ಜನಪ್ರಿಯ ಜನನಾಯಕ ಮೊಯಿದಿನ್ ಬಾವರವರ ನಾಯಕತ್ವದಲ್ಲಿ ತುಳು ಭಾಷೆಯನ್ನು 8ನೆಯ ಪರಿಚ್ಛೇದಕ್ಕೆ ಸೇರಿಸಬೇಕೆನ್ನುವ ಚಳವಳಿ ನಡೆಯುತ್ತಿದೆ. ಅನೇಕ ತುಳು ಕಲಾವಿದರು,ತುಳು ಅಭಿಮಾನಿಗಳು ಇದಕ್ಕೆ ಸಾಥ್ ನೀಡುತ್ತಿದ್ದಾರೆ. ಹಿರಿಯರಾದ ಡಾ. ಶ್ರೀ ಹರಿಕೃಷ್ಣ ಪುನರೂರು ಕೂಡಾ ಮುಂಚೂಣಿಯಲ್ಲಿದ್ದು ಅವರು ಮೊಯಿದಿನ್ ಬಾವರವರನ್ನು ” ತುಳುವ ಚಕ್ರವರ್ತಿ” ಎಂದು ಕರೆದಿರುವುದು ಅರ್ಥ ಪೂರ್ಣವೂ ಮೊಯಿದೀನ್ ಬಾವರವರಿಗೆ ಸಂದ ದೊಡ್ಡ ಪ್ರಶಸ್ತಿಯೂ ಆಗಿರುತ್ತದೆ.
ತುಳು ಭಾಷೆಯನ್ನು 8ನೆಯ ಪರಿಚ್ಛೇಧಕ್ಕೆ ಸೇರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಕೇರಳ ರಾಜ್ಯ ಸರಕಾರಕ್ಕೆ ಒತ್ತಡ ಹೇರುವ ಮನವಿಯ ಆಂದೋಲನ ನಡೆಯುತ್ತಿದ್ದು ವಾಟ್ಸಪ್ ಲಿಂಕ್ ಮೂಲಕ ಇದಕ್ಕೆ ಸಹಮತ ಸೂಚಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ತುಳು ಭಾಷೆ ಇಲ್ಲಿನ ನೆಲದ ಭಾಷೆ. ಕಾಸರಗೋಡು, ದ.ಕ. ಹಾಗೂ ಉಡುಪಿ ಎಂಬೀ ಮೂರು ಜಿಲ್ಲೆಗಳ ವಿಶಾಲ ಪ್ರಾಂತ್ಯದ ನೆಲದ ಭಾಷೆ. ಐತಿಹಾಸಿಕ ಭಾಷೆ. ಅಪಾರ ಸಂಸ್ಕೃತಿಗಳು ತುಂಬಿ ತುಳುಕಾಡುವ ಶ್ರೀಮಂತ ಭಾಷೆ. ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಖ್ಯಾತಿವೆತ್ತ ಹಲವಾರು ಮೇಧಾವಿಗಳ ಮಾತೃಭಾಷೆ. ಸ್ವಾತಂತ್ರ್ಯ ಹೋರಾಟಗಾರ, ದೇಶಕ್ಕಾಗಿ ಬಲು ದೊಡ್ಡ ತ್ಯಾಗ ಮಾಡಿದ್ದ ಕಾರ್ನಾಡ್ ಸದಾಶಿವ ರಾವ್ ರವರ ಭಾಷೆ. ರಾಷ್ಟ್ರ ಕವಿ ಗೋವಿಂದ ಪೈ, ಮಹಾಕವಿ ಪಂಜೆ ಮಂಗೇಶರಾಯ ಮುಂತಾದ ಲೆಜೆಂಡ್ ಗಳ, ಮೇರು ಮಟ್ಟದ ಕಲಾವಿದರ, ಟಿ. ಎಂ. ಎ. ಪೈಯಂತಹ ಮುತ್ಸದ್ಧಿಗಳ ಭಾಷೆ. ಲೋಕ ಸಭಾ ಸ್ಪೀಕರ್ ಆಗಿದ್ದ ಕೆ. ಎಸ್ ಹೆಗ್ಡೆಯವರ ಭಾಷೆ. ಸಾವಿರಾರು ಜಾನಪದ ಗೀತೆಗಳು, ಗಾದೆ ನುಡಿಗಟ್ಟುಗಳಿಂದ ಸಮೃದ್ಧವಾದ ಅಮೋಘ ಭಾಷೆ. ಅಮೃತ ಸೋಮೇಶ್ವರ್ ಎಂಬ ಮಹಾನ್ ಸಾಧಕ , ಸಾಹಿತಿ ಮಡಿಲಲ್ಲಿರಿಸಿ ಜೋಗುಳ ಹಾಡಿದ ಭಾಷೆ.
ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಹಲವಾರು ಸಿನಿಮಾಗಳ ಭಾಷೆ. ಡಾ. ಶ್ರೀ ನವೀನ್ ಪಡೀಲ್, ಶ್ರೀ ಅರವಿಂದ ಬೋಳಾರ ರಂತಹ ಶ್ರೇಷ್ಠ ಕಲಾವಿದರ ಹಾಗೂ ರಾಜ್ಯ ಮಟ್ಟದ ಹೆಸರಾಂತ ಸಂಗೀತ ನಿರ್ದೇಶಕರ ಭಾಷೆಯಾಗಿದೆ ತುಳು ಎಂಬ ಸಿರಿಭಾಷೆ. ಕೋಟಿ ಚೆನ್ನಯರಂತಹ ವೀರಾಧಿವೀರರ ಭಾಷೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಇತಿಹಾಸವುಳ್ಳ ಸಮೃದ್ಧ ಭಾಷೆ.
ತುಳು ಒಂದು ಸೀಮಿತ ಸಮುದಾಯದವರ ಭಾಷೆಯಲ್ಲ. ಮೂರು ಜಿಲ್ಲೆಗಳಲ್ಲಿ ಎಲ್ಲಾ ಸಮುದಾಯದವರು ಒಟ್ಟುಗೂಡಿದಾಗ ಬಳಕೆಯಾಗುವ ಸಂಪರ್ಕ ಭಾಷೆಯಾಗಿದೆ ತುಳು. ಮುಸ್ಲಿಮರು ಮತ್ತು ಕ್ರೈಸ್ತರು ಒಟ್ಟು ಸೇರಿದಾಗ ಮುಸ್ಲಿಮರ ಬ್ಯಾರಿ ಭಾಷೆ ಅಥವಾ ಕ್ರೈಸ್ತನ ಕೊಂಕಣಿ ಭಾಷೆಯಲ್ಲಲ್ಲ ಅವರು ಪರಸ್ಪರ ಮಾತಾಡುವುದು. ಅವರು ತುಳುವಿನಲ್ಲಿ ಮಾತಾಡುತ್ತಾರೆ. ಹಿಂದೂ, ಮುಸ್ಲಿಮ್, ಕ್ರೈಸ್ತರು ಒಟ್ಟು ಸೇರಿದಾಗಲೂ ಕಮ್ಯೂನಿಕೇಶನ್ ತುಳುವಿನಲ್ಲೇ. ಉರ್ದು ತಿಳಿಯದ ಬ್ಯಾರಿ ಮುಸ್ಲಿಂ ಮತ್ತು ಮಲಯಾಳಿ ತಿಳಿಯದ ಹನಫಿ ಮುಸ್ಲಿಮ್ ಒಂದಾದರೆ ಅವರಿಬ್ಬರ ಸಂಪರ್ಕ ಭಾಷೆ ತುಳು.
ಇಷ್ಟು ಸಮೃದ್ಧವಾದ, ಸುಂದರವಾದ, ಇಂಪಾದ, ಐತಿಹಾಸಿಕವಾದ ತುಳು ಭಾಷೆಗೆ ಅರ್ಹ ಮನ್ನಣೆ ಕೊಡಬೇಕೆಂಬ ಆಂದೋಲನ ನ್ಯಾಯಪೂರ್ಣವಾಗಿದೆ. ಬನ್ನಿ.. ಮೊಯಿದಿನ್ ಬಾವರವರ ಜೊತೆ ಡಾ. ಶ್ರೀ ಹರಿಕೃಷ್ಣ ಪುನರೂರು, ಶ್ರೀ ಗುರುರಾಜ ವಾಮಂಜೂರು, ಡಾ. ಶ್ರೀ ದೇವದಾಸ್ ಕಾಪಿಕಾಡ್ ಮುಂತಾದ ಮಹಾನ್ ಸಾಧಕರು, ಕಲಾವಿದರು ಕೈ ಜೋಡಿಸಿದ ಹಾಗೆ ಈ ಮೂರು ಜಿಲ್ಲೆಗಳ ಸರ್ವ ಧರ್ಮ, ಜಾತಿ ಬಾಂಧವರು ಕೈ ಜೋಡಿಸಿ ನಮ್ಮ ಒಲುಮೆಯ, ಅಭಿಮಾನದ ತುಳು ಭಾಷೆಗೆ ಅರ್ಹವಾದ ಮನ್ನಣೆ ಕೊಡಿಸುವ ಚಳವಳಿಯಲ್ಲಿ ಭಾಗವಹಿಸೋಣ. ಗುರಿ ಮುಟ್ಟುವ ತನಕ ಹೋರಾಡೋಣ.