ಮುಸ್ಲೀಮರನ್ನು ಕಟಕಟೆಯಲ್ಲಿ ನಿಲ್ಲಿಸಿದ್ರಾ ಪುರುಷೋತ್ತಮ ಬಿಳಿಮಲೆ.?

ರಾಜ್ಯ

ಕನ್ನಡ ಓದಲು-ಬರೆಯಲು ಬಾರದ ಲಕ್ಷಾಂತರ ಜನ ಕರ್ನಾಟಕದಲ್ಲಿದ್ದಾರೆ. ಅದರಲ್ಲಿ ಮುಸ್ಲೀಮರ ಸಂಖ್ಯೆ ಅತ್ಯಲ್ಪ ಪ್ರಮಾಣದ್ದು.

ಕನ್ನಡ ಮಾಧ್ಯಮ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯದೇ ಇರುವುದೇ ಹೊರತು ಮದರಸಾವಲ್ಲ.

✍️. ನವೀನ್ ಸೂರಿಂಜೆ, ಪತ್ರಕರ್ತರು

ಮದರಸಾದಲ್ಲಿ ‘ಕನ್ನಡ ಕಲಿಕೆ’ ಎಂಬ ಸರ್ಕಾರಿ ಕಾರ್ಯಕ್ರಮ ಯೋಜನೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಯಾಕೆ ಕೈಬಿಟ್ಟಿತು ಎಂಬುದನ್ನು ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಸ್ಪಷ್ಟವಾಗಿ ಹೇಳಬೇಕಿತ್ತು. “ವಿರೋಧ ಪ್ರಕಟವಾದ್ದರಿಂದ ಆ ವಿಷಯವನ್ನು ಕೈ ಬಿಡಲಾಗಿದೆ” ಎಂದು ಹೇಳಿ ಸುಮ್ಮನಾದರೆ “ಇದು ಅತಿಯಾಯ್ತು. ಕನ್ನಡ ಕಲಿಯುವುದಕ್ಕೂ ಮುಸ್ಲೀಮರ ವಿರೋಧವೇ ?” ಎಂಬ ಪ್ರಶ್ನೆ / ಹೊಸ ಆರೋಪವನ್ನು ಮುಸ್ಲೀಮರು ಎದುರಿಸಬೇಕಾಗುತ್ತದೆ.

ಮದರಸಾದಲ್ಲಿ ಸರ್ಕಾರಿ ಪ್ರಾಯೋಜಿತ ಕನ್ನಡ ಕಲಿಕಾ ಕಾರ್ಯಕ್ರಮವು ಈ ಕೆಳಕಂಡ ಅಪಾಯ/ಅಪ್ರಸ್ತುತೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪ್ರಾಧಿಕಾರವು ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ನಾವು ಭಾವಿಸುತ್ತೇವೆ.

  1. ಮದರಸಾ ಎನ್ನುವುದು ವೈಯಕ್ತಿಕ ಧಾರ್ಮಿಕ ಶಿಕ್ಷಣದ ಕೇಂದ್ರವೇ ಹೊರತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲ. ಯಾವುದೇ ವೈಯುಕ್ತಿಕ ಧಾರ್ಮಿಕ ಶಿಕ್ಷಣದ ಮೇಲೆ ಯಾವುದೇ ರಾಜ್ಯ ಭಾಷೆ/ರಾಷ್ಟ್ರಭಾಷೆ/ಗಡಿ/ಧರ್ಮವನ್ನು ಬಹುಸಂಖ್ಯಾತರ ಅಭಿಮಾನ/ಪ್ರೇಮದ ಹೆಸರಿನಲ್ಲಿ ಹೇರಿಕೆ ಸಲ್ಲ.
  2. ಒಮ್ಮೆ ಮದರಸಾ ಶಿಕ್ಷಣದ ಒಳಗೆ ಸರ್ಕಾರ ಭಾಷೆಯ ನೆಪದಲ್ಲಿ ಹಸ್ತಕ್ಷೇಪ ಮಾಡಿ, ಕನ್ನಡ ಶಿಕ್ಷಕರನ್ನು ನೇಮಿಸಿ ಸಂಬಳ ನೀಡಲು ಪ್ರಾರಂಭಿಸಿ, ಪಠ್ಯ ತಯಾರು ಮಾಡಿದರೆ ಭವಿಷ್ಯದಲ್ಲಿ ಕೋಮುವಾದಿ ಸರ್ಕಾರಗಳು ಆ ಅವಕಾಶವನ್ನು ದುರುಪಯೋಗ ಮಾಡುವ ಸಾಧ್ಯತೆ ಇದೆ. ಈಗಾಗಲೇ ಹಲವು ಸವಾಲು ಎದುರಿಸುತ್ತಿರುವ ಮುಸ್ಲೀಮರಿಗೆ ಇದು ಹೊಸ ಸವಾಲಾಗಲಿದೆ.
  3. ಭಾಷೆ ಕಲಿಕೆ ಎನ್ನುವುದು ಅಷ್ಟು ತೆಲುವಾದ ವಿಷಯವಲ್ಲ. ವಿದೇಶಿಗರು/ ಪರ ರಾಜ್ಯದವರು ಕಲಿತು ಮಾತಾಡುವ ಕನ್ನಡ ಕೇಳಲು ಖುಷಿಯಾದರೂ, ನಮ್ಮ ರಾಜ್ಯದವರೇ ಆ ರೀತಿ ಮಾತನಾಡಿದರೆ ಮತ್ತೆ ಸಮುದಾಯ ಅವಮಾನಕ್ಕೆ ಒಳಗಾಗಬೇಕಾಗುತ್ತದೆ. ವಾರಕ್ಕೆ ಎರಡು ಗಂಟೆಯ ಭಾಷಾ ಕಲಿಕೆಯ ತರಗತಿಯು ಅದಕ್ಕಿಂತ ಹೆಚ್ಚಿನದ್ದೇನೂ ಕಲಿಸಲ್ಲ ಎಂಬುದು ವಾಸ್ತವ. ಹಾಗಾಗಿ ಇದು ಪ್ರಚಾರಕಷ್ಟೇ ಸೀಮಿತವಾಗಿ ಮುಸ್ಲೀಮರಿಗೆ ಯಾವ ಪ್ರಯೋಜನವೂ ಅಗಲ್ಲ.
  4. ‘ಮುಸ್ಲೀಮರಲ್ಲಿ ಕನ್ನಡ ಉಚ್ಚಾರ/ಪದ ಬಳಕೆ’ ಸಮಸ್ಯೆ ಇದ್ದರೆ ಅದಕ್ಕೆ ಮದರಸಾ ಕಾರಣವಲ್ಲ. ಕನ್ನಡ ಮಾತೃಭಾಷೆಯಲ್ಲದ ತುಳುವರೂ ಸೇರಿದಂತೆ ಹಲವು ಸಮುದಾಯಗಳು ಇಂತಹ ಸಮಸ್ಯೆ ಎದುರಿಸುತ್ತಿವೆ.
  5. ರಾಜ್ಯದ ಎಲ್ಲಾ ಮಕ್ಕಳು ಕಡ್ಡಾಯ ಶಿಕ್ಷಣ ನೀತಿಯಡಿಯಲ್ಲಿ ಶಾಲೆಗೆ ಹೋಗುತ್ತಿದ್ದಾರೆ ಎನ್ನುವುದನ್ನು ಸರ್ಕಾರ ಖಾತ್ರಿಪಡಿಸಿಕೊಳ್ಳಬೇಕು.
  6. ಕನ್ನಡ ಓದಲು-ಬರೆಯಲು ಬಾರದ ಲಕ್ಷಾಂತರ ಜನ ಕರ್ನಾಟಕದಲ್ಲಿದ್ದಾರೆ. ಅದರಲ್ಲಿ ಮುಸ್ಲೀಮರ ಸಂಖ್ಯೆ ಅತ್ಯಲ್ಪ ಪ್ರಮಾಣದ್ದು. ಅದಕ್ಕೆ ಕಾರಣ ಕನ್ನಡ ಮಾಧ್ಯಮ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯದೇ ಇರುವುದೇ ಹೊರತು ಮದರಸಾವಲ್ಲ.
  7. ಈಗಿರುವ ವಿದ್ಯಾರ್ಥಿಗಳೆಲ್ಲರೂ ಕನ್ನಡ ಓದಲು ಬರೆಯಲು ಬರುವಂತವರಾಗಬೇಕು ಎಂದಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ/ ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಬೇಕು.
  8. ಕನ್ನಡ ಕಲಿಸಲು/ಕಲಿಯಲು ಇಚ್ಚೆಯುಳ್ಳ ಮದರಸಾ, ವೇದ ಪಾಠ ಶಾಲೆ, ಅಡಾರೇಷನ್ ಸೆಂಟರ್ ಸೇರಿದಂತೆ ಯಾವುದೇ ಧಾರ್ಮಿಕ ಪಾಠ ಶಾಲೆಗಳನ್ನು ಸರ್ಕಾರ/ಪ್ರಾಧಿಕಾರ ಪ್ರೋತ್ಸಾಹಿಸಬೇಕು. ಕನ್ನಡದಲ್ಲೇ ಅರ್ಚನೆ, ಕನ್ನಡದಲ್ಲೇ ಪೂಜೆ, ಕನ್ನಡದಲ್ಲೇ ಪ್ರಾರ್ಥನೆ ಮಾಡುವ ಅರ್ಚಕರು, ಪೂಜಾರಿ, ಪಾದ್ರಿಗಳು, ಮೌಲ್ವಿಗಳನ್ನು ಗುರುತಿಸಿ ಪ್ರಶಸ್ತಿ ಸನ್ಮಾನಗಳೊಂದಿಗೆ ಪ್ರೋತ್ಸಾಹಿಸಬೇಕು. ಹಾಗೆ ಮಾಡುವ ಉತ್ಸಾಹದಲ್ಲಿ ಸಾಂಸ್ಕೃತಿಕ ಪಲ್ಲಟ ಆಗದಂತೆ ಅಸ್ಥೆ ವಹಿಸಬೇಕು. ಉದಾಹರಣೆಗೆ : ಭಾವನಾತ್ಮಕವಾಗಿ ಕನ್ನಡದ್ದೇ ಎನ್ನಿಸಿಕೊಂಡಿರುವ ಬ್ಯಾರಿ, ಅರಬಿಕ್ ಭಾಷೆ, ತುಳುವರ ದೈವಾರಾಧನೆಯ ಪಾಡ್ದನ, ಬೀರ, ಮದಿಪುವಿನ ತುಳು ಭಾಷೆ, ಅಲಾವಿ ಪರಂಪರೆಯ ಉರ್ದು ಕನ್ನಡ ಮಿಶ್ರಿತ ವಿಶಿಷ್ಟ ಭಾಷೆ… ಮುಂತಾದ ಹಲವು ಭಾಷಾ ಪರಂಪರೆಗೆ ‘ಕನ್ನಡ ಪ್ರೋತ್ಸಾಹ’ ಹಾನಿ ಮಾಡದಂತೆ ಅಸ್ಥೆ ವಹಿಸಬೇಕಿದೆ.

ಈ ಎಲ್ಲಾ ಕಾರಣಗಳಿಂದ ಅಥವಾ ಇದಕ್ಕಿಂತಲೂ ಗಂಭೀರ ಅಪಾಯ/ಅಪ್ರಸ್ತುತತೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಮನಗಂಡು ‘ಮದರಸಾದಲ್ಲಿ ಕನ್ನಡ ಕಲಿಕೆ’ ಎಂಬ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ನಾವುಗಳು ಭಾವಿಸುತ್ತೇವೆ.