ವಿಧಾನಪರಿಷತ್ ವಿಪಕ್ಷ ನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಸಂಸದರಾಗಿ ಆಯ್ಕೆಗೊಳ್ಳುವ ಮೂಲಕ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಅವರಿಂದ ತೆರವಾದ ಸ್ಥಾನಕ್ಕೆ ಶ್ರೀಘ್ರದಲ್ಲೇ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.
ಕರಾವಳಿಯಲ್ಲಿ ಬಿಜೆಪಿ ಕಾರ್ಯಕರ್ತರ ವಿರೋಧದಿಂದ ಸಂಸದ ಟಿಕೆಟ್ ಕಳೆದುಕೊಂಡಿದ್ದ ಹ್ಯಾಟ್ರಿಕ್ ಸಂಸದ ನಳಿನ್ ಕುಮಾರ್ ಕಟೀಲ್ ಪಕ್ಷದೊಂದಿಗೆ ಮುನಿಸಿಕೊಳ್ಳದೆ ಕಾಸರಗೋಡು ಭಾಗದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಈ ಬಾರಿ ಹೊಸ ಅಭ್ಯರ್ಥಿ ಬ್ರಿಜೇಶ್ ಚೌಟ ಸ್ಪರ್ಧೆ ಮಾಡಿದರೂ ಗೆಲುವಿನ ಅಂತರ ಭಾರೀ ಕುಸಿದಿತ್ತು. ಕಟೀಲು ಸ್ಪರ್ಧೆಯ ಸಂದರ್ಭದಲ್ಲಿ ಇದ್ದ ಹುರುಪು, ಆವೇಶ ಈ ಬಾರಿ ಕರಾವಳಿಯಲ್ಲಿ ಕಾಣಸಿಗಲಿಲ್ಲ. ಈ ನಡುವೆ ಕಟೀಲು ರವರನ್ನು ಮತ್ತೆ ರಾಜ್ಯ ರಾಜಕಾರಣದಲ್ಲಿ ಸಕ್ರೀಯಗೊಳಿಸುವ ಕೆಲಸ ಅವರ ಆಪ್ತ ಬಳಗದಿಂದ ನಡೆಯುತ್ತಿದೆ. ಕೋಟಾ ಶ್ರೀನಿವಾಸ ಪೂಜಾರಿ ಯವರಿಂದ ತೆರವಾದ ವಿಧಾನ ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಟೀಲ್ ಹೈಕಮಾಂಡ್ ಮೂಲಕ ಸ್ಥಾನ ಪಡೆಯಲು ಮುಂದಾಗಿದ್ದಾರೆ ಅನ್ನುವ ಮಾತುಗಳು ಇದೀಗ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಆದರೆ ಕಟೀಲು ವಿರೋಧಿ ಬಣ ಪಕ್ಷದಲ್ಲಿ ಸಾಕಷ್ಟು ಮಂದಿ ಸಮರ್ಥ ಅಭ್ಯರ್ಥಿಗಳಿದ್ದು, ಹೊಸ ಮುಖಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ. ಕರಾವಳಿ ಬಿಜೆಪಿಯಲ್ಲಿ ವಿಧಾನಪರಿಷತ್ ಸ್ಥಾನ ಇದೀಗ ಕಟೀಲು ಬಣ ಹಾಗೂ ವಿರೋಧಿ ಬಣ ಗಳ ನಡುವೆ ತೆರೆಮರೆಯಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಯಾರ ಕೈ ಮೇಲಾಗುತ್ತೋ ಕಾದು ನೋಡೋಣ.
