ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ.. ಬಿಜೆಪಿಯಲ್ಲಿ ‘ನವೆಂಬರ್ ಕ್ರಾಂತಿ’

ರಾಜ್ಯ

ಎನ್ ಡಿಎ ಮೈತ್ರಿಕೂಟದ ನಾಯಕತ್ವ ಕುಮಾರಸ್ವಾಮಿ ಹೆಗಲೇರಿಸಲು ಬಿಜೆಪಿ ಹೈಕಮಾಂಡ್ ಗುಪ್ತ ಮಾತುಕತೆ

ಕೇಂದ್ರ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಶೀಘ್ರದಲ್ಲೇ ರಾಜ್ಯ ರಾಜಕೀಯಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರಗೊಂಡಿವೆ. ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಷಡ್ಯಂತ್ರ ಬಯಲಿಗೆಳೆದು ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ಕುಮಾರಸ್ವಾಮಿ ಕಾರಣರಾಗಿದ್ದರು. ಪ್ರತಿ ದಿನ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಸೃಷ್ಟಿಸುವ ಕೆಲಸ ಮಾಡಿದ್ದರು. ಆ ಮೂಲಕ ವಿರೋಧ ಪಕ್ಷಗಳಲ್ಲಿ ಗಟ್ಟಿ ನಾಯಕತ್ವ ಪ್ರದರ್ಶಿಸಿದ್ದರು. ಇದೀಗ ನಡೆದಿರುವ ಮೇಲ್ಮನೆ ಫೈಟ್ ನಲ್ಲಿ ಮುಖ್ಯಮಂತ್ರಿ ಅವರ ಪರಾಮಾಪ್ತನನ್ನು ಸೋಲಿಸಿ ಜೆಡಿಎಸ್ ವಿಜಯದುಂದುಬಿ ಬಾರಿಸಿತ್ತು. ಸರಕಾರ ಇದ್ದರೂ ಕೈಯಲ್ಲಿದ್ದ ಒಂದು ಸ್ಥಾನವನ್ನು ಕಳೆದುಕೊಂಡು ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿತು. ಮೇಲ್ಮನೆ ಚುನಾವಣೆ ಫಲಿತಾಂಶದ ರಾಜ್ಯ ರಾಜಕಾರಣದಲ್ಲಿ ಹೊಸ ಸಮೀಕರಣಗಳು ಸೃಷ್ಟಿಯಾಗುತ್ತಿದ್ದು, ಇದರ ಸಂಪೂರ್ಣ ಶ್ರೇಯಸ್ಸು ಕುಮಾರಸ್ವಾಮಿ ಅವರಿಗೆ ಸಲ್ಲುವ ಸಾಧ್ಯತೆಯಿದೆ. ಇದನ್ನೇ ಬಲವಾದ ಅಸ್ತ್ರವನ್ನಾಗಿ ಬಳಸಿ ರಾಜ್ಯದಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ಅವರು ತವಕಿಸುತ್ತಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಮುಂಚೂಣಿಯಲ್ಲಿ ನಿಲ್ಲಿಸಿ ಮುನ್ನಡೆಸಲು ಮತ್ತು ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ಒಕ್ಕೂಟದ ಪ್ರಮುಖ ನಾಯಕನಾಗಿ ಹೊರಹೊಮ್ಮಲು ಎಚ್‌ಡಿಕೆ ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಉತ್ತಮ ಸಮನ್ವಯ ಸಾಧಿಸಲು ಕುಮಾರಸ್ವಾಮಿ ಅವರಂತಹ ನಾಯಕರ ಅವಶ್ಯಕತೆ ಬಗ್ಗೆ ಬಿಜೆಪಿ ಪಕ್ಷದ ದೆಹಲಿ ವರಿಷ್ಠರಿಗೂ ಮನವರಿಕೆಯಾಗಿದೆ. ಹೀಗಾಗಿ, ಕೇಂದ್ರ ರಾಜಕಾರಣದಿಂದ ರಾಜ್ಯ ರಾಜಕೀಯಕ್ಕೆ ಮರಳಿ ಸಕ್ರಿಯ ಪಾತ್ರ ವಹಿಸಲು ಅವರು ರಣತಂತ್ರ ರೂಪಿಸುತ್ತಿದ್ದಾರೆ.

ಜೆಡಿಎಸ್ ವಲಯದಲ್ಲಿ ಈಗಾಗಲೇ ಎಚ್‌ಡಿಕೆ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಕೂಗು ಬಾರಿ ಜೋರಾಗಿದ್ದು, ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿದರೆ ಎನ್‌ಡಿಎ ಒಕ್ಕೂಟದ ಚುಕ್ಕಾಣಿ ಅಧಿಕೃತವಾಗಿ ಅವರ ಕೈಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದಲ್ಲಿ ಸಂಪೂರ್ಣ ನೆಲೆಕಚ್ಚಿದ ಜೆಡಿಎಸ್ ಗೆ ಕುಮಾರಸ್ವಾಮಿ ನಿರಂತರ ಬೂಸ್ಟ್ ನೀಡುವ ಕೆಲಸ ಮಾಡುತ್ತಿದ್ದು, ಇದು ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರಂತಹ ಮಾಸ್ ನಾಯಕನನ್ನು ಕೆಳಗಿಳಿಸಿ ಡಿಕೆಶಿ ಅವರನ್ನು ಇತ್ತೀಚೆಗೆ ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸಲಾಗಿತ್ತು. ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸ್ ಪಕ್ಷದವರೇ ಷಡ್ಯಂತ್ರ ನಡೆಸಿ ಅವರ ಬಲವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದು, ಇದನ್ನೇ ರಾಜಕೀಯವಾಗಿ ಬಳಸಿಕೊಂಡಿರುವ ಕುಮಾರಸ್ವಾಮಿ ಅಹಿಂದ ಮತಗಳ ಮೇಲೆ ಕಣ್ಣಿಟ್ಟು ರಣತಂತ್ರ ರೂಪಿಸುತ್ತಿದ್ದಾರೆ. ಇದರ ಜೊತೆಗೆ ಬಿಜೆಪಿ ರಾಜ್ಯ ನಾಯಕತ್ವದ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಭ್ರಮನಿರಸವಾಗಿದ್ದು, ಕುಮಾರಸ್ವಾಮಿ ಅವರ ಇತ್ತೀಚಿನ ರಫ್ ಅಂಡ್ ಟಫ್ ಇಮೇಜ್ ಬಿಜೆಪಿ ಕಾರ್ಯಕರ್ತರಿಗೂ ಇಷ್ಟವಾದಂತಿದೆ. ನವೆಂಬರ್ ಅಂತ್ಯದೊಳಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಮತ್ತು ಇತರ ಪ್ರಮುಖ ರಾಜಕೀಯ ನಿರ್ಧಾರಗಳು ಹೊರಬೀಳಲಿದ್ದು, ಬಿಜೆಪಿಯಲ್ಲಿ ನಡೆಯಲಿರುವ ಈ ‘ನವೆಂಬರ್ ಕ್ರಾಂತಿ’ಯ ಬಳಿಕ ಮೈತ್ರಿಕೂಟದ ಅಧಿಕಾರದ ಸಂಪೂರ್ಣ ಜವಾಬ್ದಾರಿ ಕುಮಾರಸ್ವಾಮಿ ಅವರ ಹೆಗಲೇರಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಬಿಜೆಪಿ ಮತ್ತು ಜೆಡಿಎಸ್ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ನಿರಂತರ ಮಾತುಕತೆಗಳ ಬಳಿಕ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳು ಆಗಲಿರುವುದು ಖಚಿತವಾಗಿದ್ದು, ರಾಜ್ಯದ ರಾಜಕೀಯ ಅಂಗಳದಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಲಿವೆ.