ಪಿಡಿಓ ಗಳಿಗೆ 2-3 ಪಂಚಾಯತಿಯ ಪ್ರಭಾರ ಜವಾಬ್ದಾರಿ ಬದಲು ಆಯಾ ಪಂಚಾಯತಿಯ ಗ್ರೇಡ್ 1 ಕಾರ್ಯದರ್ಶಿಗೆ ಇನ್ಮುಂದೆ ಹೆಚ್ಚುವರಿ ಹೊಣೆ: ಸಚಿವ ಈಶ್ವರ್ ಖಂಡ್ರೆ ಸೂಚನೆ

ರಾಜ್ಯ

ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕರ್ತವ್ಯ ಆಪ್ ನಲ್ಲಿ ಹಾಜರಾತಿ ಕಡ್ಡಾಯ

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ 2-3 ಪಂಚಾಯತಿಯ ಹೊಣೆ ನೀಡುವ ಬದಲು, ಆಯಾ ಪಂಚಾಯತಿಯ ಗ್ರೇಡ್ 1 ಕಾರ್ಯದರ್ಶಿಗಳಿಗೆ ಹೆಚ್ಚುವರಿ ಹೊಣೆ ವಹಿಸಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಕಾರ್ಯನಿರ್ವಹಣಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪಿಡಿಓಗಳಿಗೆ 2-3 ಪಂಚಾಯತಿಗಳ ಹೆಚ್ಚುವರಿ ಹೊಣೆ ನೀಡಿದರೆ ಯಾವುದೇ ಗ್ರಾಮ ಪಂಚಾಯತಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗ್ರೇಡ್ 1 ಕಾರ್ಯದರ್ಶಿಗಳಿಗೆ ಹೊಣೆ ನೀಡಿ ಎಂದರು.

ರಾಜ್ಯದ ಎಲ್ಲಾ 5927 ಗ್ರಾಮ ಪಂಚಾಯತಿ ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿಗಳು ಕಚೇರಿಯಲ್ಲಿ ಹಾಜರಿದ್ದು, ಸಾರ್ವಜನಿಕರ ಅಹವಾಲು ಆಲಿಸಬೇಕು. ಈ ನಿಟ್ಟಿನಲ್ಲಿ ಸಿಇಓಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು. ಪಿಡಿಓಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಪಂಚಾಯತಿಯಲ್ಲಿ ಎಲ್ಲ ಕೆಲಸದ ದಿನಗಳಂದು ಕಚೇರಿಗೆ ಕಡ್ಡಾಯವಾಗಿ ಹಾಜರಾಗಬೇಕು. ಈ ಬಗ್ಗೆ ಕರ್ತವ್ಯ ಆಪ್ ನಲ್ಲಿ ಹಾಜರಾತಿಯನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸುವಂತೆ ಸೂಚಿಸಿದರು.