ಜಿಲ್ಲೆಯಲ್ಲಿ ಟೋಲ್ ಗೇಟ್ ಮಾಫಿಯಾ: ಕಾಂಗ್ರೆಸ್ಸಿಗರ ಡಿಶುಂ ಡಿಶುಂ ಪ್ರತಿಭಟನೆ; ಕಮ್ಯುನಿಸ್ಟರ ಕಾನೂನುಬದ್ಧ ಹೋರಾಟ.!

ಕರಾವಳಿ

ಹಿಟ್ ಆಂಡ್ ರನ್ ಭಾಷಣದಿಂದ ಯಶಸ್ಸು ಸಾಧ್ಯವೇ.? ಎರಡು ಹೋರಾಟಗಳು; ಕಲಿಯಬೇಕಾದ ಪಾಠವೇನು.?

‘ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತುಕೊಳ್ಳುವುದು’ ಎಂಬುದು ಕನ್ನಡದಲ್ಲಿ ಬಳಕೆಯಲ್ಲಿರುವ ಒಂದು ಪ್ರಸಿದ್ಧ ಗಾದೆ ಮಾತು. ಬಹಳ ಕಾಲದಿಂದ ಸುಮ್ಮನಿದ್ದವರು, ಜವಾಬ್ದಾರಿ ಮರೆತವರು ಅಥವಾ ಆಲಸ್ಯದಲ್ಲಿದ್ದವರು ತಡವಾಗಿ ಕಾರ್ಯ ಪ್ರವೃತ್ತರಾದಾಗ ಈ ಮಾತನ್ನು ಬಳಸಲಾಗುತ್ತದೆ. ಇದು ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿ ಇದೆ.

ಕಾಂಗ್ರೆಸ್ಸಿಗರು ಯಾವಾಗಲೂ ಎಚ್ಚೆತ್ತುಕೊಳ್ಳುವುದು ತಡವಾಗಿಯೇ. ಬ್ರಹ್ಮರಕೂಟ್ಲು ಟೋಲ್ ಗೇಟ್ ಇಂದು ನಿನ್ನೆಯದಲ್ಲ. ಸುಮಾರು 23 ವರ್ಷಗಳಿಂದ ಅವೈಜ್ಞಾನಿಕವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಅವತ್ತು ತುಟಿಕ್ ಪಿಟಿಕ್ ಅನ್ನದ ಕಾಂಗ್ರೆಸ್ಸಿಗರು ಹೋರಾಟ ಸಮಿತಿ ರಚಿಸಿ ತಡವಾಗಿಯಾದರೂ ಟೋಲ್ ತೆರವಿಗೆ ಧ್ವನಿ ಎತ್ತಿದ್ದಾರೆ. ಇದು ಸ್ವಾಗತಾರ್ಹ. ಆದರೆ ಈ ಹಿಂದೆ ಟೋಲ್ ಗೇಟ್ ತೆರವಿಗೆ ಜನಸಾಮಾನ್ಯರು ಒತ್ತಾಯಿಸಿದಾಗ ಕೆಲವೊಂದು ಕೈ ನಾಯಕರು ಪರೋಕ್ಷವಾಗಿ ಟೋಲ್ ಗೇಟ್ ಪರ ಬ್ಯಾಟಿಂಗ್ ಬೀಸಿದ್ದೂ ಇದೆ. ಟೋಲ್ ಗೇಟ್ ರಕ್ಷಣೆಗೆ ನಿಂತಿದ್ದು ಇದೆ. ಸುರತ್ಕಲ್ ನಲ್ಲಿ ಕಮ್ಯುನಿಸ್ಟ್ ನಾಯಕರ ಮುಂದಾಳತ್ವದಲ್ಲಿ ಅಕ್ರಮ ಟೋಲ್ ಗೇಟ್ ಮುಚ್ಚಿಸುವ ಮೂಲಕ ಐತಿಹಾಸಿಕ ಕ್ರೆಡಿಟ್ ಅವರಿಗೆ ದೊರಕಿದೆ. ಪಕ್ಕದ ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್ ಶಾಸಕರ ನೇತೃತ್ವದಲ್ಲಿ ಅಕ್ರಮ ಅರಿಕ್ಕಾಡಿ ಟೋಲ್ ಗೇಟ್ ತೆರವುಗೊಳಿಸುವ ಮೂಲಕ ಭರ್ಜರಿ ಯಶಸ್ಸು ಸಿಕ್ಕಿದೆ. ಆದರೆ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಜರೂರತ್ತಾಗಿ ಒಂದು ಕ್ರೆಡಿಟ್ ಬೇಕಾಗಿದೆ. ಆಗ ಕಂಡದ್ದೇ ಅಕ್ರಮ ಬ್ರಹ್ಮರಕೂಟ್ಲು ಟೋಲ್ ಗೇಟ್!

ಹೋರಾಟ ಸಮಿತಿ ನೇತೃತ್ವದಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ನಡೆಯುತ್ತಿದ್ದರೂ ಅದರ ಮುಂಚೂಣಿ ನಾಯಕತ್ವ ವಹಿಸಿರುವುದು ಕಾಂಗ್ರೆಸ್ಸಿಗರು. ಪ್ರತಿಭಟನೆ ಸಂದರ್ಭ ಕಾಂಗ್ರೆಸ್ ಪಕ್ಷದ ಯುವ ನಾಯಕರೊಬ್ಬರು ಅಲ್ಲಿದ್ದ ಕಾಂಗ್ರೆಸ್ ನಾಯಕರೊಬ್ಬರನ್ನು ಉದ್ದೇಶಿಸಿ ಜಿಲ್ಲೆಯಲ್ಲಿ ಮರಳು ವ್ಯಾಪಾರ ಬಂದ್ ಆಗಿದೆ. ಟಿಪ್ಪರ್, ಜೆಸಿಬಿ ಮನೆಯಲ್ಲಿ ಇಡುವ ಬದಲು, ಅದನ್ನು ತಂದು ಟೋಲ್ ಗೇಟ್ ಅನ್ನು ಒಡೆದು ಹಾಕಿ ಎಂದು ಬೆಂಕಿ ಭಾಷಣ ಮಾಡಿದ್ದಾರೆ. ಜೊತೆಗಿದ್ದವರು ಚಪ್ಪಾಳೆ ತಟ್ಟಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಅಧಿಕಾರ ನಡೆಸಿದ ಪಕ್ಷದ ಪ್ರಮುಖ ನಾಯಕರೊಬ್ಬರು, ಪ್ರತಿಭಟನೆಯ ಮೂಲ ಸ್ವರೂಪ ತಿಳಿಯದೇ ಕಾನೂನು ವಿರೋಧಿ ಭಾಷಣ ಮಾಡುತ್ತಾ ಜೆಸಿಬಿ ತಂದು ಒಡೆಯಿರಿ, ಬಡಿಯಿರಿ ಎಂದು ಅರಾಜಕತೆ ಸೃಷ್ಟಿಸುವ ಭಾಷಣ ಮಾಡುವುದು ಭೂಷಣವಲ್ಲ. ಇಂತಹ ಹೊಡಿ ಬಡಿ ಭಾಷಣಗಳಿಂದ ಟೋಲ್ ಗೇಟ್ ಬಂದ್ ಆಗುತ್ತದೆ ಎಂದು ನಿರೀಕ್ಷಿಸುವುದು ಕೂಡ ಮೂರ್ಖತನ. ಒಂದು ವೇಳೆ ಟೋಲ್ ಗೇಟ್ ತೆರವಿಗೆ ಕಾಂಗ್ರೆಸ್ಸಿಗರದ್ದು ಪ್ರಾಮಾಣಿಕ ಕಾಳಜಿ ಆಗಿದ್ದರೆ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಇದ್ದಾಗ ತೆರವು ಮಾಡುವ ಕೆಲಸ ಮಾಡಬಹುದಿತ್ತು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ (NH 75) ಬ್ರಹ್ಮರಕೂಟ್ಲು ಟೋಲ್ ಗೇಟ್ ಸುಮಾರು 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಆನ್ನುವ ಸತ್ಯವನ್ನು ಮರೆತಂತೆ ಕಾಣುತ್ತಿದೆ.

ಜಿಲ್ಲೆಯಲ್ಲಿ ಅಕ್ರಮ ಟೋಲ್ ಗೇಟ್ ಮೂಲಕ ಜನರನ್ನು ದೋಚುವ ಮಾಫಿಯಾ ಸಕ್ರೀಯವಾಗಿ ಕೆಲಸ ಮಾಡುತ್ತಿರುವುದಂತೂ ಸುಳ್ಳಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾನೂನುಗಳನ್ನು ಗಾಳಿಗೆ ತೂರಿ ಗುತ್ತಿಗೆದಾರ ಸಂಸ್ಥೆಯವರು ಅಲ್ಲಲ್ಲಿ ಟೋಲ್ ಗೇಟ್ ನಿರ್ಮಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ಧ ಕಮ್ಯುನಿಸ್ಟ್ ನಾಯಕ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ನಲ್ವತ್ತಕ್ಕೂ ಹೆಚ್ಚು ದಿನ ಅಹೋರಾತ್ರಿ ಧರಣಿ ನಡೆಸಿ ಕೊನೆಗೂ ಟೋಲ್ ಗೇಟ್ ಮುಚ್ಚಿಸುವ ಮೂಲಕ ಐತಿಹಾಸಿಕ ವಿಜಯದ ನಗೆ ಬೀರಿದ್ದರು. ಈ ಹೋರಾಟದಲ್ಲಿ ಯಾವುದೇ ಕಾನೂನು ಉಲ್ಲಂಘಿಸಿ ಪ್ರತಿಭಟನೆ ನಡೆಸಿಲ್ಲ. ಹೊಡಿ ಬಡಿಯ ಮಾತುಗಳಿರಲಿಲ್ಲ. ಕಮ್ಯುನಿಸ್ಟ್ ನಾಯಕರ ಶಿಸ್ತು ಬದ್ಧ ಹೋರಾಟ ಜಿಲ್ಲೆಯ ಜನತೆಯ ಹೃದಯ ಗೆದ್ದಿತ್ತು. ಸುದೀರ್ಘ ಸಮಯದಿಂದ ಕಾನೂನು ಪರಿಧಿಯೊಳಗೆ ಹೋರಾಟ ನಡೆಸುತ್ತಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಹೇಳುವ ಕಾನೂನು ಗಳೇನು.? ಆದರೆ ಟೋಲ್ ಗೇಟ್ ಹೆಸರಿನಲ್ಲಿ ನಡೆಯುತ್ತಿರುವ ಅಸಲಿಯತ್ತೇನು.? ಎಂಬ ಬಗ್ಗೆ ಅಂಕಿಅಂಶ ಸಂಗ್ರಹಿಸಿ ಇಂಚಿಂಚೂ ಮಾಹಿತಿಗಳನ್ನು ಜನರ ಮುಂದಿಟ್ಟರು. ಜನಸಾಮಾನ್ಯರು ಕೂಡ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ನ್ಯಾಯಪರವಾದುದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜನರ ಜೊತೆ ಚೆಲ್ಲಾಟ ಆಡುತ್ತಿದೆ ಎಂಬುದನ್ನು ಅರಿತು ಪ್ರತಿಭಟನೆಗೆ ಸಂಪೂರ್ಣ ಸಾಥ್ ಕೊಟ್ಟರು. ನಿಜವಾಗಿಯೂ ಪ್ರತಿಭಟನೆ ಸಂಘಟಿಸಬೇಕಿರುವುದು ಇದೇ ಅಂಶದ ಮೇಲೆ. ಕೊನೆಗೆ ಹೋರಾಟಕ್ಕೆ ಮಣಿದು ಟೋಲ್ ಗೇಟ್ ತೆರವು ಮಾಡಲಾಯಿತು. ಅಲ್ಲೂ ಎಲ್ಲೂ ಡಿಶುಂ ಡಿಶುಂ ಭಾಷಣಗಳಿರಲಿಲ್ಲ.

ಅದೇ ರೀತಿ ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್ ಶಾಸಕ ಎ.ಕೆ.ಎಂ ಅಶ್ರಫ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಕುಂಬ್ಳೆ ಅರಿಕ್ಕಾಡಿ ಟೋಲ್ ಗೇಟ್ ಅಕ್ರಮ ಅನ್ನುವ ಮೆಸೇಜ್ ಅನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಜನಸಾಮಾನ್ಯರು ಪ್ರತಿಭಟನೆಯ ಜೊತೆಗೆ ಕೈ ಜೋಡಿಸಿದ ಪರಿಣಾಮ ಅರಿಕ್ಕಾಡಿ ಟೋಲ್ ಗೇಟ್ ಅನ್ನು ಬಂದ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಎರಡು ಪ್ರತಿಭಟನೆಯ ವಿಜಯದ ಹಿಂದೆ ಇದ್ದಿದ್ದು ಕಾನೂನು ಮೀರದೆ ನಿರ್ದಿಷ್ಟ ಅಂಶಗಳನ್ನು, ಪ್ರತಿಭಟನೆಯ ಉದ್ದೇಶವನ್ನು ಜನಸಾಮಾನ್ಯರೆಡೆಗೆ ತಲುಪಿಸಿದ ಕಾರಣಕ್ಕಾಗಿ. ಈ ಎರಡು ಪ್ರತಿಭಟನೆ ಹಿಂದೆ ಡಿಶುಂ ಡಿಶುಂ ಭಾಷಣ ಇರಲಿಲ್ಲ. ಹಿಟ್ ಆಂಡ್ ರನ್ ಭಾಷಣಗಳಿಗೆ ಸೀಮಿತವಾಗಿರಲಿಲ್ಲ. ಯೋಜಿತ ಪ್ಲ್ಯಾನ್ ಇತ್ತು. ಅದೇ ಕಾರಣದಿಂದ ಪ್ರತಿಭಟನೆ ಯಶಸ್ವಿಯೂ ಆಯಿತು.

ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು ನಡೆಸುತ್ತಿರುವ ಟೋಲ್ ಗೇಟ್ ವಿರುದ್ಧದ ಹೋರಾಟದಲ್ಲಿ ಸಮರ್ಪಕ ಯೋಜನೆಗಳೇ ಇಲ್ಲ. ಎಲ್ಲರೂ ಮಾಡುತ್ತಾರೆ ಹಾಗೆ ನಮ್ಮದೊಂದು ಇರಲಿ ಅನ್ನುವ ರೀತಿಯಲ್ಲಿದೆ. ಹೋರಾಟಕ್ಕೆ ವಿಜಯ ಸಿಗಬೇಕಿದ್ದರೆ ಒಂದೆರಡು ದಿನದ ಪ್ರತಿಭಟನೆ ಸಾಕಾಗುವುದಿಲ್ಲ. ಕಾನೂನಿನ ಅಡಿಯಲ್ಲಿ ಸುದೀರ್ಘ ರೀತಿಯ ಹೋರಾಟದ ಅಂಶಗಳು ಬೇಕು. ಹೋರಾಟದಲ್ಲಿ ದೃಢತೆ ಬೇಕು. ಪೊಲೀಸ್ ಕೇಸು ಆದರೂ ಅಂಜದ ಕಾರ್ಯಕರ್ತರು ಬೇಕು. ರಾತ್ರಿ-ಹಗಲು ಕೂರಬೇಕು, ಸೊಳ್ಳೆಗಳೊಂದಿಗೆ ಸೆಣಸಾಡಬೇಕು. ಗುರಿಬೇಕು, ಗುರಿ ಮುಟ್ಟಿಸುವ ನಿಯತ್ತು ಇರಬೇಕು. ಆಗ ಮಾತ್ರ ಹೋರಾಟಕ್ಕೆ ಜಯ ಲಭಿಸಬಹುದು. ಆದರೆ ಬ್ರಹ್ಮರ ಕೂಟ್ಲು ಟೋಲ್ ಗೇಟ್ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನೆ ಡಿಶುಂ-ಡಿಶುಂ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಕೆಲವರಿಂದ ಚಪ್ಪಾಳೆ, ಸಿಳ್ಳೆ ಸಿಗಬಹುದೇ ಹೊರತು ಹೋರಾಟ ಯಶಸ್ಸು ಕಾಣುವುದು ಅಸಾಧ್ಯ.

ಹೋರಾಟ ಮಾಡಿ, ಕನಿಷ್ಠ ಕಮ್ಯುನಿಸ್ಟರು ನಡೆಸುವ ಹೋರಾಟದ ಕೆಲವೊಂದು ಅಂಶಗಳನ್ನು ಮಾನದಂಡವಾಗಿಟ್ಟು ಪ್ರತಿಭಟಿಸಿದರೆ ಸ್ವಲ್ಪವಾದರೂ ಮರ್ಯಾದೆ ಸಿಗಬಹುದು. ಬೀದಿಯಲ್ಲಿ ಮರ್ಯಾದೆ ಹೋಗುವ ಮುನ್ನ ಕಾಂಗ್ರೆಸ್ ನಾಯಕರು ಇನ್ನಾದರೂ ಎಚ್ಚೆತ್ತುಕೊಳ್ಳಲಿ.