ಬಡ ಕೃಷಿಕರ ನೆಮ್ಮದಿಯ ಬದುಕಿಗೆ ಕೊಳ್ಳಿಯಿಟ್ಟ NHAI ಅಧಿಕಾರಿಗಳು.
ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಅವ್ಯವಸ್ಥೆ ನೋಡಲು ಜಿಲ್ಲಾಧಿಕಾರಿ ಬಂದು ಹತ್ತು ದಿನ ಕಳೆದರೂ ಕಲ್ಲಡ್ಕ-ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಸರಿಯಾಗಿಲ್ಲ. ಬಡ ಕೃಷಿಕರ ನೆಮ್ಮದಿಯ ಬದುಕಿಗೆ ಕೊಳ್ಳಿಯಿಟ್ಟ NHAI ಅಧಿಕಾರಿಗಳು. ಹೆದ್ದಾರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪರಿಸರದ ರೈತರು ನರಕಯಾತನೆ ಅನುಭವಿಸುತ್ತಿದ್ದಾರೆ.
ಪೆರ್ನೆ, ಬಿಳಿಯೂರು ಗ್ರಾಮಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯ ಬಡ ರೈತರು ಗೊತ್ತುಗುರಿಯಿಲ್ಲದ ಅವ್ಯವಸ್ಥೆಯ ಕಾಮಗಾರಿಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಎದುರಾಗಿದೆ. ಪೆರ್ನೆ, ಬಿಳಿಯೂರು ಗ್ರಾಮಗಳ ರೈತರ ಗೋಳು ಕೇಳುವ ಯಾವೊಬ್ಬನೂ ಇಲ್ಲವಾಗಿದ್ದಾರೆ. ಅಡಿಕೆ ತೋಟಗಳು, ಗದ್ದೆಗಳು ಕಳೆದ ಇಪ್ಪತ್ತು ದಿನಗಳಿಂದ ಸಂಪೂರ್ಣ ಮುಳುಗಡೆಯಾಗಿ ಹದಿನೈದು ಅಡಿಗಳಷ್ಟು ಕೊಳಚೆ ನೀರು ತೋಟಗಳಲ್ಲಿ ಶೇಖರಣೆಯಾಗಿದೆ.

ಅಡಿಕೆ, ತೆಂಗಿನ ಮರಗಳು ಕೊಳೆತು ಸಾಯುತ್ತಿವೆ. ಈ ಬಗ್ಗೆ ಬಿಳಿಯೂರು ಗ್ರಾಮದಲ್ಲಿ ಮುಳುಗಡೆಯಾದ ತೋಟದ ಮಾಲಿಕ ದರ್ಣಪ್ಪ ನಾಯ್ಕರು ಮಾತನಾಡುತ್ತಾ ಕಣ್ಣೀರು ಸುರಿಸಿದ್ದಾರೆ. ಜಿಲ್ಲಾಧಿಕಾರಿ ಬಂದು ಹೆದ್ದಾರಿ ಕಾಮಗಾರಿ ವೀಕ್ಷಣೆ ಮಾಡಿ ಎಂಟು ದಿನ ಕಳೆದರೂ ನಮ್ಮ ಯಾತನೆ ಕಡಿಮೆಯಾಗಿಲ್ಲ. ನಾವೆಲ್ಲ ಸಣ್ಣಪುಟ್ಟ ರೈತರಾಗಿದ್ದು ನಮ್ಮ ಒಂದು ಎಕರೆ ಅಡಿಕೆ ತೋಟದಿಂದಾಗಿಯೇ ಈವರೆಗೂ ನೆಮ್ಮದಿಯ ಜೀವನ ಮಾಡುತ್ತಿದ್ದೆವು.

ಒಂದೆಡೆ ಕೊಳೆರೋಗದ ಚಿಂತೆಯಾದರೆ ಇನ್ನೊಂದೆಡೆಯಲ್ಲಿ ಹೆದ್ದಾರಿ ಕಾಮಗಾರಿ ನಡೆಸುವ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಎಡಬಿಡಂಗಿ ಅವ್ಯವಸ್ಥೆಯಿಂದಾಗಿ 20ಅಡಿಗಳಷ್ಟು ಕೊಳಚೆ ನೀರಿನಲ್ಲಿ ಗದ್ದೆ, ಅಡಿಕೆ ತೋಟಗಳು ಮುಳುಗಡೆಯಾಗಿದೆ. ಬದುಕಬೇಕಾದರೆ ಊರು ಬಿಡಬೇಕು. ಇಲ್ಲವಾದರೆ ಇಲ್ಲೇ ಆತ್ಮಹತ್ಯೆ ನಮಗೆ ಉಳಿದ ದಾರಿಯಾಗಿದೆ ಎಂದು ಕಣ್ಣೀರು ಸುರಿಸುತ್ತಾರೆ. ತೋಟ-ಗದ್ದೆಗಳಲ್ಲಿನ ಕೊಳಚೆ ನೀರು ಖಾಲಿಯಾದರೂ ಹೂಳು ತುಂಬಿದ ಕಾರಣ ಅಡಿಕೆ, ತೆಂಗಿನ ಮರಗಳು ಸಾಯುತ್ತಿವೆ. ರಸ್ತೆ ಬದಿಯ ತೋಡುಗಳೆಲ್ಲಾ ಹೆದ್ದಾರಿಯ ಅಸಮರ್ಪಕ ಕೆಲಸದಿಂದಾಗಿ ಮುಚ್ಚಿ ಹೋಗಿದೆ.
