ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ರವರ ಕಾರ್ಯವೈಖರಿಯ ಬಗ್ಗೆ ಸ್ವಪಕ್ಷದಲ್ಲೇ ಅಸಮಾಧಾನ; ಬೇರೊಬ್ಬರನ್ನು ನೇಮಕ ಮಾಡುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ

ರಾಜ್ಯ

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ರವರ ಕಾರ್ಯವೈಖರಿಯ ಬಗ್ಗೆ ಸ್ವಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿದ್ದು, ಹುದ್ದೆಯಿಂದ ತೆರವುಗೊಳಿಸಿ ಬೇರೊಬ್ಬರನ್ನು ನೇಮಕ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ಕೂಡ ಆರಂಭವಾಗಿದೆ ಎನ್ನಲಾಗಿದೆ.
ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವಲ್ಲಿ ವಿಫಲರಾಗಿರುವ ಅಶೋಕ್‌ ಬದಲಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಸರ್ಕಾರದ ವಿರುದ್ಧ ದಾಖಲೆಗಳ ಸಮೇತ ಛಾಟಿ ಬೀಸುವ ಯುವ ನಾಯಕನನ್ನು ನೇಮಿಸುವ ಬಗ್ಗೆ ಚಿಂತನೆ ನಡೆದಿದೆ. ಆರ್. ಅಶೋಕ್‌ ಅವರ ಸ್ಥಾನಕ್ಕೆ ಕಾರ್ಕಳದ ಬಿಜೆಪಿ ಶಾಸಕ ಸುನಿಲ್‌ಕುಮಾರ್‌ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ಗುಸುಗುಸು ಕೇಳಿ ಬರುತ್ತಿದೆ. ಜುಲೈನಲ್ಲಿ ಅಧಿವೇಶನ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಅಷ್ಟರಲ್ಲಿ ಅಂತಿಮಗೊಳಿಸಬಹುದು ಎಂದು ಹೇಳಲಾಗುತ್ತಿದೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಅಶೋಕ್‌ ಸರ್ಕಾರದ ವೈಫಲ್ಯಗಳನ್ನು ಸದನದ ಒಳಗೆ ಮತ್ತು ಹೊರಗೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲೇ ಕೇಳಿಬಂದಿದೆ. ಹೀಗಾಗಿ ಮುಂದಿನ ಮಳೆಗಾಲದ ಅಧಿವೇಶನದ ಒಳಗೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಅಶೋಕ್‌ ಬದಲಿಗೆ ಹಿಂದುಳಿದ ವರ್ಗಗಳ ನಾಯಕ ಆರ್‌ಎಸ್ಎಸ್ ಹಿನ್ನಲೆಯಲ್ಲಿ ಬಂದಿರುವ ಸುನೀಲ್‌ಕುಮಾರ್‌ ರವರು ನೇಮಕವಾಗಬಹುದೆಂಬ ಗುಸುಗುಸು ಬಿಜೆಪಿ ಪಾಳೆಯದಲ್ಲಿ ಕೇಳಿಬರುತ್ತಿದೆ.

ಸದನದಲ್ಲಿ ದಾಖಲೆಗಳನ್ನಿಟ್ಟು ಸರಕಾರವನ್ನು ಮುಜುಗರಕ್ಕೆ ಸಿಲುಕಿಸುವ ಕೆಲಸವನ್ನು ಆರ್. ಅಶೋಕ್‌ ರವರು ಇದುವರೆಗೂ ಒಂದೇ ಒಂದು ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿಲ್ಲ ಎಂಬ ಅಸಮಾಧಾನ ಶಾಸಕರಲ್ಲಿ ಮಡುಗಟ್ಟಿದೆ. ಕಾನೂನು ಸುವ್ಯವಸ್ಥೆ , ರಾಜ್ಯದಲ್ಲಿ ನಡೆದ ಸರಣಿ ಕೊಲೆಗಳು, ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ಕೇಳಿಬಂದ ಹಗರಣ, ಸರ್ಕಾರದ ವೈಫಲ್ಯಗಳ ಬಗ್ಗೆ ಸದನದಲ್ಲಿ ಸಮರ್ಥವಾಗಿ ಮಾತನಾಡುವಲ್ಲಿ ಅಶೋಕ್‌ ವಿಫಲರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಬಹುತೇಕ ಶಾಸಕರು ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರುಗಳಿಗೆ ಎದುರೇಟು ನೀಡುವ ನಾಯಕನೊಬ್ಬನನ್ನು ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಕೂರಿಸಬೇಕೆಂಬ ಒಕ್ಕೊರಲಿನ ಆಗ್ರಹ ಮಾಡುತ್ತಿದ್ದಾರೆ.