ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದ ಪ್ರಕರಣ: ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ

ಕರಾವಳಿ

ಅಪ್ರಾಪ್ತ ಬಾಲಕಿಯೋರ್ವಳ ಮನೆಗೆ ಬಂದು ಬಾಲಕಿಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆಗೆ ಸಂಬಂಧಿಸಿದಂತೆ, ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ: 24/2019, ರಂತೆ ಪ್ರಕರಣದಲ್ಲಿ ತನಿಖಾಧಿಕಾರಿಗಳಾಗಿದ್ದ ಆಗಿನ ಉಪ್ಪಿನಂಗಡಿ ವೃತ್ತ ನಿರೀಕ್ಷಕ ನಾಗೇಶ್. ಕೆ ರವರು ಪ್ರಕರಣದ ವಿಚಾರಣೆ ನಡೆಸಿ ಕಡಬ ನೂಜಿಬಾಳ್ತಿಲ ಆರೋಪಿ ಸದ್ದಾಂ ಎಂಬಾತನ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ದೊಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಮಾನ್ಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಸುಮಂಗಲ ಚಕಲಬ್ಬಿರವರು ಆರೋಪಿತನ ವಿರುದ್ದದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಪೋಕ್ಸೋ ಕಾಯ್ದೆಯ ಸೆಕ್ಷನ್ 5(l) ಮತ್ತು 5 (j)(ii) ನೊಂದಿಗೆ, ಸೆಕ್ಷನ್ 6 ರ ಅಡಿಯಲ್ಲಿ ಇಪ್ಪತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ, ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ. ಐ.ಪಿ.ಸಿ (IPC) ಯ ಸೆಕ್ಷನ್ 506 ರ ಅಡಿಯಲ್ಲಿ ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 25 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ನೀಡಿ ಆದೇಶ ಮಾಡಿರುತ್ತಾರೆ.

ಆರೋಪಿಯು ಕಡಬ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಆತನ ವಿರುದ್ದ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ:59 /2011, ಅ.ಕ್ರ:62/20, ಅ.ಕ್ರ:27/21, ಅ.ಕ್ರ:105/21 ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:101/2022 ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಪುಷ್ಪರಾಜ್ ಅಡoತ್ಯಾಯರವರು ಸಮರ್ಥ ವಾದಮಂಡನೆ ನಡೆಸಿರುತ್ತಾರೆ.