‘ಕೈ’ ಹಿಡಿದ ಮುಸಲ್ಮಾನರಿಗೆ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ‘ಕೈ’ ಹಿಡಿಯುತ್ತಾ..? ‘ಕೈ’ ಕೊಡುತ್ತಾ.!

ಕರಾವಳಿ

ಬಂಟ, ಬಿಲ್ಲವ ಆಯಿತು, ಬ್ಯಾರಿಗಳಿಗೂ ಸಿಗಲಿ ಅವಕಾಶ

ದೇಶ ಕಾತುರದಿಂದ ಕಾಯುತ್ತಿರುವ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೇನೂ ಕೆಲವೇ ಕೆಲವು ದಿನಗಳು ಬಾಕಿ ಇವೆ. ಇದರ ನಡುವೆಯೇ ಶಾಸಕರಿಂದ ಆಯ್ಕೆಯಾಗುವ ವಿಧಾನಪರಿಷತ್ ಚುನಾವಣೆ ಜೂನ್ ತಿಂಗಳಲ್ಲೇ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಭೂತಪೂರ್ವ ವಿಜಯ ದಾಖಲಿಸಿರುವುದರಿಂದ 12 ಸ್ಥಾನಗಳ ಪೈಕಿ 7 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಕಾಂಗ್ರೆಸ್ ಪಕ್ಷದಲ್ಲಿ ವಿಧಾನಪರಿಷತ್ ಚುನಾವಣೆ ಬಗ್ಗೆ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜನಸಂಖ್ಯೆ ಅನುಗುಣವಾಗಿ ಪ್ರಾತಿನಿಧ್ಯ ಏನೂ ಕೊಡಲಿಲ್ಲ. ಸಚಿವ ಸಂಪುಟದಲ್ಲೂ ಮುಸ್ಲಿಂ ಶಾಸಕರಿಗೆ ಭರಪೂರ ಅಧಿಕಾರವನ್ನು ನೀಡಲಿಲ್ಲ. ಕರಾವಳಿಯ ಖಾದರ್ ರಿಗೆ ಸ್ಪೀಕರ್ ಹುದ್ದೆ ನೀಡಿ ಮುಸ್ಲಿಂ ಸಮುದಾಯಕ್ಕೆ ದೊಡ್ಡ ಹುದ್ದೆ ನೀಡಿರುವುದಾಗಿ ಕಾಂಗ್ರೆಸ್ ಜಂಭ ಕೊಚ್ಚುಕೊಳ್ಳುತ್ತಿದೆ ಅಷ್ಟೇ. ಜಮೀರ್ ಅಹಮ್ಮದ್, ರಹಮಾನ್ ಖಾನ್ ರಿಗೆ ಮಂತ್ರಿ ಹುದ್ದೆ ನೀಡಿ ಕೈ ತೊಳೆದುಕೊಂಡಿದೆ ಅಷ್ಟೇ. ಈ ಮಧ್ಯೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಓರ್ವ ಮುಸ್ಲಿಂ ಅಭ್ಯರ್ಥಿಗೆ ಮಾತ್ರ ಅವಕಾಶ ನೀಡಿದೆ. ಅದು ಗೆದ್ದರೆ ಸಮುದಾಯಕ್ಕೆ ಒಂದು ಲಾಭ ಅಷ್ಟೇ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಹೋಲ್ ಸೇಲ್ ಆಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ಬಿಜೆಪಿ ಆಡಳಿತದಲ್ಲಿ ನಡೆದಿದ್ದ ಬಾಂಗ್ ವಿವಾದ, ಹಲಾಲ್-ಜಟ್ಕಾ, ಹಿಜಾಬ್ ಹಾಗೂ ಕೋಮು ಧ್ರುವೀಕರಣದಿಂದ ಬೇಸೆತ್ತು ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಯಾವುದೇ ಬೇಡಿಕೆ ಇಡದೆ ಸಂಪೂರ್ಣವಾಗಿ ಬೆಂಬಲಿಸಿತ್ತು. ಸಮುದಾಯದ ಶೇಕಡಾ 95 ರಷ್ಟು ಮತಗಳು ಕಾಂಗ್ರೆಸ್ ಪರವಾಗಿ ಬಿದ್ದಿದ್ದವು. ಬಹುಶಃ ರಾಜ್ಯದ ಯಾವುದೇ ಜಾತಿ, ಸಮುದಾಯದ ಮತಗಳು ಇಷ್ಟೊಂದು ಕರಾರುವಾಕ್ಕಾಗಿ ಪಕ್ಷವನ್ನು ಕೈ ಹಿಡಿಯಲಿಲ್ಲ. ಆದರೂ ಕಾಂಗ್ರೆಸ್ ಪಕ್ಷ ಸಮುದಾಯಕ್ಕೆ ಕೊಟ್ಟಿದ್ದು ಕೇವಲ ಚೊಂಬು ಮಾತ್ರ. ಇನ್ನು ನಿಗಮ ಮಂಡಳಿಗಳ ಸಣ್ಣ ಪುಟ್ಟ ಸದಸ್ಯ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದರೆ, ಪ್ರಭಾವಿ ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆ ಇತರ ಜಾತಿ, ಸಮುದಾಯದ ಪಾಲಾಗಿದೆ.

ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಇತರ ಜಾತಿ, ಸಮುದಾಯಗಳು ಮುಸ್ಲಿಂ ಅಭ್ಯರ್ಥಿಗಳಿಗೆ ಮತ ಹಾಕುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಸಮುದಾಯಕ್ಕೆ ಟಿಕೆಟ್ ನೀಡದ ಬಗ್ಗೆ ಸಮಜಾಯಿಷಿ ನೀಡುತ್ತಾರೆ. ಆದರೆ ಇತರ ಜಾತಿ, ಸಮುದಾಯದ ನಾಯಕರು ಕಾಂಗ್ರೆಸ್ ಪಕ್ಷದ ಚಿಹ್ನೆಯ ಅಡಿಯಲ್ಲಿ ಚುನಾವಣೆಗೆ ನಿಂತರೆ ಮುಸ್ಲಿಂ ಸಮುದಾಯ ತಮ್ಮ ಸಮುದಾಯದ ವ್ಯಕ್ತಿಯಲ್ಲ ಎಂದು ಮತ ನೀಡದೆ ಸುಮ್ಮನೆ ಕೂರುವುದಿಲ್ಲ. ಹೋಲ್ ಸೇಲ್ ಆಗಿಯೇ ಇತರ ಸಮುದಾಯದ ಅಭ್ಯರ್ಥಿಗಳಿಗೆ ಮತ ನೀಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಪಕ್ಷ ಓಟು ಒತ್ತುವ ಮೆಷಿನ್ ಆಗಿ ನೋಡುತ್ತಿದೆಯೇ ವಿನಹ ಅಧಿಕಾರ ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಿದೆ. ಒಂದು ವೇಳೆ ಸಮುದಾಯ ಸಂಘಟಿತರಾಗಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದರೆ ಅಭ್ಯರ್ಥಿಗಳು ಇಡಿಗಂಟು ಇಲ್ಲದೇ ಸೋಲುವುದು ಶತಸಿದ್ಧ.

ಈ ಬಾರಿ ಕರಾವಳಿಗೆ ಕನಿಷ್ಠ ಒಂದು ವಿಧಾನಪರಿಷತ್ ಸ್ಥಾನ ಸಿಗುವುದು ಪಕ್ಕಾ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಹರೀಶ್ ಕುಮಾರ್ ಅವಧಿ ಪೂರ್ಣಗೊಂಡಿದ್ದು, ಆ ಸ್ಥಾನಕ್ಕೆ ಕರಾವಳಿಯ ಒಬ್ಬರಿಗೆ ಅವಕಾಶ ಕೊಡುವುದು ನಿಶ್ಚಿತ. ಬಿಲ್ಲವ ಕೋಟಾ ಅಡಿಯಲ್ಲಿ ಹರೀಶ್ ಕುಮಾರ್ ಅವಕಾಶ ಗಿಟ್ಟಿಸಿಕೊಂಡಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದುಕೊಂಡು ಸತತ ಸೋಲು ಕಾಂಗ್ರೆಸ್ ಪಕ್ಷಕ್ಕೆ ದಕ್ಕಿದರೂ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಿ ಪುರಸ್ಕರಿಸಿತ್ತು. ಇತ್ತ ಬಂಟ ಸಮುದಾಯದಿಂದ ಮಂಜುನಾಥ ಭಂಡಾರಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಬಿಲ್ಲವ ಸಮುದಾಯಕ್ಕೆ ನೀಡಲಾಗಿತ್ತು. ಇಲ್ಲಿಯೂ ಮುಸ್ಲಿಮರು ಸಂಘಟಿತರಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಇದೀಗ ಮತ್ತೆ ವಿಧಾನಪರಿಷತ್ ಚುನಾವಣೆಯಲ್ಲಿ ಬಂಟ, ಬಿಲ್ಲವರಿಗೆ ಕಾಂಗ್ರೆಸ್ ಮಣೆ ಹಾಕಿದರೆ ಅದು ಸಮುದಾಯಕ್ಕೆ ನೀಡುವ ದೊಡ್ಡ ಚೊಂಬು ಅನ್ನುವುದು ನೂರಕ್ಕೆ ನೂರು ಸತ್ಯ. ಕಾಂಗ್ರೆಸ್ ಪಕ್ಷದಲ್ಲೂ ಕಳೆದ ಹಲವಾರು ವರ್ಷಗಳಿಂದ ನಿಷ್ಠಾವಂತರಾಗಿ ಪಕ್ಷದಲ್ಲಿ ಅಹನಿರ್ಶಿಯಾಗಿ ದುಡಿಯುವ ಮುಸ್ಲಿಂ ನಾಯಕರಿದ್ದಾರೆ. ಎಂ.ಎಸ್. ಮುಹಮ್ಮದ್ ರಿಂದ ಹಿಡಿದು ಇನಾಯತ್ ಅಲಿ ಯವರೆಗೂ ಹತ್ತಾರು ನಾಯಕರು ಪಕ್ಷಕ್ಕಾಗಿ ಬೆವರು ಹರಿಸುತ್ತಿದ್ದಾರೆ. ಅಂತಹ ನಾಯಕರನ್ನು ಗುರುತಿಸಿ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿದರೆ ಸಮುದಾಯ ಇನ್ನಷ್ಟು ಸಂಘಟಿತರಾಗಿ ಪಕ್ಷದ ಪರ ನಿಲ್ಲಬಹುದು.

ಅದರಲ್ಲೂ ಕರಾವಳಿಯ ಬಂಡೆ ಎಂದೇ ಖ್ಯಾತಿ ಪಡೆದಿರುವ ಡಿಕೆಶಿ ಶಿಷ್ಯ ಇನಾಯತ್ ಅಲಿ ಸದ್ಯ ಮುಸ್ಲಿಂ ಸಮುದಾಯದಲ್ಲಿ ಕೇಳಿ ಬರುತ್ತಿರುವ ರಾಜಕೀಯದ ದೊಡ್ಡ ಹೆಸರು. ಕಳೆದ ಬಾರಿ ಕೊನೆ ಕ್ಷಣದಲ್ಲಿ ಟಿಕೆಟ್ ನೀಡಿದ ಪರಿಣಾಮ ಸೋತಿದ್ದರು. ಸೋತರೂ ಪಕ್ಷಕ್ಕೆ ತಳಮಟ್ಟದಿಂದಲೇ ಫೀನಿಕ್ಸ್ ನಂತೆ ಎದ್ದೇಳುವ ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ನಿರಂತರ ಓಡಾಟ, ಜನ ಸಂಪರ್ಕ, ಗ್ಯಾರಂಟಿ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ರಾಷ್ಟ್ರ, ರಾಜ್ಯ ನಾಯಕರು ಕರಾವಳಿಗೆ ಬಂದಾಗ ಅದರ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸುವ ಚಾಕಚಕ್ಯತೆ ಉಳ್ಳವರು. ಲೋಕಸಭಾ ಚುನಾವಣಾ ಸಂದರ್ಭದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಪರ ಅದ್ದೂರಿ ಕಾರ್ಯಕ್ರಮ ನಡೆಸಿ ಪಕ್ಷಕ್ಕೆ ಜೀವ ಸೆಲೆ ತಂದುಕೊಟ್ಟವರು ಇನಾಯತ್ ಅಲಿ. ಇಂತಹ ನಾಯಕರಿಗೆ ವಿಧಾನ ಪರಿಷತ್ ಸ್ಥಾನ ನೀಡಿದರೆ ಕರಾವಳಿಯಲ್ಲಿ ಪಕ್ಷ ಮತ್ತಷ್ಟು ಬಲಾಢ್ಯಗೊಳ್ಳಬಹುದು, ಜೊತೆಗೆ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಗಮನಹರಿಸುವುದು ಒಳ್ಳೆಯದು. ಮುಸ್ಲಿಂ ಸಮುದಾಯಕ್ಕೆ ನೀಡದೆ ತಮ್ಮ ಹಳೇ ರಾಗ..ಹಳೇ ಹಾಡು ಆಡಿದರೆ ಮುಂದೆ ಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ತಿರುಗಿ ಬೀಳುವುದಂತು ಗ್ಯಾರಂಟಿ.!