ಸಂಘಗಳು, ನಾವು ಆರ್ಟಿಐ ಅಡಿಯಲ್ಲಿ ಬರುವುದಿಲ್ಲ” ಎಂದು ದುರಹಂಕಾರದಿಂದ ಉತ್ತರಿಸುತ್ತಿದ್ದ ಸಂಘ-ಸಂಸ್ಥೆಗಳ ಕಳ್ಳಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ‘ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960’ (Karnataka Societies Registration Act, 1960) ಅಥವಾ ‘ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959’ರ ಅಡಿಯಲ್ಲಿ ನೋಂದಣಿಯಾಗಿರುವ ನೆಪ ಹೇಳಿಕೊಂಡು, ಸಾರ್ವಜನಿಕರ ಬೆವರಿನ ತೆರಿಗೆ ಹಣದಲ್ಲಿ ನಡೆಯುವ ಈ ಸಂಸ್ಥೆಗಳು ಇಷ್ಟೊಂದು ದಿನ ಕಾನೂನಿನ ಕಣ್ಣಿಗೆ ಮಣ್ಣು ಎರಚಿ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತವನ್ನು ಮುಚ್ಚಿಡುತ್ತಿದ್ದವು. ಸಾಮಾನ್ಯ ಪ್ರಜೆಯೊಬ್ಬ ತನ್ನ ಹಕ್ಕಿನ ಮಾಹಿತಿ ಕೇಳಿದರೆ ತಾಂತ್ರಿಕ ನೆಪ ಹೇಳಿ ಅರ್ಜಿಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದ ಭ್ರಷ್ಟ ಅಧಿಕಾರಿಗಳ ದರ್ಪ ಈಗ ನ್ಯಾಯಾಲಯದ ಮುಂದೆ ನುಚ್ಚುನೂರಾಗಿದೆ.
ಈ ಭ್ರಷ್ಟ ವ್ಯವಸ್ಥೆಯ ಮುಖವಾಡ ಕಳಚಿರುವ ಕರ್ನಾಟಕ ಹೈಕೋರ್ಟ್, ಮಾಹಿತಿ ಹಕ್ಕು ಕಾಯ್ದೆ 2005 ರ ಕಲಂ 2(h) (Section 2(h)) ಅಡಿಯಲ್ಲಿ ‘ಸಾರ್ವಜನಿಕ ಪ್ರಾಧಿಕಾರ’ದ (Public Authority) ವ್ಯಾಖ್ಯಾನವನ್ನು ಇಂಚಿಂಚಾಗಿ ಬಿಡಿಸಿಟ್ಟಿದೆ.

ವಿಶೇಷವಾಗಿ ಕಲಂ 2(h), ಉಪ-ಕಲಂ (d), ಖಂಡ (i) ಮತ್ತು (ii) (Section 2(h)(d)(i) & (ii)) ಪ್ರಕಾರ, ಸರ್ಕಾರದ ಆದೇಶದಡಿ ಸ್ಥಾಪಿತವಾದ, ಅಧಿಕಾರಿಗಳ ನಿಯಂತ್ರಣದಲ್ಲಿರುವ ಅಥವಾ ಸರ್ಕಾರದಿಂದ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ‘ಗಣನೀಯ ಆರ್ಥಿಕ ನೆರವು’ (Substantial Financing) ಪಡೆಯುವ ಯಾವುದೇ ಸಂಘ ಅಥವಾ ಸರ್ಕಾರೇತರ ಸಂಸ್ಥೆ (NGO) ಕಡ್ಡಾಯವಾಗಿ ಆರ್ಟಿಐ ವ್ಯಾಪ್ತಿಗೆ ಬರುತ್ತದೆ ಎಂದು ಕೋರ್ಟ್ ಖಡಕ್ ತೀರ್ಪು ನೀಡಿದೆ. ‘ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಯೋಜನಾ ನಿರ್ದೇಶಕರು, ನಿರ್ಮಿತ ಕೇಂದ್ರ ವಿರುದ್ಧ ರಾಜ್ಯ ಮಾಹಿತಿ ಆಯುಕ್ತರು’ (PIO and Project Director, Nirmithi Kendra vs. State Information Commissioner – 2025:KHC:30716) ಪ್ರಕರಣದಲ್ಲಿ ಮಾಹಿತಿ ಮುಚ್ಚಿಟ್ಟ ಅಧಿಕಾರಿಗೆ ಕಲಂ 20(1) (Section 20(1)) ಅಡಿಯಲ್ಲಿ ಬರೋಬ್ಬರಿ 50,000 ರೂ. ದಂಡ ವಿಧಿಸಿರುವ ಹೈಕೋರ್ಟ್, ಇತ್ತೀಚಿನ ‘ಸೆಂಚುರಿ ಕ್ಲಬ್ ವಿರುದ್ಧ ಎಸ್. ಉಮಾಮಪತಿ’ (Century Club vs. S. Umapathy – WA No. 1351/2025, ತೀರ್ಪು ದಿನಾಂಕ: 10-07-2026) ಹಾಗೂ ಸುಪ್ರೀಂ ಕೋರ್ಟ್ನ ‘ಡಿ.ಎ.ವಿ ಕಾಲೇಜು ಟ್ರಸ್ಟ್ ವಿರುದ್ಧ ಡೈರೆಕ್ಟರ್ ಆಫ್ ಪಬ್ಲಿಕ್ ಇನ್ಸ್ಟ್ರಕ್ಷನ್ಸ್’ (D.A.V. College Trust vs. Director of Public Instructions – (2019) 9 SCC 185) ತೀರ್ಪುಗಳ ಅನ್ವಯ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಭೂಮಿ ಪಡೆದಿರುವುದೂ ಕೂಡ ‘ಗಣನೀಯ ಆರ್ಥಿಕ ನೆರವು’ ಎಂದೇ ಪರಿಗಣಿಸಲ್ಪಡುತ್ತದೆ ಎಂದು ಸ್ಪಷ್ಟಪಡಿಸಿದೆ.
ಈ ತೀರ್ಪುಗಳು ಕರ್ನಾಟಕದ ಪ್ರತಿಯೊಬ್ಬ ಪ್ರಜೆಗೂ ಮತ್ತು ಆರ್ಟಿಐ ಕಾರ್ಯಕರ್ತರಿಗೂ ಸಿಕ್ಕಿರುವ ಕಾನೂನಿನ ಬ್ರಹ್ಮಾಸ್ತ್ರವಾಗಿದೆ. ಕೇವಲ ಅರ್ಜಿ ಹಾಕಿ ದಾಖಲೆ ಪಡೆಯುವುದಷ್ಟೇ ಅಲ್ಲ, ಇಂತಹ ಅನುದಾನಿತ ಸಂಘಗಳು ಆರ್ಟಿಐ ಕಾಯ್ದೆಯ ಕಲಂ 4(1)(b) (Section 4(1)(b)) ಅಡಿಯಲ್ಲಿ ತಮ್ಮ ಬಜೆಟ್, ಅನುದಾನ, ಫಲಾನುಭವಿಗಳ ಪಟ್ಟಿ ಮತ್ತು ಟೆಂಡರ್ ವಿವರಗಳನ್ನು ಸ್ವಯಂಪ್ರೇರಿತವಾಗಿ (Suo-motu disclosure) ಸಾರ್ವಜನಿಕರಿಗೆ ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ನಿಮ್ಮ ಊರಿನ ಅನುದಾನಿತ ಸಂಘಗಳು, ನಿರ್ಮಿತ ಕೇಂದ್ರಗಳು ಅಥವಾ ಸರ್ಕಾರಿ ಭೂಮಿಯಲ್ಲಿ ನಡೆಯುತ್ತಿರುವ ಸಂಸ್ಥೆಗಳಲ್ಲಿ ಕೋಟಿಗಟ್ಟಲೆ ಹಣ ಎಲ್ಲಿ ಹೋಯಿತು ಎಂದು ಕಲಂ 2(j) (Section 2(j)) ಅಡಿಯಲ್ಲಿ ಕಡತಗಳನ್ನು ಖುದ್ದಾಗಿ ಪರಿಶೀಲಿಸುವ (Inspection of Records) ಮತ್ತು ದೃಢೀಕೃತ ಪ್ರತಿಗಳನ್ನು ಪಡೆಯುವ ಸಂಪೂರ್ಣ ಅಧಿಕಾರ ಈಗ ನಿಮ್ಮ ಕೈಯಲ್ಲಿದೆ. ಇನ್ಮುಂದೆ ಯಾವುದಾದರೂ ಸಂಘದ ಮುಖ್ಯಸ್ಥರು ಮಾಹಿತಿ ನೀಡಲು ನಿರಾಕರಿಸಿದರೆ ಕಲಂ 20(1) ರ ಅಡಿಯಲ್ಲಿ ದಿನಕ್ಕೆ 250 ರೂ.ಗಳಂತೆ ಗರಿಷ್ಠ 25,000 ರೂ. ದಂಡ ಹಾಗೂ ಕಲಂ 20(2) ರ ಅಡಿಯಲ್ಲಿ ಇಲಾಖಾ ಶಿಸ್ತು ಕ್ರಮದ ಶಿಫಾರಸನ್ನು ಎದುರಿಸಬೇಕಾಗುತ್ತದೆ.
ಇನ್ನು ಇಲ್ಲಿಯೂ ಒಂದು ಬಹುದೊಡ್ಡ ಕಾನೂನು ಒಳಮರ್ಮವಿದೆ—ಒಂದು ವೇಳೆ ಯಾವುದೇ ಖಾಸಗಿ ಸಹಕಾರಿ ಸಂಘವು ತಾನು ಸರ್ಕಾರದಿಂದ ಒಂದು ರೂಪಾಯಿಯನ್ನೂ ಅನುದಾನ ಪಡೆದಿಲ್ಲ ಎಂದು ತಪ್ಪಿಸಿಕೊಳ್ಳಲು ನೋಡಿದರೂ, ಭ್ರಷ್ಟರನ್ನು ಬಿಡುವ ಪ್ರಶ್ನೆಯೇ ಇಲ್ಲ! ಸುಪ್ರೀಂ ಕೋರ್ಟ್ನ ‘ತಲಪ್ಪಲಂ ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್ ವಿರುದ್ಧ ಕೇರಳ ರಾಜ್ಯ’ (Thalappalam Service Coop. Bank Ltd. vs. State of Kerala – (2013) 16 SCC 82) ಮತ್ತು ಕರ್ನಾಟಕ ಹೈಕೋರ್ಟ್ನ ‘ದತ್ತಪ್ರಸಾದ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ವಿರುದ್ಧ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು’ (AIR 2009 Kant 1) ತೀರ್ಪಿನ ಪ್ರಕಾರ, ಅನುದಾನ ರಹಿತ ಸಂಘಗಳು ನೇರವಾಗಿ ಕಲಂ 2(h) ಅಡಿ ಬರದಿದ್ದರೂ, ಆರ್ಟಿಐ ಕಾಯ್ದೆಯ ಕಲಂ 2(f) (Section 2(f) – ‘ಮಾಹಿತಿ’ಯ ವ್ಯಾಖ್ಯಾನ) ಅನ್ನು ಅಸ್ತ್ರವಾಗಿ ಬಳಸಬಹುದು. ಕಲಂ 2(f) ಪ್ರಕಾರ, ಸಾರ್ವಜನಿಕ ಪ್ರಾಧಿಕಾರವಾದ ಸಹಕಾರಿ ಸಂಘಗಳ ನಿಬಂಧಕರು (Registrar of Co-operative Societies – ARCS/DRCS/JRCS) ‘ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959’ರ ಅಡಿಯಲ್ಲಿ ತಮ್ಮ ಮೇಲ್ವಿಚಾರಣಾ ಅಧಿಕಾರ ಬಳಸಿ ಆ ಖಾಸಗಿ ಸಂಘದಿಂದ ಯಾವುದೇ ಆಡಿಟ್ ವರದಿ, ಲೆಕ್ಕಪತ್ರ ಅಥವಾ ತನಿಖಾ ದಾಖಲೆಗಳನ್ನು ತರಿಸಿಕೊಂಡು ನಾಗರಿಕರಿಗೆ ನೀಡಲೇಬೇಕು! ಕಾನೂನಿನ ಈ ಪ್ರಬಲ ಕಲಂಗಳು ಮತ್ತು ನ್ಯಾಯಾಲಯದ ತೀರ್ಪುಗಳ ಬಗ್ಗೆ ಜನಸಾಮಾನ್ಯರಿಗೆ ಅರಿವಿಲ್ಲ ಎಂಬುದೇ ಭ್ರಷ್ಟರ ಬಂಡವಾಳವಾಗಿತ್ತು; ಆದ್ದರಿಂದ ಈ ಮಹತ್ವದ ಕಾನೂನು ಮಾಹಿತಿಯನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಶೇರ್ ಮಾಡಿ, ಭ್ರಷ್ಟ ಸಂಘಗಳ ಕಳ್ಳಾಟಕ್ಕೆ ಇಂದೇ ಇತಿಶ್ರೀ ಹಾಡೋಣ!
