ಮೂಲ್ಕಿ ಕಿಲ್ಪಾಡಿಯ ಕೋರ್ದಬ್ಬು ದೈವಸ್ಥಾನದಲ್ಲಿ ಬೆಲೆಬಾಳುವ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಲ್ಕಿ ಪೊಲೀಸರು ನಾಲ್ವರನ್ನು ಬಂಧಿಸಿದ್ದು ಉಳಿದ ಇಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಆರೋಪಿಗಳನ್ನು ಪಡುಬಿದ್ರೆ ಕಂಚಿನಡ್ಕ ನಿವಾಸಿ ಜಾಹಿದ್ ಸಿನಾನ್ , ಕಾರ್ಕಳ ನಿಟ್ಟೆ ನಿವಾಸಿ ಪ್ರಸ್ತುತ ಕಾರ್ನಾಡ್ ಬಳಿ ವಾಸ್ತವ್ಯವಿರುವ ನಿವಾಸಿ ಯಾಸಿನ್, ದಾವಣಗೆರೆ ನಿವಾಸಿಗಳಾದ ಅಬ್ದುಲ್ ಜುಮಾಲ್ , ಮಹಮ್ಮದ್ ಆಫ್ರಿದ್ ಎಂದು ಗುರುತಿಸಲಾಗಿದ್ದು, ಕಳ್ಳತನದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
ದೈವಸ್ಥಾನದಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಪೂರ್ವ ನಿಯೋಜಿತವಾಗಿ ಕಳ್ಳತನ ನಡೆಸಿದ್ದು, ದೈವಸ್ಥಾನದಲ್ಲಿ ಕಡಸಾಲೆ ಸೇರಿದಂತೆ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ. ಕಳವು ಮಾಡಿರುವ ಬೆಲೆಬಾಳುವ ಆಭರಣಗಳ ಒಟ್ಟು ಮೌಲ್ಯ 36 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಪ್ರಕರಣ ಸ್ಥಳೀಯವಾಗಿ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ಕೂಡ ನಿರ್ಮಾಣವಾಗಿತ್ತು.
