ಸುರತ್ಕಲ್: ಅಜ್ಞಾನಿ ಪೋಷಕ, ಮುಗ್ಧ ಮಗು, ಬಲಿಪಶು ಸಮಾಜ ‘ಖಳನಾಯಕ’ ಯಾರು.?

ಕರಾವಳಿ

ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸಿದ ಮೂರು ಪ್ರಶ್ನೆಗಳು

ಕಳೆದ ವಾರ ಮಂಜನಾಡಿಯ ಉರುಮಣೆ ಅಶ್ರಫ್ ಮಾಲಿಕಿ ಉಸ್ತಾದ್ ಸುಸೈಡ್ ಕೇಸ್ ಸಮುದಾಯದಲ್ಲಿ ಭಾರೀ ತಲ್ಲಣ ಸೃಷ್ಟಿಸಿತ್ತು. ಅವರು ಆತ್ಮಹತ್ಯೆಗೈದರು ಅನ್ನುವ ಕಾರಣಕ್ಕಾಗಿ ಅಲ್ಲ. ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ಸಮುದಾಯದೊಳಗಡೆ ವ್ಯಾಪಕ ಚರ್ಚೆಗೆ ಕಾರಣವಾದವು. ಬ್ಯಾಂಕ್ ಸಾಲದ ಕರಾಳ ಮುಖ, ಮದರಸ ಅಧ್ಯಾಪಕರನ್ನು ಜಮಾಅತ್ ಕಮಿಟಿ ಕಡಿಮೆ ಸಂಬಳದಲ್ಲಿ ದುಡಿಸಿಕೊಳ್ಳುತ್ತಿರುವುದು ಈ ಬಗ್ಗೆ ಚರ್ಚೆಗಳು ನಡೆದವು. ಇವತ್ತು ಮಸೀದಿಗೆ ಅನಗತ್ಯವಾಗಿ ಕೋಟಿಗಟ್ಟಲೆ ದುಡ್ಡು ಸುರಿಸಿ ಬಿಲ್ಡಪ್ ಕೊಡುವ ಕೆಲವು ಜಮಾಅತ್ ಗಳು ಮೊಯಿಲಾರ್ ಗಳಿಗೆ ನೀಡುತ್ತಿರುವುದು ಜುಜುಬಿ ಸಂಬಳ. ಅದೇ ರೀತಿ ಸುನ್ನೀ ಬಣದ ಎರಡು ಗ್ರೂಪ್ ಗಳು ಬಡ ಮೊಯಿಲಾರ್ ಗಳ ಉದ್ಧಾರಕ್ಕೆ ಮುಅಲ್ಲಿಂ ನಿಧಿಯನ್ನು ಕೋಟಿಗಟ್ಟಲೆ ಸಂಗ್ರಹಿಸುತ್ತದೆ. ಮಜ್ಲಿಸ್ ಹೆಸರಿನಲ್ಲಿ ಕೆಲವು ಮತಪಂಡಿತರು ಬಡ ಮುಅಲ್ಲಿಮರ ಮನೆ ನಿರ್ಮಾಣಕ್ಕೆ ನಿಧಿಯನ್ನು ಸಂಗ್ರಹಿಸುತ್ತಾರೆ. ಕೇರಳದ ಯಾವುದೋ ಒಂದು ಭಾಗದಲ್ಲಿ ಮನೆ ನಿರ್ಮಿಸಿಕೊಟ್ಟಿದ್ದೇವೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ ಅಷ್ಟೇ. ಆ ನಿಧಿ ನಿಜವಾಗಲೂ ಬಡ ಮೊಯಿಲಾರ್ ಗಳ ಅಭಿವೃದ್ಧಿಗೆ ವಿನಿಯೋಗ ಆಗುತ್ತಾ..? ಒಂದು ವೇಳೆ ಆಗುವುದಿದ್ದರೆ ಉರುಮಣೆ ಮೊಯಿಲಾರ್ ರಂತವರಿಗೆ ಆಗಬೇಕಿತ್ತು. ಕಡಿಮೆ ಸಂಬಳ ನೀಡುವ ಜಮಾಅತ್ ಗಳನ್ನು ಕೇವಲ ಖಳನಾಯಕರಾಗಿ ಬಿಂಬಿಸಿದರೆ ಸಾಲದು ಅದರ ಜೊತೆಗೆ ಮೊಯಿಲಾರ್ ಗಳ ಉದ್ಧಾರಕ್ಕಾಗಿ ನಿಧಿ ಸಂಗ್ರಹಿಸುವ ಗ್ರೂಫೀಸಂ ಗಳು ಕೂಡ ಇಂತಹ ಹೊಣೆಗಾರಿಕೆ ಹೊತ್ತುಕೊಳ್ಳಬೇಕಿದೆ. (ಆತ್ಮಹತ್ಯೆಗೆ ಮಾನಸಿಕವಾಗಿ, ಆರ್ಥಿಕವಾಗಿ ಬೇರೆ ಬೇರೆ ಕಾರಣಗಳಿದ್ದವಂತೆ.! ಅದು ಬೇರೆ ವಿಷಯ)

ಉರುಮಣೆ ಉಸ್ತಾದರ ಆತ್ಮಹತ್ಯೆ ಸಮುದಾಯದಲ್ಲಿ ಸಂಚಲನ ಸೃಷ್ಟಿಸಿ ಮರೆಯಾಗುತ್ತಿದ್ದಂತೆ ಸುರತ್ಕಲ್ ನಲ್ಲಿ ಮದರಸ ಅಧ್ಯಾಪಕರ ಮೇಲೆ ನಡೆದ ದೈಹಿಕ ಹಲ್ಲೆ ಸಮುದಾಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮದರಸದ ಸಣ್ಣ ಮಗುವಿನ ಮೇಲೆ ಅಮಾನುಷವಾಗಿ ಅಧ್ಯಾಪಕರೊಬ್ಬರು ಹೊಡೆದಿದ್ದಾರೆ ಅನ್ನುವ ಕಾರಣಕ್ಕೆ ಮಗುವಿನ ಸಂಬಂಧಿಕನೊಬ್ಬ ಉಸ್ತಾದರು ಊಟ ಮಾಡುವ ಕೊನೆಗೆ ನುಗ್ಗಿ ಊಟ ಮಾಡುತ್ತಿದ್ದ ಮೊಯಿಲಾರ್ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಇಂತಹ ವರ್ತನೆ ಅಜ್ಞಾನಿಯ ಕ್ರೂರ ಮನಸ್ಸಿಗೆ ಹಿಡಿದ ಕೈಗನ್ನಡಿ. ಧಾರ್ಮಿಕತೆಯ ಗಂಧಗಾಳಿಯು ಇಲ್ಲದ ರೀತಿಯ ಪೋಷಕರು ಹಾಗೂ ಸಂಬಂಧಿ ಪಟ್ಟವರು ವರ್ತಿಸಿದ್ದಾರೆ. ಮದ್ರಸ ಅಧ್ಯಾಪಕರು ಕೂಡ ಮುಗ್ಧ ಮಗುವಿನ ಮೇಲೆ ಹೊಡೆದಿರುವುದು ಕೂಡ ನ್ಯಾಯ ಸಮ್ಮತವಲ್ಲ. ಸಮುದಾಯ ಕೂಡ ಈ ವಿಚಾರದ ಬಗ್ಗೆ ಒಂದೇ ಕೋನದಲ್ಲಿ ಚರ್ಚಿಸುತ್ತಿರುವುದು ಕೂಡ ಅಪಾಯವೇ.

ಇಂದು ಕೆಲವು ಜಮಾಅತ್ ಗಳಲ್ಲಿ ಭಿನ್ನತೆಗೆ ಕಾರಣವಾಗುತ್ತಿರುವುದು ಕೆಲವು ಅಧಿಕ ಪ್ರಸಂಗಿ ಮೊಯಿಲಾರ್ ಗಳ ಕಾರಣಕ್ಕಾಗಿ. ತಾವು ವಿದ್ವಾಂಸರ ಪಡಿಯಚ್ಚು ಎಂದು ಹೇಳಿ ಸಮುದಾಯವನ್ನು ವಂಚಿಸಿ ಬೇಳೆ ಬೇಯಿಸುತ್ತಿದ್ದಾರೆ. ತಪ್ಪು ಸಾಮಾನ್ಯ ಜನರು ಮಾಡಿದರೂ ತಪ್ಪೆ, ವಿದ್ವಾಂಸರೆಂದು ಹೇಳಿಕೊಳ್ಳುವವರು ಮಾಡಿದರೂ ತಪ್ಪೆ. ಉಸ್ತಾದರುಗಳು ಒಂದೋ ಎರಡೋ ವರ್ಷ ಆ ಜಮಾಅತಿನಲ್ಲಿ ಡ್ಯೂಟಿ ಮಾಡುತ್ತಿರುತ್ತಾರೆ ಅಷ್ಟೇ. ಅವರಿಗೊಂದು ಅಭಿಮಾನಿ ಬಳಗ ಸೃಷ್ಟಿಯಾಗಿ ಇಂದು ಎಷ್ಟೋ ಜಮಾಅತ್ ಗಳು ಛಿದ್ರ ಛಿದ್ರವಾಗಿ ಒಡೆದು ಹೋಗಿದ್ದು ಇದೆ. ಈ ವಿಚಾರದಲ್ಲಿ ಕೆಲವೊಂದು ಮೊಯಿಲಾರ್ ಗಳು ಕಟಕಟೆಯಲ್ಲಿ ನಿಲ್ಲಬೇಕಿದೆ.

ಹಿಂದಿನ ಕಾಲದಲ್ಲಿ ಮಕ್ಕಳಿಗೆ ರಕ್ತ ಬರುವಂತೆ ಹೊಡೆದಿಲ್ಲವೇ, ವಿದ್ಯೆ ಬರಲು ಹೊಡೆದರೆ ತಪ್ಪೇನು? ಎಂದು ಕೆಲವರು ವಾದಿಸುವುದುಂಟೂ. ಅವರ ಮಕ್ಕಳಿಗೆ ನಾಲ್ಕು ಒದೆ ಬಿದ್ದರೆ ಸಾಮಾಜಿಕ ಜಾಲತಾಣ, ಕಂಪ್ಲೇಂಟ್ ಕೊಡಲು ಅವರೇ ಮುಂದು ಇರುತ್ತಾರೆ. ಹೇಳುವುದು ಸುಲಭ, ಅದನ್ನು ಚಾಚೂ ತಪ್ಪದೆ ಪಾಲಿಸುವುದು ಮಾತ್ರ ಕಷ್ಟಕರವಾದ ಕೆಲಸ. ಸುರತ್ಕಲ್ ಘಟನೆಯಲ್ಲಿ ಪೋಷಕರದ್ದು ರಾಕ್ಷಸೀ ಕೃತ್ಯ, ಅನಾಕರಿಗ ವರ್ತನೆ. ಕ್ಷಮಿಸುವಂತಹದ್ದಲ್ಲ.

ಇಲ್ಲಿ ಕ್ರೂರಿ ಪೋಷಕನ ಒದೆ ತಿಂದ ಅಧ್ಯಾಪಕರ ಜೊತೆ ಆ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಅ ಹರಾಮಿಕೋರರು ಕೂಡಾ ಅಷ್ಟೇ ಸಮಾನ ಅಪರಾಧಿಗಳು. ಇಂದು ಬಹುತೇಕ ಜಮಾಅತ್ ಗಳಲ್ಲಿ ಮದರಸ ಅಧ್ಯಾಪಕರ ವರ್ತನೆಗೆ ಬೇಸೆತ್ತು ಪೋಷಕರು ಅಧ್ಯಾಪಕರನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಸಂಗ ನಡೆಯುತ್ತಲೇ ಇದೆ. ಪ್ರತಿ ಜಮಾಅತ್ ನಲ್ಲೂ ಇಂತಹ ಪ್ರಾಬ್ಲಂ ಇದ್ದೇ ಇದೆ. ಅದನ್ನು ನಾಲ್ಕು ಗೋಡೆಗಳ ಮಧ್ಯೆ ಆಡಳಿತ ಸಮಿತಿ ಬಗೆಹರಿಸುತ್ತದೆ, ಬಗೆಹರಿದಿದೆ. ಜಮಾಅತ್ ಕಮೀಟಿಯಲ್ಲಿ ಬುದ್ದಿವಂತರು, ಜಾಣರು, ವಿದ್ಯಾವಂತರು ಇದ್ದಾರೆ. ಇಂತಹ ಘಟನೆಗಳು ನಡೆದಾಗ ಅದನ್ನು ಜಮಾಅತ್ ಕಮಿಟಿಗೆ ಗಮನಕ್ಕೆ ತರುವುದು ಪ್ರತಿಯೊಬ್ಬರ ಕರ್ತವ್ಯ. ಅದನ್ನು ಬಿಟ್ಟು ಊರಿನ ಮಾನ-ಮರ್ಯಾದೆಯನ್ನು ಹರಾಜು ಮಾಡುವುದು ಎಷ್ಟು ಸರಿ. ಪುರಾವೆ ಸಹಿತ ದೂರು ನೀಡಿದರೂ ಜಮಾಅತ್ ಕಮಿಟಿ ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಪಟ್ಟವರು ಈ ಬಗ್ಗೆ ತಮ್ಮ ವಿವೇಚನೆಯಂತೆ ಕೆಲಸಮಾಡಬಹುದಿತ್ತು. ಅದನ್ನು ಬಿಟ್ಟು, ಅನ್ಯರ ಮುಂದೆ ಇಡಿ ಸಮುದಾಯದ ಮಾನವನ್ನೇ ಹರಾಜು ಹಾಕಿದ ಅ ಖಳನಾಯಕನ ವಿರುದ್ದ ಕ್ರಮ ಆಗಬೇಕಿದೆ.

ಸುರತ್ಕಲ್ ಘಟನೆಯಲ್ಲಿ ಯಾವನೋ ಒಬ್ಬರು ವಿಡಿಯೋ ಮಾಡಿದ್ದು ತಪ್ಪು ಅಂತ ಹೇಳಕ್ಕಾಗಲ್ಲ. ತಮ್ಮ ಸಹೋದ್ಯೋಗಿ ಮೇಲೆ ಹಲ್ಲೆ ನಡೆಯುವಾಗ ಪುರಾವೆಗೆ ವಿಡಿಯೋ ಮಾಡಿಟ್ಟರೆ ತಪ್ಪಲ್ಲ. ಪುರಾವೆ ಬೇಕು. ಅದನ್ನು ಆಡಳಿತ ಕಮಿಟಿಯವರಿಗೆ ತಲುಪಿಸಿ, ಪ್ರಕರಣವನ್ನು ನಾಲ್ಕು ಗೋಡೆಗಳ ಮಧ್ಯೆ ಇತ್ಯರ್ಥಪಡಿಸಬಹುದಿತ್ತು. ವಿಡಿಯೋ ಹರಿಬಿಟ್ಟ ಖಳನಾಯಕನಿಂದಾಗಿ ಒದೆ ಕೊಟ್ಟವರು, ಒದೆ ತಿಂದವರ ಜೊತೆ ರಾಜ್ಯದ ಇಡೀ ಸಮುದಾಯವೇ ಒದೆ ತಿಂದಂತಾಗಿದೆ. ನದಿಗೆ ಬಿದ್ದ ಸ್ನೇಹಿತನನ್ನು ರಕ್ಷಿಸುವ ಬದಲು ವಿಡಿಯೋ ಮಾಡಿದರೆ ಅಂತಹವರನ್ನು ಕಠೋರ ಮನಸ್ಸು ಅನ್ನುತ್ತೇವೆ. ಊಟ ಮಾಡುತ್ತಿದ್ದ ಸಹೋದ್ಯೋಗಿ ಉಸ್ತಾದ್ ವೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸುವಾಗ ಕನಿಷ್ಠ ಪಕ್ಷ ಆ ಉಸ್ತಾದ್ ರನ್ನು ರಕ್ಷಿಸಲು ಮುಂದಾಗದೆ ವಿಡಿಯೋ ಮಾಡಿದವರನ್ನು, ಯಾವ ಕೆಟಗರಿಗೆ ಸೇರಿಸುತ್ತೀರಿ.. ! ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹರಿದು ಬಿಟ್ಟು ಒಂದು ಊರಿನ, ತನ್ನದೇ ಸಮಾಜದ ಮಾನ ಹರಾಜು ಮಾಡಿ, ಪಲೀಹತ್ತ್ ಮಾಡಿದ ಅ ಖಳನಾಯಕನ ಬಗ್ಗೆ ತೀರ್ಮಾನ ನಿಮ್ಮದು.