ಮಂಗಳೂರು ಮ.ನ.ಪಾಲಿಕೆಯ ಒಳಹೊಕ್ಕರೆ ಕೇಳಿ ಬರುವ ವೇದವಾಕ್ಯವೊಂದೆ ಲಂಚ..ಲಂಚ..! ಇಲ್ಲಿ ಲಂಚ ಮುಟ್ಟದವನು ಪಾಪಿ..!

ಕರಾವಳಿ

ಕಂದಾಯ ಇಲಾಖೆಯಲ್ಲಿ ಭಾರೀ ಗೋಲ್ಮಾಲ್

‘ಸರಕಾರದ ಕೆಲಸ ದೇವರ ಕೆಲಸ’ ಅಂತ ಹಿರಿಯರು ಹೇಳುತ್ತಾರೆ. ಅಲ್ಲದೆ ಸರಕಾರಿ ಹುದ್ದೆಯಲ್ಲಿ ಇರುವವರು ಅದೃಷ್ಟವಂತರು ಅಂತನೂ ಕೂಡಾ ಹೇಳುತ್ತಾರೆ. ಅಟೆಂಡರ್ ನಿಂದ ಹಿಡಿದು ಅಧಿಕಾರಿ ವರ್ಗದವರಿಗೆ ಕೆಲಸ ಮಾಡೋ ನೌಕರರಿಗೆ ದೇವರು ಹೂ ಹೆಚ್ಚಿಗೆ ಹಾಕಿ ಭೂಮಿಗೆ ಕಳಿಸಿರುತ್ತಾರೆ. ಅದನ್ನು ಒಳ್ಳೆಯ ಸದುಪಯೋಗ ಮಾಡಬಹುದು ಅಥವಾ ದುರುಪಯೋಗ ಬೇಕಾದರೂ ಆಗಬಹುದು. ಅದು ನಮ್ಮ ಕೈಯಲ್ಲಿರುತ್ತದೆ. ಆದರೆ ‘ಜೇನು ಬಿಚ್ಚೋರು ಕೈ ನೆಕ್ಕಲ್ವ’ ಅಂತಾರೆ. ಆದರೆ ಇಡೀ ಜೇನಿನ ಗೂಡನ್ನೇ ತಿನ್ನೋಕೆ ಹೋಗಬಾರದು. ಅಂದರೆ ಸರಕಾರ ಕೈ ತುಂಬಾ ಸಂಬಳ ಕೊಡುತ್ತದೆ. ಗಿಂಬಳ ಪಡೆಯುವಾಗ ಲೆಕ್ಕ ಬೇಕು ಅಲ್ಲವೇ, ಊಟ ಅತೀ ಹೆಚ್ಚಾದಾಗ ವಾಂತಿ ಬರುತ್ತದೆ. ಇಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಅನ್ನೋ ಹಾಗೆ. ಅಂದರೆ ಕೆಲವು ಅಧಿಕಾರಿಗಳು ಸರಕಾರಿ ಸೇವೆಯಲ್ಲಿದ್ದಾಗ ಕರ್ತವ್ಯ ಲೋಪ ಮಾಡಿ ಅಮಾನತ್ತಾಗುತ್ತಾರೆ ಮತ್ತು ಆರೋಪ ಎದುರಿಸಿ ಕೆಲವರಿಗೆ ತಿನ್ನಿಸಿ ಆರೋಪ ಮುಕ್ತರಾಗಿ ಬರುತ್ತಾರೆ. ಆದರೆ ಬುದ್ಧಿ ಬರೋಲ್ಲ. ಮತ್ತೆ ಅದೇ ತಪ್ಪುಗಳನ್ನು ಹೆಚ್ಚು ಹೆಚ್ಚು ಮಾಡಲು ಶುರು ಮಾಡುತ್ತಾರೆ. ಈ ಮಾತಿಗೆ ತಕ್ಕಂತೆ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ವರ್ತಿಸುವುದು ಸುಳ್ಳಲ್ಲ.

ಲಂಚ..ಲಂಚ..ಲಂಚ.. ಮಂಗಳೂರು ಮಹಾನಗರ ಪಾಲಿಕೆಯ ಒಳಹೊಕ್ಕರೆ ಕೇಳಿ ಬರುವ ವೇದವಾಕ್ಯ ಇದೊಂದೆ. ಇಲ್ಲಿ ಲಂಚ ಮುಟ್ಟದವನು ಪಾಪಿ ಅನ್ನುವಂತೆ ಭ್ರಷ್ಟಾಚಾರದ ಪರಮಾವಧಿ ಮೇಳೈಸಿದೆ. ಇಡೀ ಮಂಗಳೂರು ನಗರದ ಶಕ್ತಿ ಕೇಂದ್ರವಾದ ಮನಪಾದಲ್ಲಿ ಊಟದ ಸ್ಪೀಡಂತೂ ಬಲು ಜೋರು. ಕಂದಾಯ ಇಲಾಖೆಯಲ್ಲಿ ಹೆಗ್ಗಣಗಳೇ ತುಂಬಿಕೊಂಡಿದೆ. ಟಾರ್ಚ್ ಲೈಟ್ ಹಾಕಿ ಹುಡುಕಿದರೂ ಒಳ್ಳೆಯ ಅಧಿಕಾರಿ ಕಾಣಸಿಗುವುದೇ ಕಷ್ಟ. ಇಂಜಿನಿಯರಿಂಗ್ ವಿಭಾಗದ ಬಗ್ಗೆ ಹೇಳಿ ಪ್ರಯೋಜನವಿಲ್ಲ. ಮೃಷ್ಟಾನ್ನ ಭೋಜನ ಅವರಿಗೆ. ಆರೋಗ್ಯ ಇಲಾಖೆಯಂತೂ ಜೀವ ಕಳೆದುಕೊಂಡು ಬಿಟ್ಟಿದೆ. ಟಿಪಿಓ ಸೆಕ್ಷನ್ ಮೈಸೂರು ಮುಡಾ ಹಗರಣವನ್ನೇ ಬೆಚ್ಚಿಬೀಳಿಸುವ ಲಂಚಾವತಾರ ಇಲ್ಲಿ ನಡೆಯುತ್ತಿದೆ. ಸ್ಮಾರ್ಟ್ ಸಿಟಿಯಂತೂ ಗುಂಡಿ ಅಗೆದು ಜೇಬು ತುಂಬಿಸಿಕೊಳ್ಳುವ ಕರಪ್ಟ್ ಇಲಾಖೆಯಾಗಿ ಮಾರ್ಪಟ್ಟಿದೆ. ಇನ್ನು ವಿದ್ಯುತ್ ವಿಭಾಗ, ನೀರಿನ ವಿಭಾಗ, ಇತರ ವಿಭಾಗಗಳೆಲ್ಲ ಸೇವೆ ಮಾಡುವ ಬದಲು ಕಾಸು ಮಾಡುವ ದಂಧೆಯಾಗಿ ಬದಲಾಯಿಸಿದ್ದಾರೆ. ಲಂಚಕ್ಕೆ ಇಲ್ಲಿ ಹಿರಿಯ, ಕಿರಿಯ ಅಧಿಕಾರಿ ಅನ್ನುವ ಭೇದಭಾವ ಇಲ್ಲ. ಅವರವರ ಹುದ್ದೆಗೆ ತಕ್ಕಂತೆ ಲಂಚದ ಹಣ ಫಿಕ್ಸ್ ಆಗಿರುತ್ತದೆ. ಜನಸಾಮಾನ್ಯರಂತೂ ಇಲ್ಲಿ ಕೆಲಸ ಮಾಡಿ ಹೋಗಲು ಸಾಧ್ಯವಿಲ್ಲ. ಆ ಫೈಲ್ ಸರಿ ಇಲ್ಲ, ಇದೂ ಇಲ್ಲ ಎಂದು ಸುಮ್ಮನೆ ಅಲೆದಾಡಿಸುವುದೇ ಜಾಸ್ತಿ. ಬ್ರೋಕರ್ ಮುಖಾಂತರ ಹೋದರೆ ಮಾತ್ರ ನಿಮ್ಮ ಕೆಲಸ ಸಲೀಸು. ಒಂದೊಂದು ಫೈಲಿಗೂ ಇಂತಿಷ್ಟು ರೇಟು ಫಿಕ್ಸ್ ಮಾಡಿಸಿಕೊಂಡೇ ಬ್ರೋಕರ್ ಕೆಲಸಕ್ಕೆ ಇಳಿಯುತ್ತಾನೆ. ಕೆಲಸ ಆಗುವಾಗ ಬ್ರೋಕರ್ ಕೈಯಲ್ಲಿ ಬರೀ ಚಿಲ್ಲರೆ ಉಳಿದರೆ, ಅಧಿಕಾರಿಗಳ ಕೈಯಲ್ಲಿ ಗರಿಗರಿ ನೋಟು ರಾರಾಜಿಸುತ್ತದೆ. ಆ ಪರಿ ಹಂಡಾಲೆದ್ದು ಹೋಗಿದೆ ಮಂಗಳೂರು ಮಹಾನಗರ ಪಾಲಿಕೆ.

ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮೃಷ್ಟಾನ್ನ ಭೋಜನ ನೀಡುವ ಇಲಾಖೆಯೆಂದರೆ ಅದು ಕಂದಾಯ ಇಲಾಖೆ. ಇಲ್ಲಿದ್ದು ಎತ್ತಂಗಡಿಯಾದ ಅನೇಕರು ಮತ್ತೆ ಮತ್ತೆ ಇಲ್ಲಿಯೆ ಬೀಡು ಬಿಟ್ಟಿರುತ್ತಾರೆ. ಕಂದಾಯ ಸೆಕ್ಷನ್ ಬಿಟ್ಟು ಹೋಗಲು ಇಲ್ಲಿನ ಯಾವುದೇ ಅಧಿಕಾರಿಗಳಿಗೂ ಮನಸ್ಸು ಒಪ್ಪುತ್ತಿಲ್ಲ. ವರ್ಗಾವಣೆಯಾದರೂ ರಾಜಕಾರಣಿಗಳೊಂದಿಗೆ ವಸೂಲಿ ಬಾಜಿ ನಡೆಸಿ ಇಲ್ಲಿಯೇ ಪರ್ಮನೆಂಟಾಗಿ ಗೂಟ ಹಾಕುತ್ತಾರೆ.

ಕಂದಾಯ ಇಲಾಖೆಯಲ್ಲಿ ಒಂದು ಖಾತೆ ಮಾಡಬೇಕಾದರೆ ನಾಲ್ವರು ಅಧಿಕಾರಿಗಳ ಟೇಬಲ್ ಸುತ್ತಿಕೊಂಡು ಬರಬೇಕು. ಕನಿಷ್ಠ ಎಂದರೂ 4000 ರೂಪಾಯಿ ಲಂಚ ಪಾವತಿಸಿದರಷ್ಟೇ ಖಾತೆ ಸಿಗುವುದು. ಒಂದೊಂದು ಟೇಬಲ್ಲಿಗೆ ಕನಿಷ್ಟವೆಂದರೂ ಅಂದಾಜು 500 ರೂಪಾಯಿ ಹೋಗುತ್ತದೆ. ಇದು ಕೇವಲ ಖಾತೆ ಒಂದರ ಕಥೆ ಅಷ್ಟೇ. ಇನ್ನೂ ಕಂದಾಯ ಇಲಾಖೆಯಲ್ಲಿ ನಡೆಯುವ ದೊಡ್ಡ ದೊಡ್ಡ ಗೋಲ್ ಮಾಲ್ ವಿವರಗಳು ಬೇರೇನೇ ಇದೆ.( ಸ್ಪೆಷಲ್ ನ್ಯೂಸ್ ಮೀಡಿಯಾಕ್ಕೆ ಈ ಬಗ್ಗೆ ಇಂಚಿಂಚೂ ಮಾಹಿತಿ ಲಭಿಸಿದ್ದು, ಹಂತ ಹಂತವಾಗಿ ಮುಂದೆ ವಿವರಿಸುತ್ತೇವೆ). ಇಲ್ಲಿಯ ಕ್ಲಾರ್ಕ್, ಆರ್.ಐ, ಎ.ಆರ್.ಒ, ಆರ್.ಒ (ಕಂದಾಯ ಅಧಿಕಾರಿ), ಝೋನಲ್ (ವಲಯಾಯುಕ್ತ), ಡಿಸಿಆರ್ (ಉಪ ಆಯುಕ್ತರು, ಕಂದಾಯ ಇಲಾಖೆ), ಹೀಗೆ ಪ್ರತಿಯೊಂದು ಫೈಲ್ ಒಂದೊಂದು ಟೇಬಲ್ಲಿಗೆ ಹೋಗಿಯೇ ಬರಬೇಕು. ಫೈಲ್ ಸುಮ್ಮನೆ ಹೋಗುವುದಿಲ್ಲ. ಇವರ ಕೈ ಬೆಚ್ಚ ಮಾಡಿದರಷ್ಟೇ ಫೈಲ್ ಮೂವ್ ಆಗುವುದು. ಇಲ್ಲವಾದರೆ ವರ್ಷ ಹೋದರೂ ಕಚೇರಿಯಲ್ಲೇ ಕೊಳೆಯುತ್ತದೆ. ಒಂದು ಖಾತೆ ಮಾಡಲು ಸರಕಾರವೇ 21ದಿನಗಳ ಅವಧಿಯನ್ನು ವಿಧಿಸಿದೆ. ಆದರೆ ಇದು ಸರಕಾರದ ನಿಯಮದ ಪುಸ್ತಕದಲ್ಲಿ ಮಾತ್ರ ಇರುವುದು. ಇದಕ್ಕೂ ನಮಗೂ ಸಂಬಂಧವಿಲ್ಲವೆಂದು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಿಳಿದಂತಿದೆ. ದುಡ್ಡು ಕೊಡದಿದ್ದರೆ 21 ದಿನ ಬಿಡಿ ಒಂದು ವರ್ಷ ಕಳೆದರೂ ನಿಮಗೆ ಖಾತಾ ಸಿಗದು. ಇದು ಕಂದಾಯ ಇಲಾಖೆಯೊಂದರ ಊಟದ ಸ್ಪೀಡಿನ ಸಣ್ಣ ಕಥೆಯಷ್ಟೇ. ನೀವು ಬ್ರೋಕರ್ ಮೂಲಕ ಹೋಗಿ ನೋಡಿ. ಎಷ್ಟು ಸಲೀಸಾಗಿ ಕೆಲಸ ನಡೆಯುತ್ತದೆ ಎಂದು. ಇಲ್ಲವಾದರೆ ಸರ್ವರ್ ಸರಿ ಇಲ್ಲ, ಒಟಿಪಿ ಬರುವುದಿಲ್ಲ, ದಾಖಲೆ ಸರಿ ಇಲ್ಲ ಈ ರೀತಿ ರೆಡಿಮೇಡ್ ಉತ್ತರವೇ ನಿಮಗೆ ಬರುವುದು.

ಇನ್ನೂ ಕಂದಾಯ ಇಲಾಖೆಯ ಮತ್ತೊಂದು ಗೋಲ್ಮಾಲ್ ನೋಡಿದರೆ ನೀವು ಬೆಚ್ಚಿ ಬೀಳಬಹುದು. ಈಗೂ ನಡೆಯುತ್ತಾ ಅನ್ನುವುದನ್ನು ಮೂಗಿನ ಮೇಲೆ ಬೆರಳಿಡಬಹುದು. ನಿಮಗೆ ಖಾತೆ ಸಿಗಬೇಕಾದರೆ ತೆರಿಗೆ (Tax) ಹಣ ಕಟ್ಟಲೇಬೇಕು. ದೊಡ್ಡ ಉದ್ಯಮಿಗಳ, ಬಿಲ್ಡರುಗಳ ಲಕ್ಷಗಟ್ಟಲೇ ಟ್ಯಾಕ್ಸ್ ಹಣ ಬಾಕಿಯಿರುತ್ತದೆ. ಖಾತೆ ಮಾಡುವಾಗ ಅದನ್ನು ಪಾವತಿಸಬೇಕು. ಯಾರಾದರದ್ದು ಅಂದಾಜು 1 ಲಕ್ಷ ಟ್ಯಾಕ್ಸ್ ಬಾಕಿ ಇದ್ದರೆ ಅಲ್ಲಿಯೇ ಸೆಟ್ಲ್ ಮೆಂಟ್ ಮಾಡುವ ಗೋಲ್ಮಾಲ್ ವಿಧಾನವನ್ನು ಮಹಾನಗರ ಪಾಲಿಕೆಯ ಕಂದಾಯ ನಿರೀಕ್ಷಕರು ಕಂಡುಕೊಂಡಿದ್ದಾರೆ. ಹಿಂದೆಲ್ಲಾ ರಶೀದಿಯಲ್ಲಿ ಬರೆಯುವಾಗ ಗುಳುಂ ಮಾಡುವುದು ಸುಲಭವಿತ್ತು. ಕಂಪ್ಯೂಟರ್ ಸಿಸ್ಟಂ ಬಂದ ಮೇಲೆ ಅದೆಲ್ಲಾ ಕಷ್ಟ ಅನ್ನುವುದು ಜನಸಾಮಾನ್ಯರ ಸರಳ ವಾದ. ಈ ಅಧಿಕಾರಿಗಳು ರಂಗೋಲಿ ಕೆಳಗೆ ನುಸುಳುವುದರಲ್ಲಿ ನಿಸ್ಸೀಮರು. ಕಂಪ್ಯೂಟರ್ ಸಿಸ್ಟಂ ನಲ್ಲಿ ನಾನ್ ಫೈಡ್ ಇದ್ದದ್ದನ್ನು ಫೈಡ್ ಆಗಿ ತೋರಿಸುವುದರಲ್ಲಿ ನಿಸ್ಸೀಮರು. ದುಡ್ಡು ಅಧಿಕಾರಿ ಕೈಗೆ. ಸರಕಾರದ ಬೊಕ್ಕಸ ಲೂಟಿ ಇದಕ್ಕೆ ಕಂದಾಯ ಇಲಾಖೆಯ ಆರ್.ಐ ಸಾಥ್ ನೀಡಿದ್ದು, ಆತನ ಅಣತಿಯಂತೆ ನಡೆಯುತ್ತಿದೆಯಂತೆ. ಈಗಾಗಲೇ ಇಂತಹ ಹತ್ತಾರು ಪ್ರಕರಣಗಳು ನಡೆದಿದೆ ಅನ್ನುವ ಸುದ್ದಿ ಕೇಳಿಬರುತ್ತಿದೆ. ದುಡ್ಡು ಕೊಡದೆ ಕೆಲಸ ಮಾಡಲು ಆಗುವುದಿಲ್ಲವೇ ಎಂದು ನೀವು ಸಿಬ್ಬಂದಿಯವರಲ್ಲಿ ಕೇಳಿ ನೋಡಿ. ಅದು ಮೇಲಾಧಿಕಾರಿಗಳಿಗೆ ಕೊಡಲಿಕ್ಕೆ ಇದೆ ಅನ್ನುವ ಧಿಮಾಕಿನ ಉತ್ತರ ಕೂಡಾ ಬರುತ್ತದೆ. ನಾವಿಲ್ಲಿ ಕಂದಾಯ ಇಲಾಖೆಯ ಒಂದು ಸೆಕ್ಷನ್ ನಲ್ಲಿ ನಡೆಯುವ ಕೆಲವೊಂದು ಸಣ್ಣ ಪುಟ್ಟ ಸ್ಯಾಂಪಲ್ ಗಳನ್ನು ಮಾತ್ರ ನಿಮ್ಮ ಮುಂದೆ ಇಟ್ಟಿದ್ದೇವೆ. ದೊಡ್ಡ ದೊಡ್ಡ ಘಟನೆಗಳು ಬೇರೇನೇ ಇದೆ. ಅದನ್ನೆಲ್ಲಾ ಬರೆಯುತ್ತಾ ಹೋದರೆ ದೊಡ್ಡ ಕಾದಂಬರಿಯಾದೀತು. ಮುಂದೆ ಆ ಬಗ್ಗೆ ಕಂಪ್ಲೀಟ್ ಡೀಟೈಲ್ಸ್ ನೀಡಲಿದ್ದೇವೆ.

ಕಂದಾಯ ಇಲಾಖೆಯ ಕಥೆ ಈ ರೀತಿಯಾದರೆ ಇಂಜಿನಿಯರಿಂಗ್ ವಿಭಾಗದ ಕಥೆ ಇನ್ನೂ ಅದಕ್ಕಿಂತ ಭೀಕರ. ಗುತ್ತಿಗೆದಾರರೊಂದಿಗೆ ನೇರ ಸೆಟ್ಲ್ ಮೆಂಟ್ ನಡೆಯುತ್ತಿದೆಯಂತೆ. ಒಂದೊಂದು ಕಾಮಗಾರಿಗಳಲ್ಲಿ ಇಂತಿಷ್ಟು ರೇಟು ಫಿಕ್ಸ್. ಲಂಚ ಮುಟ್ಟದೇ ಇಂಜಿನಿಯರಿಂಗ್ ಸೆಕ್ಷನ್ ನಲ್ಲಿ ಕೆಲಸವೇ ನಡೆಯಲ್ಲ. ಟಿಪಿಓ ಸೆಕ್ಷನ್ ನದ್ದು ಬೃಹತ್ ಗೋಲ್ಮಾಲ್. ಬಿಲ್ಡರ್ ಗಳೊಂದಿಗೆ ನೇರ ನಡೆಯುವ ಕಮಾಯಿ ಟಿಪಿಓ ಸೆಕ್ಷನ್ ನದ್ದು. ಇದರ ಕಥೆ ಬರೆಯುತ್ತಾ ಹೋದರೆ ಚಂದಮಾಮ ಕಥೆಯಂತಾಗಬಹುದು. ಇದರ ನಡುವೆಯೇ ಸ್ಮಾರ್ಟ್ ಸಿಟಿ ಇಲಾಖೆಯೊಂದಿದೆ. ಸ್ಮಾರ್ಟಾಗಿ ದುಡ್ಡು ನುಂಗುವುದರಲ್ಲಿ ಇವರಷ್ಟು ಎತ್ತಿದ ಕೈ ಇನ್ಯಾರೂ ಇಲ್ಲ. ಇವರಿಗೆಲ್ಲಾ ಅಂಕುಶ ಹಾಕುವವರು ಯಾರು?

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಷ್ಟೆಲ್ಲಾ ಲಂಚವತಾರ ಅನಾಚಾರ ನಡೆಯುತ್ತಿದ್ದರೂ ಆಯುಕ್ತರೇಕೆ ಮೌನ ವಹಿಸುತ್ತಿದ್ದಾರೆ ಅನ್ನುವ ಪ್ರಶ್ನೆ ಮೂಡುತ್ತದೆ. ಕಂದಾಯ ಇಲಾಖೆಯಲ್ಲಿ ತೆರಿಗೆ ಹಣ ನುಂಗಿ ಸರಕಾರದ ಬೊಕ್ಕಸವನ್ನೇ ಲೂಟಿ ಮಾಡುತ್ತಿರುವಾಗ ಕಣ್ಮುಚ್ಚಿ ಕುಳಿತಿರುವುದೇಕೆ? ತಮಗೂ ಇದರಲ್ಲಿ ಪಾಲಿದೆಯಾ? ಪಾಲಿಕೆಯ ನೆಲ ಮಹಡಿಯಲ್ಲಿ ಟ್ಯಾಕ್ಸ್ ಚಲನ್ ಮಾಡಿ ಕೊಡುವ ಮಹಿಳೆಯರಲ್ಲಿ ಒಬ್ಬರು ಖಾತೆ ಮಾಡಿಕೊಡುತ್ತೇವೆ ಎಂದು ಬರೀ 5000 ರೂಪಾಯಿ ಪಡೆದಿದ್ದಕ್ಕೆ ಅವರನ್ನು ಮನಪಾದಿಂದಲೇ ಎತ್ತಂಗಡಿ ಮಾಡಿದ ಆಯುಕ್ತರು ಲಕ್ಷ ನುಂಗುವ ಖದೀಮರನ್ನೇಕೆ ಹಾಗೆ ಬಿಟ್ಟಿದ್ದು? ಇಲ್ಲಿನ ಸಿಬ್ಬಂದಿಗಳು ಒಂದೊಂದು ಫೈಲಿನಲ್ಲಿ ಕಮೀಷನರ್ ಗೆ ಕೊಡಲಿಕ್ಕೆ ಉಂಟು ಅಂತ ಹೇಳುತ್ತಾರಲ್ಲ ಇದು ನಿಜನಾ?

ಮಹಾನಗರ ಪಾಲಿಕೆಗೆ ಬರುವ ಜನಸಾಮಾನ್ಯರು ವಿಶ್ರಾಂತಿ ಕೊಠಡಿಯಲ್ಲಿ ಫ್ಯಾನ್ ಹಾಕಿ ಕುಳಿತುಕೊಂಡಿದ್ದಕ್ಕೆ ಒಂದು ವಾರ ವಿದ್ಯುತ್ ಕನೆಕ್ಷನ್ ಕಡಿತಗೊಳಿಸಿದ ಆಯುಕ್ತರು ತಮ್ಮ ಚೇಂಬರಿನಲ್ಲಿ ಇಡೀ ದಿನ ಎಸಿ ಹಾಕಿ ಕುಳಿತುಕೊಳ್ಳುವುದಿಲ್ಲವೇ? ಮಹಾನಗರ ಪಾಲಿಕೆಯ ವಿದ್ಯುತ್ ಬಿಲ್ಲನ್ನು ಜನಸಾಮಾನ್ಯರ ತೆರಿಗೆ ಹಣದಿಂದ ಕೊಡುವುದು. ಆಯುಕ್ತರ ಕಿಸೆಯಿಂದ ಅಲ್ಲವಲ್ಲ? ತಮ್ಮ ಅಧೀನದಲ್ಲಿರುವ ಅಧಿಕಾರಿಗಳು ಸರಕಾರದ ಬೊಕ್ಕಸವನ್ನೇ ಲೂಟಿ ಮಾಡಿ ವಂಚಿಸುತ್ತಿದ್ದರಲ್ಲಾ ಅವರ ಮೇಲೆ ಯಾವಾಗ ಕ್ರಮ ಕೈಗೊಳ್ಳುತ್ತೀರಿ ಆಯುಕ್ತರೇ?