ಗುರುಪುರ ಬ್ಲಾಕ್ ಕಾಂಗ್ರೆಸ್ ನಲ್ಲಿ ಭಿನ್ನಮತ.!

ಕರಾವಳಿ

ವಲಸಿಗರಿಗೆ ಮಣೆ, ಮೂಲ ಕಾಂಗ್ರೆಸ್ಸಿಗರಿಗಿಲ್ಲ ನೆಲೆ, ಬೆಲೆ.

ಮಾಜಿ ಮಂತ್ರಿ ರಮಾನಾಥ ರೈ ಅವರು ಪ್ರತಿಯೊಂದು ವೇದಿಕೆಗಳಲ್ಲಿ ಹೇಳುವ ಒಂದು ಮಾತಿದೆ. ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ ಕಾಂಗ್ರೆಸ್ಸಿಗೆ ಎಲ್ಲರೂ ಕೈಕೊಟ್ಟಾಗ ನನ್ನ ಕೈ ಹಿಡಿದು ಗೆಲ್ಲಿಸಿದ್ದು ಗುರುಪುರ ಬ್ಲಾಕ್.! ಅಂದರೆ ಗುರುಪುರ ಬ್ಲಾಕ್, ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಪ್ರತಿಯೊಂದು ಚುನಾವಣೆ ಸಂದರ್ಭ ಅಭ್ಯರ್ಥಿಗೆ ಕನಿಷ್ಠವೆಂದರೂ ಐದರಿಂದ ಹತ್ತು ಸಾವಿರ ಲೀಡ್ ಕೊಡುವ ಕ್ಷೇತ್ರವಿದ್ದರೆ ಅದು ಗುರುಪುರ ಬ್ಲಾಕ್. ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಗುರುಪುರ ಬ್ಲಾಕ್ ಸದ್ಯದ ಪರಿಸ್ಥಿತಿ ಹೇಗಿದೆ ಗೊತ್ತಾ.? ಇಲ್ಲಿ ಈಗ ಯಾರನ್ನೂ ನಾಯಕರೆಂದು ಒಪ್ಪಿಕೊಳ್ಳದೆ ಇರುವ ಪರಿಸ್ಥಿತಿ.! ಎಲ್ಲರೂ ನಾಯಕರೇ! ಒಬ್ಬ ನಾಯಕನನ್ನು ಕಂಡರೆ ಇನ್ನೊಬ್ಬನಿಗೆ ಆಗಲ್ಲ. ಕಾಲೆಳೆಯುವವರ ಸಂಖ್ಯೆಯೇ ಹೆಚ್ಚು. ತಮ್ಮ ತಮ್ಮ ಹಿಂಬಾಲಕರ ಗುಂಪು ಕಟ್ಟಿ ತಾವೇ ನಾ(ಲಾ)ಯಕ ಅನ್ನುವ ರೀತಿ ಪೋಸ್ ಕೊಡುವವರೇ ಇಲ್ಲಿ ಅಧಿಕ. ಒಬ್ಬೊಬ್ಬ ನಾಯಕ ಒಂದೊಂದು ಗುಂಪು ಕಟ್ಟಿ ತಾವೇ ದೊಣ್ಣೆ ನಾಯಕ ಅನ್ನುವ ರೀತಿಯ ಬಲಪ್ರದರ್ಶನ ಇಲ್ಲಿ ಕಾಮನ್. ಗುರುಪುರ ಭಾಗದ ನಾಯಕನಿಗೆ ಅಡ್ಯಾರ್ ಭಾಗದ ನಾಯಕನನ್ನು ಕಂಡರೆ ಆಗಲ್ಲ. ಅಡ್ಯಾರ್ ಭಾಗದ ನಾಯಕನಿಗೆ ನೀರುಮಾರ್ಗದ ನಾಯಕನನ್ನು ಕಂಡರೆ ಅಲರ್ಜಿ. ನೀರುಮಾರ್ಗದ ನಾಯಕನಿಗೆ ಎಡಪದವು ಭಾಗದ ನಾಯಕನನ್ನು ಕಂಡರೆ ತುರಿಕೆ. ಹೀಗೆ ಒಬ್ಬೊಬ್ಬ ನಾಯಕನ ಕಥೆ ಹೀಗಾದರೆ, ಇನ್ನು ಅವರಿಗಿಂತ ಕೆಳಗಿನ ಡಜನ್ ಗಟ್ಟಲೆ ನಾಯಕರದ್ದು ಇನ್ನೊಂದು ಕಥೆ. ಇವರ ಆಟ ಕಂಡು ಇಲ್ಲಿನ ನಿಷ್ಠಾವಂತ ಕಾರ್ಯಕರ್ತರು ಮಾತ್ರ ಸುಸ್ತೋ ಸುಸ್ತು.

ಗುರುಪುರ ಬ್ಲಾಕ್ ಕಾಂಗ್ರೆಸ್ ನಲ್ಲಿ ಹದಿಮೂರು ವಲಯ ಕಾಂಗ್ರೆಸ್ ಇದೆ. ಒಂದೊಂದು ವಲಯದ್ದು ಒಂದೊಂದು ಕಥೆ. ಇಲ್ಲಿ ಒಬ್ಬೊಬ್ಬ ನಾಯಕನ ಗುಂಪು ಇದೆ ಹೊರತು ಕಾಂಗ್ರೆಸ್ ಗುಂಪು ಎಂಬುದೇ ಇಲ್ಲ. ಕೆಲವು ವಲಯಗಳಂತೂ ಪಕ್ಷ ಸೇವೆ ಮಾಡುವ ಬದಲು ದುಡ್ಡಿನ ಹಿಂದೆ ಹೋಗಿ ತೀಜೋರಿ ಭರ್ತಿ ಮಾಡುತ್ತಿದೆ. ವಲಸೆ ಬಂದವರಿಗೆ ಮಣೆ ಹಾಕಲಾಗುತ್ತಿದೆ. ಎಲ್ಲಾ ಅಧಿಕಾರ ನಿನ್ನೆ ಮೊನ್ನೆ ಬಂದವರ ಕೈಯಲ್ಲಿ. ಪಕ್ಷಕ್ಕಾಗಿ ಅಹರ್ನಿಶಿ ದುಡಿದ ನಿಷ್ಠಾವಂತರು ಮೂಲೆಗುಂಪು. ಒಂದೊಂದು ಏರಿಯಾದ ನಾಲ್ಕೈದು ಮಂದಿ ಕಾಂಗ್ರೆಸ್ ಪಕ್ಷವನ್ನು ಹೈಜಾಕ್ ಮಾಡಿ ತಮಗೆ ಬೇಕಾದವರಿಗೆ ಹುದ್ದೆ ನೀಡುವ ಸಂಪ್ರದಾಯ ಇಲ್ಲಿದೆ. ಹೀಗಾದರೆ ಕಾಂಗ್ರೆಸ್ ಉದ್ಧಾರ ಆಗುವುದುಂಟೇ.

ಕುಪ್ಪೆಪದವು ವಲಯ ಕಾಂಗ್ರೆಸ್ ಈ ಹಿಂದೆ ಗುಂಪುಗಾರಿಕೆಯಿಂದ ನಲುಗುತ್ತಿತ್ತು. ಗುಂಪುಗಾರಿಕೆಯ ಪರಿಣಾಮ ಸೋಲುವುದು ಕಾಮನ್ ಆಗಿತ್ತು. ಪ್ರತಿ ಚುನಾವಣೆ ಬಂದಾಗ ಕುಪ್ಪೆಪದವು ವಲಯದ್ದೇ ಇಲ್ಲಿನ ದೊಡ್ಡ ನಾಯಕರಿಗೆ ತಲೆನೋವು ಆಗಿತ್ತು. ಆದರೆ ಇಲ್ಲಿನ ಗುಂಪುಗಾರಿಕೆಗೆ ಪುಲಿಸ್ಟಾಪ್ ಹಾಕಲು ಯಾವೊಬ್ಬ ಕಾಂಗ್ರೆಸ್ ನಾಯಕನೂ ಮುಂದಾಗಲಿಲ್ಲ. ಕಳೆದ ಶಾಸಕರ ಚುನಾವಣೆ ಸಮಯದಲ್ಲಿ ಸಮಾನಮನಸ್ಕರ ಮುಂದಾಳತ್ವದಲ್ಲಿ ಗುಂಪುಗಾರಿಕೆಗೆ ಇತಿಶ್ರೀ ಹಾಕಲಾಗಿತ್ತು.

ಎಡಪದವು ವಲಯ ಕಾಂಗ್ರೆಸ್ ಅನ್ನುವುದು ಸತ್ತು ವರ್ಷಗಳೇ ಕಳೆದಿವೆ. ಕಾರ್ಯಕರ್ತರ ಅಸಮಾಧಾನವನ್ನು ತಿಳಿಗೊಳಿಸಿ ಪಕ್ಷ ಕಟ್ಟುವ ಜವಾಬ್ದಾರಿ ಇಲ್ಲಿನ ನಾಯಕರದ್ದು. ಆದರೆ ಇಲ್ಲಿ ಸಂಘಿಗಳಿಗೆ ಮಣೆ ಹಾಕಿ ಮೂಲ ಕಾಂಗ್ರೆಸ್ಸಿಗರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ಕಮಲ ಪಕ್ಷದಲ್ಲಿದ್ದಾಗ ಉಗ್ರರೂಪ ತೋರಿಸಿದವರೆಲ್ಲ ಕಾಂಗ್ರೆಸ್ಸಿನ ಬಾಗಿಲಿನಲ್ಲಿದ್ದಾರೆ. ಮೂಲ ಕಾಂಗ್ರೆಸ್ಸಿಗರಿಗೆ ಚೊಂಬು ಕೊಟ್ಟು ಎಲ್ಲಿಂದಲೋ ಬಂದ ಉಗ್ರ ಪ್ರತಾಪಿಗಳಿಗೆ ಸ್ಥಳೀಯ ಸಂಸ್ಥೆ ಸೇರಿದಂತೆ ಜವಬ್ದಾರಿಯ ಹುದ್ದೆ ನೀಡಲಾಗುತ್ತಿದೆ. ಎಡಪದವಿನಲ್ಲಿ ಮಥಾಯಸ್ ಎಂಬ ಕಟ್ಟರ್ ಕಾಂಗ್ರೆಸಿಗನ ಅಧಿಪತ್ಯ ಇರುವಾಗ ಕಾಂಗ್ರೆಸಿಗೊಂದು ದಮ್ಮಿತ್ತು. ಕಾಂಗ್ರೆಸ್ ಬೆಳೆಯುತ್ತಿತ್ತು. ಸಂಘಿಗಳನ್ನು ಮೊಳಕೆಯಲ್ಲೆ ಚಿವುಟುತ್ತಿದ್ದ. ಇದೀಗ ಸಂಘಿ ಕಾಂಗ್ರೆಸಿಗರು ಆತನನ್ನೇ ಇದೀಗ ಮೂಲೆಗೆ ಸರಿಸಿದ್ದಾರೆ. ಇತ್ತೀಚೆಗೆ ಎಡಪದವು ಹೈಸ್ಕೂಲ್ ನಲ್ಲಿ ನಡೆದ ಸಂಘಿ ಕಾರ್ಯಕ್ರಮದ ವಿರುದ್ಧ ಕೆಲವು ನಾಯಕರು, ವಿದ್ಯಾರ್ಥಿಗಳು ವಲಯ ಕಾಂಗ್ರೆಸ್ ನವರಿಗೆ ಮಾಹಿತಿ ನೀಡಿದರೂ ಅವರು ತುಟಿಕ್ ಪಿಟಿಕ್ ಅನ್ನಲಿಲ್ಲ. ಧ್ವನಿ ಎತ್ತಿದರೆ ಕಾಂಗ್ರೆಸ್ಸಿಗೆ ಓಟಿನ ಸಮಸ್ಯೆ ಉಂಟಾಗುತ್ತದೆಯಂತೆ! ಇಂತ ಸಂಘಿಗಳನ್ನು ಬಗಲಲ್ಲಿಟ್ಟು ಪಕ್ಷ ಕಟ್ಟಲು ಸಾಧ್ಮವೇ? ಇವರಿಗೆ ಬ್ಯಾನರ್ ಕಟ್ಟಲು, ಬೊಬ್ಬೆ ಹಾಕಲು ಅಲ್ಪಸಂಖ್ಯಾತರ ಮಕ್ಕಳು ಬೇಕು. ಈ ಅಲ್ಪರಿಗೆ ಇನ್ನೂ ಅರ್ಥವಾಗುತ್ತಾ.!

ಗುರುಪುರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ನಾಯಕರನ್ನು ಮೆಚ್ಚಿಸಲು, ಅವರ ಜೊತೆ ಸೆಲ್ಪಿ ತೆಗೆಯಲಷ್ಟೇ ಒಂದು ವರ್ಗ ಕಾರ್ಯಾಚರಿಸುತ್ತಿದೆ. ಪಕ್ಷದಲ್ಲಿ ಅಂತಹವರಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಪಕ್ಷ ಕಟ್ಟಿದ ಹಿರಿ-ಕಿರಿ ತಲೆಗಳನ್ನು ಕಡೆಗಣನೆ ಮಾಡಲಾಗುತ್ತಿದೆ. ಕಮಲ ಪಕ್ಷದ ವಿರುದ್ಧ ನಿರ್ಭಯವಾಗಿ ಧ್ವನಿ ಎತ್ತುತ್ತಿದ್ದ ಬಿಲ್ಲವ ಸಮುದಾಯದ ಹಿರಿಯ ಕಟ್ಟರ್ ಕಾಂಗ್ರೆಸ್ ಮುಖಂಡರೊಬ್ಬರ ಮಗ, ವಾಕ್ಚಾತುರ್ಯ ಹೊಂದಿದ ಕಾಂಗ್ರೆಸ್ ನಾಯಕ ‘ಬಿಲ್ಲವ’ ಮುಂದಾಳು ಒಬ್ಬರನ್ನು ಸೈಡ್ ಲೈನಿಗೆ ಹಾಕಲಾಗಿದೆ. ಕಾರಣ ಅವರು ಚಡ್ಡಿ ಕಾಂಗ್ರೆಸ್ ಅಲ್ಲ. ಪಕ್ಷಕ್ಕೆ ಇಂತಹವರು ಬೇಡ, ಧೋ ನಂಬರ್ ದಂಧೆಯಲ್ಲಿ ತೊಡಗಿದವರೇ ಇವರಿಗೆ ಮುಖ್ಯವಾಗಿದೆ.

ಇನ್ನು ಅಲ್ಪಸಂಖ್ಯಾತರೇ ಹೆಚ್ಚಿರುವ ವಲಯಗಳಲ್ಲಿ ಕಾಂಗ್ರೆಸ್ ಉಸಿರಾಡುತ್ತಿದ್ದರೂ, ಅಲ್ಲಿಯೂ ಗಲ್ಲಿಗೊಂದರಂತೆ ನಾಯಕರು ಹುಟ್ಟಿ ಶುಭ್ರ ಶ್ವೇತಧಾರಿ ವಸ್ತ್ರ ತೊಟ್ಟು ದೊಡ್ಡ ನಾಯಕರ ಹಿಂದೆ ಮುಂದೆ ಸುತ್ತಾಡುವುದೇ ಪಕ್ಷ ಸಂಘಟನೆ ಅಂದುಕೊಂಡಿದ್ದಾರೆ. ತಳಮಟ್ಟದಲ್ಲಿ ನಾಲ್ಕೈದು ಓಟು ಸೃಷ್ಟಿಸುವ ಕೆಫಾಸಿಟಿ ಇವರಲ್ಲಿಲ್ಲ. ಆದರೆ ನಾಯಕರ ರೀತಿ ಓಡಾಡುತ್ತಿದ್ದಾರೆ. ಇಂತಹ ನಾಯಕರ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆ ಸೇರಿದಂತೆ ಇತರ ಕೆಲಸ ಮಾಡಿಕೊಡುವಂತೆ ದುಂಬಾಲು ಬಿದ್ದರೆ, ನಾಳೆ ಬನ್ನಿ, ನಾಡಿದ್ದು ಬನ್ನಿ ಅಂತ ಹೇಳಿ ಅವರನ್ನು ಅಲ್ಲಿಂದ ಪುಸಲಾಯಿಸಿ ಕಳುಹಿಸುತ್ತಾರೆ. ಒಮ್ಮೊಮ್ಮೆ ಮೊಬೈಲ್ ನೋಟ್ ರೀಚೇಬಲ್, ಪಾಪ ಅವರು ಕೊನೆಗೆ ಕೆಲವೊಂದು ಸಮಾಜ ಸೇವಕರ ಬಳಿ ಹೋಗಿ ತಮ್ಮ ಕೆಲಸ ಮಾಡಿಕೊಂಡು ಬರುತ್ತಾರೆ.

ನಾಯಕರೆನಿಸಿಕೊಂಡವರ ಇಂತಹವರ ನಡವಳಿಕೆಗೆ ರೋಸಿ ಹೋಗಿ ಸಮುದಾಯದ ಹೆಸರೇಳಿ ಹುಟ್ಟಿದ ಪಕ್ಷದ ಬೆಳವಣಿಗೆಗೆ ಕಾರಣವಾಗಿದೆ. ಕೆಲವು ಕಾಂಗ್ರೆಸ್ಸಿಗರೇ ಅಲ್ಪಸಂಖ್ಯಾತ ಸಮುದಾಯದ ರಕ್ಷಣೆಗೆಂದು ಹುಟ್ಟಿದ ಪಕ್ಷಕ್ಕೆ ನೀರೇರೆದು ಪೋಷಿಸುತ್ತಿದ್ದಾರೆ. ಇದೇ ಕಾರಣದಿಂದ ಮೂರು ಸ್ಥಳೀಯ ಸಂಸ್ಥೆಗಳಲ್ಲಿ ಇವರು ಅಧಿಕಾರ ಪಡೆಯುವಂತಾಯಿತು.

ಇನ್ನೊಂದು ವಿಚಿತ್ರ ಅಂದರೆ ಕಾಂಗ್ರೆಸ್ಸಿನಲ್ಲಿ ಬಂಟ, ಬಿಲ್ಲವ ಹೀಗೆ ಹಲವು ನಾಯಕರು ಕಾಂಗ್ರೆಸ್ಸಿನಲ್ಲಿ ಮಿಂಚುತ್ತಿದ್ದಾರೆ. ಕೆಲವೊಂದು ಆಯಕಟ್ಟಿನ ಜಾಗದಲ್ಲಿ ಇವರಿಗೆ ಅಧಿಕಾರವೂ ಸಿಕ್ಕಿದೆ. ಆದರೆ ಈ ನಾಯಕರ ಹಿಂದೆ ಮುಂದೆ ತಮ್ಮದೇ ಸಮುದಾಯದ ಒಂದತ್ತು ಓಟು ಇಲ್ಲ. ಇವರ ಹಿಂದೆ ಮುಂದೆ ಸುತ್ತಾಡುವವರು, ಜೈ ಕಾರ ಹಾಕುವವರು ಅಲ್ಪಸಂಖ್ಯಾತರು. ತಮ್ಮ ಕ್ಷೇತ್ರದಲ್ಲಿ ತಮಗೆ ಮೂರು ಕಾಸಿನ ಬೆಲೆ ಇಲ್ಲದಿದ್ದರೂ ಇವರಿಗೆ ಕಣ್ಣಿಗೆ ಕಾಣುವುದು ಅಲ್ಪಸಂಖ್ಯಾತರ ಕ್ಷೇತ್ರಗಳು. ಅಲ್ಪಸಂಖ್ಯಾತರಿಗೆ ಮಂಡೆ ಸರಿ ಇಲ್ಲ ಮಾರಾಯರೇ.!

ಬ್ಲಾಕ್ ವತಿಯಿಂದ ಇತ್ತೀಚೆಗೆ ನಡೆದ ಎಸ್ ಐ ಆರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಹತ್ತರಿಂದ ಹನ್ನೊಂದು ಜನ! ಆದರೆ ನಾಯಕರನ್ನು ಮೆಚ್ಚಿಸಲು ದಂಡೇ ತೆಗೆದುಕೊಂಡು ಬರುತ್ತಾರೆ. ಇಲ್ಲಿ ಪಕ್ಷಕ್ಕಿಂತ ನಾಯಕರನ್ನು ಮೆಚ್ಚಿಸುವ ಕೆಲಸದಲ್ಲಿ ನಿರತರಾದ ಪರಿಣಾಮ ಪಕ್ಷ ಅಧೋಗತಿಗೆ ಇಳಿದಿದೆ. ವಿರೋಧ ಪಕ್ಷದ ನಾಯಕರ ವೈಫಲ್ಯಗಳನ್ನು ಎತ್ತಿ ಸಮರ್ಥವಾಗಿ ಬಳಸಿ, ಪಕ್ಷ ಬಲವರ್ಧನೆಗೆ ಇಲ್ಲಿ ನಾಯಕರು ಮುಂದಾಗುತ್ತಿಲ್ಲ. ದುಡ್ಡಿದ್ದರೆ ಎಲ್ಲವೂ ಸಾಧ್ಯ ಅನ್ನುವ ಮನಸ್ಥಿತಿ ಕೆಲವರದ್ದು. ಪಕ್ಷ ಕಟ್ಟುವ ಚಿಂತನೆ ಬಿಟ್ಟು ಕೋಣ, ಕೋಳಿ ಕಟ್ಟ ಹಿಂದೆ ಓಡಿದರೆ ಓಟು ಸಿಗುತ್ತದೆ ಎಂದು ಇವರ ತಲೆಗೆ ಹುಳು ಬಿಟ್ಟ ಪುಣ್ಯಾತ್ಮರು ಯಾರೋ ಮಾರಾಯ.? ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದೆ ಇಂತಹ ಕೋಲಾಟಕ್ಕೆ ಓಟು ಬಿಡಿ, ಮಣ್ಣಾಂಗಟ್ಟಿ ಏನೂ ಸಿಗಲ್ಲ.

ನಾಯಕರ ನಡೆಯಿಂದ ಇಲ್ಲಿನ ಕಾರ್ಯಕರ್ತರು ಬೇಸತ್ತಿದ್ದಾರೆ. ಇತ್ತೀಚೆಗೆ ಬೂತ್ ಮಟ್ಟದ ನಾಯಕನೊಬ್ಬ ಭಿನ್ನಮತಕ್ಕೆ ರೋಸಿ ಹೋಗಿ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರೂ, ನಾಯಕರೆನಿಸಿಕೊಂಡವರು ಅದನ್ನು ಸ್ವಿಕರಿಸಲಿಲ್ಲ. ಕಾರಣ ಭಿನ್ನಮತ ಸ್ಪೋಟಗೊಳ್ಳುವ ಭಯ. ಕಾರ್ಯಕರ್ತರ ಶ್ರಮಕ್ಕೆ ಬೆಲೆ ಸಿಗುತ್ತಿಲ್ಲ. ಇಲ್ಲಿ ಯಾರನ್ನು ನಂಬುವುದು, ಬಿಡುವುದು ಅನ್ನುವ ಗೊಂದಲದಲ್ಲಿದ್ದಾರೆ ಕಾರ್ಯಕರ್ತರು. ಇಲ್ಲಿ ಧೋ ನಂಬರ್ ದಂಧೆಯಲ್ಲಿ ಸಂಘಿ -ಕಾಂಗ್ರೆಸ್ ಭಾಯಿ, ಭಾಯಿ. ಅಂತಹವರೇ ನಾಯಕರಾಗಿ ಮಿಂಚುತ್ತಿದ್ದಾರೆ. ಜನರು ಬಿಡಿ, ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ದೊಡ್ಡ ನಾಯಕರೇ ಬಂದು ಎಲ್ಲವನ್ನೂ ಪರಿಹರಿಸಬೇಕಂತೆ. ಮತ್ತೆ ಲೋಕಲ್ ನಾಯಕರೆನಿಸಿಕೊಂಡವರು ಇರುವುದು ಯಾವ ಕರ್ಮಕ್ಕೆ.? ಇನ್ನೇನೂ ಸ್ಥಳೀಯ ಚುನಾವಣೆಗಳ ಪರ್ವ. ಇಲ್ಲಿನ ನಿಯತ್ತಿನ ಕಾರ್ಯಕರ್ತರನ್ನು ಹೊಸಕಿ ಹಾಕಿದರೆ ಭದ್ರಕೋಟೆಯಲ್ಲಿ ಕಮಲ, ರಿಕ್ಷಾ ದುಂದುಭಿ ಬಾರಿಸಿದರೆ ಅದಕ್ಕೆ ಕಾರಣ ಇಲ್ಲಿನ ಕಾಂಗ್ರೆಸ್ ನಾಯಕರೇ ಹೊರತು ಕಾರ್ಯಕರ್ತರಲ್ಲ. ಇಲ್ಲಿನ ನಾಯಕರೆನಿಸಿಕೊಂಡವರ ಕೃಪೆಯಿಂದಲೇ ಕೋಮುಶಕ್ತಿಗಳು ಬೆಳೆದಿದೆ. ಕಮಲಕ್ಕೆ ಸಾವಯವ ಹಾಕಿ ಬೆಳೆಸಿದರೆ, ರಿಕ್ಷಾದ ಗಾಲಿಗೆ ನೈಟ್ರೋಜನ್ ಹಾಕಿ ತುಂಬಿಸಿದ್ದಾರೆ. ರಾಜ್ಯಮಟ್ಟದ ನಾಯಕರೆನಿಸಿಕೊಂಡವರು, ಕ್ಷೇತ್ರವಾರು ಬೇಕಿದ್ದಲ್ಲಿ ಮಾತ್ರ ಸುತ್ತಾಡುವವರು ಈ ಬಗ್ಗೆ ಚಿಂತಿಸದಿದ್ದಲ್ಲಿ ಮುಂದಿನ ಪಲಿತಾಂಶವೇ ದಿಟ್ಟ ಉತ್ತರವಾಗಿರಬಹುದು.