MRPL ಪೆಟ್ ಕೋಕ್, ಡೀಸೆಲ್, ಪೆಟ್ರೋಲ್ ಅಕ್ರಮ ಮಾಫಿಯಾ

ಕರಾವಳಿ

ಉತ್ತಮ ಮೆಟೀರಿಯಲ್ ಗಳನ್ನು ವೇಸ್ಟ್ ಮೆಟೀರಿಯಲ್ ಎಂದು ಪರಿಗಣಿಸಿ ಬಿಲ್, ಇನ್ವಾಯ್ಸ್ ಇಲ್ಲದೆ ಅಕ್ರಮ ಸಾಗಾಟ

ಮಂಗಳೂರು ಆರ್ಥಿಕತೆಯ ಹೆಬ್ಬಾಗಿಲೇ ಪಣಂಬೂರು, ಬೈಕಂಪಾಡಿ, ಸುರತ್ಕಲ್ ಸುತ್ತಮುತ್ತಲಿನ ಪ್ರದೇಶ. ಇಲ್ಲಿ ತಲೆ ಎತ್ತಿ ನಿಂತಿರುವ ಅಗಾಧ ಪ್ರಮಾಣದ ಬೃಹತ್ ಕೈಗಾರಿಕೆಗಳು ದಿನನಿತ್ಯ ಕೋಟಿಗಟ್ಟಲೆ ವಹಿವಾಟಿನ ಕೇಂದ್ರವಾಗಿದೆ. MRPL, ONGC, HPCL, BASF, ಮಂಗಳೂರು ಬಂದರು, MCF, ಇನ್ನೂ ಹಲವಾರು ದೊಡ್ಡ ದೊಡ್ಡ ಉದ್ಯಮ ಸುರತ್ಕಲ್ ಭಾಗದಲ್ಲಿದೆ. ಆದರೆ ಇದೀಗ ಕೆಲವು ಕೈಗಾರಿಕೆ ಸಂಸ್ಥೆಗಳು ಪ್ರಭಾವಶಾಲಿ ಕೆಲ ಉದ್ಯಮಿಗಳಿಗೆ ಅಕ್ರಮ ಚಟುವಟಿಕೆಯ ಕಾರ್ಯಗಾರವಾಗಿ ಮಾರ್ಪಾಟಾಗಿದೆ.

MRPL ನಿಂದ ತಯಾರಾಗುವ ಪೆಟ್ ಕೋಕ್ ಇತರ ರಾಜ್ಯಗಳಿಗೆ ಸಾಗಾಟ ನಡೆಸಲು ರೈಲ್ವೇ ಇಲಾಖೆಯ ಸಹಯೋಗದಿಂದ ರೈಲ್ವೇ ಲೋಡ್ ಯಾರ್ಕ್ 2019 ರ ಡಿಸೆಂಬರ್ ನಲ್ಲಿ MRPL ಸಂಸ್ಥೆ ಸ್ಥಾಪಿಸಿತ್ತು. ಈ ರೈಲ್ವೇ ಲೋಡ್ ರ್ಯಾಕ್ ನಿಂದ, MRPL ನಿಂದ ತಯಾರಾದ ಪೆಟ್ ಕೋಕ್ ಆಟೋಮ್ಯಾಟಿಕ್ ಟ್ರಾಕ್ ಮೂಲಕ ರೈಲ್ವೇ ಬೋಗಿಗಳಿಗೆ ಲೋಡ್ ಆಗುತ್ತದೆ.. ಆದರೆ ಇದರಲ್ಲಿ ಬಹುದೊಡ್ಡ ಮಟ್ಟದಲ್ಲಿ ಅಕ್ರಮ ಕೋಕ್ ಸಾಗಾಟ ನಡೆಯುತ್ತಿದೆ.

ರೈಲ್ವೇ ಬೋಗಿಗಳಿಗೆ ಲೋಡ್ ಮಾಡುವ ಸಂಧರ್ಭ ಪೆಟ್ ಕೋಕ್ ಭೋಗಿಗಳಿಗೆ ಭರ್ತಿಯಾಗಿ ಕೆಳಗಡೆ ಬೀಳುತ್ತದೆ. ಇದನ್ನು ವೇಸ್ಟ್ ಪೆಟ್ ಕೋಕ್ ಎಂದು ಪರಿಗಣಿಸುತ್ತಾರೆ.. ಅದಕ್ಕಾಗಿಯೇ ಪೆಟ್ ಕೋಕ್ ಭೋಗಿಗಳಿಗೆ ಲೋಡ್ ಮಾಡುವಾಗ ಉದ್ದೇಶಪೂರ್ವಕವಾಗಿ ಓವರ್ ಲೋಡ್ ಮಾಡುತ್ತಾರೆ. ಆ ಸಂಧರ್ಭ ಕೆಳಗೆ ಬೀಳುವ ಪೆಟ್ ಕೋಕ್ ಉತ್ತಮ ದರ್ಜೆಯ ಮೆಟೀರಿಯಲ್ ಆಗಿದ್ದರೂ ಕೂಡ ಅದನ್ನು ವೇಸ್ಟ್ ಎಂದು ಪರಿಗಣಿಸಿ, ಹೀಗೆ ಸಂಗ್ರಹವಾಗುವ ಪೆಟ್ ಕೋಕ್ ನ್ನು ಯಾವದೇ ಇನ್ವಾಯ್ಸ್, ಬಿಲ್ ಇಲ್ಲದೆ ಒಂದು ಖಾಸಗಿ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಲಾರಿಗಳಲ್ಲಿ ಅಕ್ರಮವಾಗಿ ಇತರ ಕಂಪನಿಗಳಿಗೆ ಸಾಗಾಟ ನಡೆಯುತ್ತಿದೆ. ಸದ್ದಿಲ್ಲದೆ ಈ ಮಾಫಿಯಾ ದಿನೇ ದಿನೇ ಬಹುದೊಡ್ಡ ಮಟ್ಟದಲ್ಲಿ ಸಾಗುತ್ತಿದೆ. ಇದೊಂದೇ ಅಲ್ಲದೆ ಇದೆ ಖಾಸಗಿ ಸಂಸ್ಥೆ ನವಮಂಗಳೂರು ಬಂದರು ಇಲಾಖೆಯಲ್ಲಿ ಕೂಡ ಮಾಫಿಯಾ ನಡೆಸುತ್ತಿದೆ.

ನವಮಂಗಳೂರು ಬಂದರು ಇಲಾಖೆಯಲ್ಲಿ ಕೆಲವು ಉತ್ತಮ ಮೆಟೀರಿಯಲ್ ಗಳನ್ನು ಕೂಡ ವೇಸ್ಟ್ ಮೆಟೀರಿಯಲ್ ಎಂದು ಪರಿಗಣಿಸಿ ಯಾವುದೇ ಬಿಲ್, ಇನ್ವಾಯ್ಸ್ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಇದಕ್ಕೆ ಯಾರು ಇಲ್ಲಿಯವರೆಗೆ ಪ್ರಶ್ನೆ ಎತ್ತಿದವರೇ ಇಲ್ಲ. ಪ್ರತಿಷ್ಠಿತ MRPL ಸಂಸ್ಥೆಗೆ ವಂಚಿಸಿ ಇಷ್ಟೊಂದು ರಾಜಾರೋಷವಾಗಿ ಅಕ್ರಮ ಕೋಕ್ ಸಾಗಾಟ ನಡೆಯುತ್ತಿರುವುದು ಹೇಗೆ ಎಂಬುವುದು ಸ್ಥಳೀಯರನ್ನು ಆಶ್ಚರ್ಯಗೊಳಿಸಿದೆ.

ಅದೇ ರೀತಿ ಸುರತ್ಕಲ್ ಭಾಗದಲ್ಲಿ ಕೈಗಾರಿಕಾ ಕೇಂದ್ರವಾಗಿದೆಯೋ ಅಷ್ಟೇ ಅಕ್ರಮ ಅಡ್ಡೆಯ ಕೇಂದ್ರ ಕೂಡ ಆಗಿದೆ. ಇಲ್ಲಿ ಇರುವಷ್ಟು ಮಾಫಿಯಾ ಜಿಲ್ಲೆಯ ಬೇರೆ ಎಲ್ಲೂ ಕಾಣಸಿಗದು. ಡಿಸೇಲ್, ಪೆಟ್ರೋಲ್, ಗ್ಯಾಸ್ ಅಕ್ರಮ ದಂಧೆಗಳು ಇಲ್ಲಿ ಜೋರಾಗಿದೆ. ಇದೇ ದಂಧೆಯಿಂದಾಗಿ ಇಲ್ಲಿ ಕೋಟಿ ವೀರರು ಆದವರೂ ಇದ್ದಾರೆ. MRPL ಪೆಟ್ರೋಲ್, ಡಿಸೇಲ್ ಪೈಪ್ ಗೆ ಕನ್ನ ಹಾಕಿ ಲಪಟಾಯಿಸುವ ದಂಧೆ ಕೂಡ ಇದೆ. ಇದೆಲ್ಲವೂ ‘ಮಾಮೂಲಿ’ ನೀಡಿ ನಡೆಯುವಂತಹ ದಂಧೆಯಾಗಿದೆ. ಇಂತಹ ಹತ್ತಾರು ದಂಧೆಗಳು ಇಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.