ಸಂಚಾರ ನಿಯಮ ಉಲ್ಲಂಘನೆ ವಿರುದ್ದ ಪೊಲೀಸರಿಂದ ವಿಶೇಷ ಕಾರ್ಯಾಚರಣೆ

ರಾಜ್ಯ

ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡಿದರೆ BSN 281 ಅಡಿಯಲ್ಲಿ, 184 IMV ಕಾಯ್ದೆಯಡಿ FIR ದಾಖಲು

ಬೆಂಗಳೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಘಟಕಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಮುಖ್ಯವಾಗಿ ಅಪಘಾತಕ್ಕೆ ಕಾರಣವಾಗಿರುವ ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್​ಇಡಿ ಲೈಟ್​ ಅಳವಡಿಸಿರುವ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ರಾಜ್ಯಾದ್ಯಂತ ವಿಶೇಷ ಕಾರ್ಯಚರಣೆ ನಡೆಸಲಾಗಿದೆ. ಇದರ ಜೊತೆಗೆ ಇದೀಗ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ, ಫುಟ್​ಬಾತ್​ ಮೇಲೆ ವಾಹನ ಚಾಲನೆ ಬಗ್ಗೆ ವಿಶೇಷ ಕಾರ್ಯಚರಣೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ.

ಈ ಕುರಿತು ಸಂಚಾರ ವಿಭಾಗದ ಪೊಲೀಸ್​ ಮಹಾ ನಿರ್ದೇಶಕರಾದ ಅಲೋಕ್​ ಕುಮಾರ್​ ಅವರು ಸುತ್ತೋಲೆ ಹೊರಡಿಸಿದ್ದು, ರಸ್ತೆ ಅಪಘಾತ ತಡೆಗಟ್ಟಲು ವಿಶೇಷ ಕಾರ್ಯಚರಣೆ ನಡೆಸುವಂತೆ ಸಂಬಂಧಪಟ್ಟ ಪೊಲೀಸ್​ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ, ಫುಟ್​ಬಾತ್​ ಮೇಲೆ ವಾಹನ ಚಾಲನೆ ಬಗ್ಗೆ ವಿಶೇಷ ಕಾರ್ಯಚರಣೆ ಮಾಡುವುದು, ಇದರ ಜೊತೆಗೆ ಡಿಫೆಕ್ಟಿವ್​ ನಂಬರ್​ ಪ್ಲೇಟ್​ ಮೇಲೆ ಸಹ ಆಗಸ್ಟ್ 1 ರಿಂದ ವಿಶೇಷ ಕಾರ್ಯಚರಣೆ ನಡೆಸಲು ಎಲ್ಲಾ ಘಟಕಗಳಲ್ಲಿ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವವರ ಮೇಲೆ ಬಿಎನ್​ಎಸ್​ 281 ಅಡಿಯಲ್ಲಿ ಮತ್ತು 184 ಐಎಂವಿ ಕಾಯ್ದೆಯಡಿ ಹಾಗೂ ಎಫ್​ಐಆರ್​ ದಾಖಲು ಮಾಡಲು ಕ್ರಮ ಜರುಗಿಸಬೇಕೆಂದು ಖಡಕ್ ಸೂಚನೆ ರವಾನಿಸಿದ್ದಾರೆ. ಒಟ್ಟಿನಲ್ಲಿ ಅಪಘಾತ ತಡೆಗಟ್ಟು ನಿಟ್ಟಿನಲ್ಲಿ ರಸ್ತೆ ಮತ್ತು ಸುರಕ್ಷತೆ ಹೆಚ್ಚುವರಿ ಪೊಲೀಸ್​ ಮಹಾ ನಿರ್ದೇಶಕರಾದ ಅಲೋಕ್​ ಕುಮಾರ್ ಪಣ ತೊಟ್ಟಿದ್ದು, ಈ ಬಗ್ಗೆ ವಾಹನ ಸವಾರರು ಎಚ್ಚೆತ್ತುಕೊಳ್ಳಬೇಕಿದೆ.