ಕೆತ್ತಿಕಲ್ ಭೂ ಕುಸಿತ, ಉಸ್ತುವಾರಿ ಸಚಿವರ ಆಕ್ರೋಶ, ಮಣ್ಣು (ತಿನ್ನುವ) ಮಾಫಿಯಾ

ಕರಾವಳಿ

ಭೂ ವಿಜ್ಞಾನ ಇಲಾಖೆ, ನಗರ ಪಾಲಿಕೆ ಅಧಿಕಾರಿಗಳ ವಿರುದ್ದ ಘರ್ಜಿಸಿ, ತನಿಖೆಗೆ ಆದೇಶಿಸಿದ್ದೇನೆ ಅಂದರೆ, ಮಂಗಳೂರಿನ ಜನರು ನಕ್ಕು ಮುಂದೆ ಸಾಗುತ್ತಾರೆ, ಅಷ್ಟೆ. ಸಚಿವರು ಅರ್ಥ ಮಾಡಿಕೊಳ್ಳಲಿ: ಮುನೀರ್ ಕಾಟಿಪಳ್ಳ

ಮಂಗಳೂರಿನ ಕೆತ್ತಿಕಲ್ ನಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಗುಡ್ಡವನ್ನು ಅವೈಜ್ಞಾನಿಕವಾಗಿ ಕತ್ತರಿಸಿದ ಪರಿಣಾಮ ಕುಸಿತದ ಭೀತಿ ಎದುರಾಗಿದೆ. ಈ ಗುಡ್ಡವನ್ನು ಹೆದ್ದಾರಿ ಅಗಲೀಕರಣಕ್ಕೆ ಪೂರ್ವದಲ್ಲೆ ಮಂಗಳೂರಿನ ಭೂ ಮಾಫಿಯಾ, ಮಣ್ಣು ಮಾಫಿಯಾ ಬೇಕಾಬಿಟ್ಟಿ ದೋಚಿದೆ. ಮೊನ್ನೆ ಸ್ಥಳ ಪರಿಶೀಲನೆಗೆ ಬಂದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೆದ್ದಾರಿ ಇಲಾಖೆಯ ಜೊತೆಗೆ ಈ ಮಣ್ಣು ಮಾಫಿಯಾ ವಿರುದ್ದವೂ ಘರ್ಜಿಸಿದರು. “ಕತ್ತರಿಸಿ, ಕತ್ತರಿಸಿ ಕೊಂಡಯ್ದ ಮಣ್ಣ ಎಲ್ಲಿ ಹೋಗಿದೆ ಎಂಬುದನ್ನೂ ತನಿಖೆ ಮಾಡಿಸುತ್ತೇನೆ, ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ದೊಡ್ಡ ಗುಡ್ಡವನ್ನು ಈ ರೀತಿ ಕತ್ತರಿಸುವಾಗ ಭೂ ವಿಜ್ಞಾನ ಇಲಾಖೆ, ಮಂಗಳೂರು ನಗರ ಪಾಲಿಕೆ ಏನು ಮಾಡುತ್ತಿತ್ತು, ಮೌನ ವಹಿಸಿದ್ದು ಯಾಕೆ ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸುವುದಾಗಿ ಘೋಷಿಸಿದ್ದಾರೆ. ಸಚಿವರ ಈ ಮಾತು ದೊಡ್ಡ ರೀತಿಯಲ್ಲಿ ಗಮನ ಸೆಳೆದಿದೆ. ಚರ್ಚೆಗೆ ಕಾರಣವಾಗಿದೆ.

ವಿಷಾದದ ಸಂಗತಿ ಏನೆಂದರೆ, ಗುಡ್ಡವನ್ನು ಬೇಕಾಬಿಟ್ಟಿ ಕತ್ತರಿಸಿದ ಮಣ್ಣು ಮಾಫಿಯಾ, ರಿಯಲ್ ಎಸ್ಟೇಟ್ ಮಾಫಿಯಾದ ಏಜಂಟರು ರಾಜಕೀಯ ಮುಖಂಡರ, ಜನಪ್ರತಿನಿಧಿಗಳ ವೇಷದಲ್ಲಿ ಸಚಿವರು ಸ್ಥಳ ಪರಿಶೀಲನೆ ಮಾಡುವಾಗ ಅವರ ಸುತ್ತಲೇ ಇದ್ದರು‌. ಸಚಿವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು, ಮರಳಿ ವಿಮಾನ ಹತ್ತುವವರಗೆ ಬೇತಾಳದಂತೆ ಅಂಟಿಕೊಂಡಿರುವ ಕೆಲವು ಮುಖಗಳೂ ಇಂತಹ ಮಣ್ಣು (ತಿನ್ನುವ) ಮಾಫಿಯಾದ ಗೆಳೆಯರೇ ಆಗಿದ್ದಾರೆ.‌

ಸಚಿವರ ಮಾತಿನಲ್ಲಿ, ಅವರ ತನಿಖೆಯ ಹೇಳಿಕೆಯ ಕುರಿತು ಜನತೆಗೆ ನಂಬಿಕೆ ಬರ ಬೇಕಾದರೆ ಇಂತಹ ಮಣ್ಣು (ತಿನ್ನಿಸುವ) ಮಾಫಿಯಾಗಳ “ಪ್ರೀತಿ ಪಾತ್ರ” ಮುಖಂಡರನ್ನು ಮೊದಲು ದೂರ ಇಡಬೇಕು. ಸಚಿವರಲ್ಲಿ ದೂರು ಹೇಳಲು ಬರುವವರು ಮುಕ್ತವಾಗಿ ಮಾತಾಡುವ ವಾತಾವರಣ ನಿರ್ಮಿಸಬೇಕು. ಮಾಫಿಯಾಗಳು, ಅವರ ಗೆಳೆಯರು ಹತ್ತಿರ ಇದ್ದಷ್ಟು ಜನರು ದೂರ ದೂರ ಹೋಗುತ್ತಾರೆ. ಅದರಲ್ಲಿಯೂ ಮರಳು ದಂಧೆ, ಟಿಡಿಆರ್ ಹಗರಣ, ಬೀದಿ ಬದಿ ವ್ಯಾಪಾರಿಗಳ ವಿರುದ್ದದ ಕಾರ್ಯಾಚರಣೆಯ ವಿಷಯಗಳಲ್ಲಿ ಬಿಜೆಪಿ ಆಡಳಿತದ ನಗರ ಪಾಲಿಕೆ, ಬಿಜೆಪಿ ಶಾಸಕರ ಜೊತೆ ಶಾಮೀಲಾಗಿರುವವರನ್ನು ಜೊತೆಗಿಟ್ಟು ಕೊಂಡು ಸಚಿವರು ಅಕ್ರಮವಾಗಿ ಗುಡ್ಡ ಕತ್ತರಿಸುವಾಗ “ಮೌನ” ವಹಿಸಿದ ಭೂ ವಿಜ್ಞಾನಿ ಇಲಾಖೆ, ನಗರ ಪಾಲಿಕೆ ಅಧಿಕಾರಿಗಳ ವಿರುದ್ದ ಘರ್ಜಿಸಿದರೆ, ತನಿಖೆಗೆ ಆದೇಶಿಸಿದ್ದೇನೆ ಅಂದರೆ, ಮಂಗಳೂರಿನ ಜನರು ನಕ್ಕು ಮುಂದೆ ಸಾಗುತ್ತಾರೆ, ಅಷ್ಟೆ. ಸಚಿವರು ಅರ್ಥ ಮಾಡಿಕೊಳ್ಳಲಿ.