ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ತಂದೆ ಸೇರಿದಂತೆ ಏಳು ಮಂದಿಯಿಂದ ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಪತ್ತನತಿಟ್ಟ ಎಂಬಲ್ಲಿ ನಡೆದಿದೆ. ಈ ಸಂಬಂಧ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಏಳು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಂತ್ರಸ್ತೆ ಬಾಲಕಿಯು ಐದನೇ ತರಗತಿಯಲ್ಲಿದ್ದಾಗಿನಿಂದಲೇ ಈ ದೌರ್ಜನ್ಯಗಳು ಆರಂಭಗೊಂಡಿದ್ದು, ಬಾಲಕಿಯು ತಾನು ಎದುರಿಸುತ್ತಿದ್ದ ನರಕಯಾತನೆಯನ್ನು ಶಾಲೆಯಲ್ಲಿ ತನ್ನ ಸಹಪಾಠಿಗಳೊಂದಿಗೆ ಹಂಚಿಕೊಂಡಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಇದನ್ನು ತಿಳಿದ ಶಾಲಾ ಆಡಳಿತ ಮಂಡಳಿಯು ತಕ್ಷಣವೇ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದೆ. ತದನಂತರ ನಡೆಸಲಾದ ಆಪ್ತ ಸಮಾಲೋಚನೆ ಹಾಗೂ ಬಾಲಕಿಯ ಹೇಳಿಕೆಯನ್ನಾಧರಿಸಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಏಳು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬಾಲಕಿಯ ತಾಯಿ ಲಾಟರಿ ಟಿಕೆಟ್ ಮಾರಾಟ ವೃತ್ತಿಯಲ್ಲಿದ್ದು, ದಿನದ ಹೆಚ್ಚಿನ ಸಮಯ ಹೊರಗಡೆಯೇ ಇರುತ್ತಿದ್ದರು. ಈ ವೇಳೆ ಬಾಲಕಿ ಮನೆಯಲ್ಲಿ ಏಕಾಂಗಿಯಾಗಿದ್ದಾಗ ಆರೋಪಿಗಳು ಈ ಕೃತ್ಯ ಎಸಗುತ್ತಿದ್ದರೆಂದು ತಿಳಿದುಬಂದಿದೆ.
ಪ್ರಸ್ತುತ ಬಾಲಕಿ ವಾಸಿಸುತ್ತಿರುವ ಬಾಡಿಗೆ ಮನೆಯ ಮಾಲೀಕ ಹಾಗೂ ಅದೇ ಕಟ್ಟಡದಲ್ಲಿದ್ದ ಮತ್ತೊಬ್ಬ ನಿವಾಸಿಯನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ವ್ಯಕ್ತಿಯ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಾಲಕಿಯ ಸ್ವಂತ ತಂದೆ ಪ್ರಸ್ತುತ ವಿದೇಶದಲ್ಲಿದ್ದು, ಆತನನ್ನು ಭಾರತಕ್ಕೆ ಕರೆತಂದು ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ. ಇನ್ನು ಆರೋಪಿಗಳ ಪೈಕಿ ಒಬ್ಬ ವ್ಯಕ್ತಿ ಈಗಾಗಲೇ ಮೃತಪಟ್ಟಿರುತ್ತಾರೆ. ತನಿಖೆ ಪ್ರಗತಿಯಲ್ಲಿದ್ದು, ಮ್ಯಾಜಿಸ್ಟ್ರೇಟ್ ಎದುರು ಬಾಲಕಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
