ಹೆಲ್ಮೆಟ್‌, ದಾಖಲೆ ಇಲ್ಲದಿದ್ದರೆ ಪೊಲೀಸರು ದಂಡ ವಿಧಿಸುತ್ತಾರೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ದಂಡ ವಿಧಿಸುವವರು ಯಾರು.?

ರಾಷ್ಟ್ರೀಯ

ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿದರೆ, ಆ ರಸ್ತೆಯ ನಿರ್ವಹಣೆಯ ಹೊಣೆ ಹೊತ್ತ ಇಲಾಖೆಯೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು: ಹೈಕೋರ್ಟ್‌

ರಸ್ತೆಯ ಗುಂಡಿ- ಹೊಂಡಗಳಿಗೆ ಬಿದ್ದು ಸತ್ತರೂ ಪೊಲೀಸರು ಮಾತ್ರ ಅಜಾಗರೂಕತೆಯ ಚಾಲನೆ ಎಂದು ಷರಾ ಬರೆಯುತ್ತಾರೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಹಲವು ಕಡೆ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಎದ್ದು ಅಪಘಾತಕ್ಕೆ ಕಾರಣವಾಗುತ್ತಿದೆ. ಮಳೆ ಬರುವ ಮುಂಚೆ ರಸ್ತೆಗಳ ಪ್ಯಾಚ್‌ ವರ್ಕ್ ಕೆಲಸ ಮಾಡದ ಹಿನ್ನೆಲೆಯಲ್ಲಿ ಆಗ ಸಣ್ಣ ಪ್ರಮಾಣದಲ್ಲಿದ್ದ ಗುಂಡಿಗಳು ಮಳೆಯ ಕಾರಣದಿಂದ ಇದೀಗ ಬೃಹತ್‌ ಹೊಂಡಗಳಾಗಿದೆ. ಕೆಲವು ಕಡೆ ಮಳೆ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆಯಲ್ಲಿರುವ ಹೊಂಡ ಗುಂಡಿಗಳಿಗೆ ಬಿದ್ದು ಜನಸಾಮಾನ್ಯರು ಪ್ರತಿದಿನ ಸಮಸ್ಯೆ ಅನುಭವಿಸುತ್ತಿದ್ದಾರೆ

ಕಳಪೆ ಕಾಮಗಾರಿಯಿಂದಾಗಿಯೇ ಸೃಷ್ಟಿಯಾಗುತ್ತಿರುವ ರಸ್ತೆ ಗುಂಡಿಗೆ ಕಾರಣರಾದ ಗುತ್ತಿಗೆದಾರ, ಎಂಜಿನಿಯರ್‌ಗಳಿಗೆ ಕನಿಷ್ಠ ಶಿಸ್ತುಕ್ರಮದ ಶಿಕ್ಷೆಯೂ ಆಗುತ್ತಿಲ್ಲ. ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿದರೆ, ಆ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕಾದ ಹೊಣೆ ಹೊತ್ತ ಇಲಾಖೆಯೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರು ದೂರು ನೀಡಲು ನಗರ ಸ್ಥಳೀಯ ಸಂಸ್ಥೆಗಳು ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಆದರೆ, ಸ್ಥಳೀಯ ಸಂಸ್ಥೆಗಳು ಈ ನಿರ್ದೇಶನವನ್ನೂ ಪಾಲಿಸುತ್ತಿಲ್ಲ. ರಸ್ತೆ ಗುಂಡಿಯಿಂದಾಗಿ ಸತ್ತವರ ಕುಟುಂಬದವರಿಗೆ ಇದುವರೆಗೂ ಪರಿಹಾರ ನೀಡಿದ ಉದಾಹರಣೆ ಇಲ್ಲ. ಇಂತಹ ಪರಿಪಾಟವೇ ನಮ್ಮಲ್ಲಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು. ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಉತ್ತರವೂ ಇದೇ ಆಗಿದೆ.

ಎಫ್‌ಐಆರ್‌ನಲ್ಲಿ ‘ಸ್ಥಳೀಯ ಸಂಸ್ಥೆ ನಿರ್ಲಕ್ಷ್ಯದಿಂದಾಗಿರುವ ಗುಂಡಿಯಿಂದ ಸಂಭವಿಸಿದ ಅಪಘಾತ’ ಎಂದು ನಮೂದಿಸಿದರೆ ಮಾತ್ರ ಪರಿಹಾರ ನೀಡಲು ಸಾಧ್ಯ’ ಆದರೆ ಪೊಲೀಸರು ಮಾತ್ರ ಅಜಾಗರೂಕತೆಯ ಚಾಲನೆ ಎಂದು ಷರಾ ಬರೆಯುತ್ತಾರೆ. ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿದೆ ಎಂದು ಉಲ್ಲೇಖಿಸುವುದಿಲ್ಲ ಇದೇ ದೊಡ್ಡ ದುರಂತ.!

ಗುಣಮಟ್ಟದ ರಸ್ತೆ ನಿರ್ಮಿಸದಿರುವುದೇ ರಸ್ತೆ ಗುಂಡಿ
ಗಳು ಹೆಚ್ಚಾಗಲು ಕಾರಣ. ನಿಯಮಗಳ ಪ್ರಕಾರ ನಿರ್ಮಾಣ ವಾದ ಒಂದು ರಸ್ತೆ ಕನಿಷ್ಠ 10 ವರ್ಷ ಬಾಳಿಕೆ ಬರಬೇಕು. ಆದರೆ, ಕಳಪೆ ಕಾಮಗಾರಿಯಿಂದ ಒಂದು ಮಳೆಗೇ ರಸ್ತೆಗಳಲ್ಲಿ ಗುಂಡಿಗಳು ಬೀಳತೊಡಗುತ್ತವೆ. ಒಂದು ಕಿ.ಮೀ ರಸ್ತೆ ನಿರ್ಮಾಣಕ್ಕೆ ₹2.5 ಕೋಟಿ ವೆಚ್ಚ ಮಾಡಲಾಗುತ್ತದೆ. ಎಲ್ಲಾ ನಿಯಮಗಳನ್ನೂ ಟೆಂಡರ್‌ ದಾಖಲೆ ಹಾಗೂ ಪ್ರಕ್ರಿಯೆಗಳಲ್ಲಿ ತೋರಲಾಗಿರುತ್ತದೆ. ಅದರಂತೆಯೇ ಕಾಮಗಾರಿ ಅನುಷ್ಠಾನವಾಗುತ್ತಿಲ್ಲ. ಕಾಮಗಾರಿಗೆ ಒಂದು ವಿಸ್ತೃತ ಯೋಜನಾ ವರದಿ ಇರುತ್ತದೆ. ಗುತ್ತಿಗೆದಾರರು, ನಿರ್ವಹಣಾ ಸಂಸ್ಥೆ, ಎಂಜಿನಿಯರ್‌ಗಳ ಮೇಲ್ವಿಚಾರಣೆಯೂ ಇರುತ್ತದೆ. ಆದರೆ, ಕಳಪೆ ಕಾಮಗಾರಿಯಾದರೂ ಇವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಎಲ್ಲಾ ಹಂತದಲ್ಲಿ ಈ ಅಧಿಕಾರಿಗಳೂ ಈ ಕಳಪೆ ಕಾಮಗಾರಿಗೆ ಕಾರಣವಾಗಿದ್ದರೂ ಅವರ ವಿರುದ್ದ ಶಿಸ್ತುಕ್ರಮವಾಗುವುದಿಲ್ಲ.

ರಸ್ತೆ ನಿರ್ಮಾಣಕ್ಕೆ ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ನಿಯಮಾವಳಿಗಳನ್ನು ರೂಪಿಸಿದೆ. ಇದನ್ನೇ ರಾಜ್ಯದಾದ್ಯಂತ ಎಲ್ಲಾ ಇಲಾಖೆಗಳು ಪಾಲಿಸುವುದು. ಐಆರ್‌ಸಿ ಪ್ರಕಾರ, ಒಂದು ರಸ್ತೆ ಕನಿಷ್ಠ 8 ರಿಂದ 10 ವರ್ಷ ಬಾಳಿಕೆ ಬರಬೇಕು. ಆದರೆ, ಒಂದೇ ವರ್ಷಕ್ಕೆ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತವೆ. ಗುಂಡಿಗಳಾಗುವುದು ಸ್ಥಳೀಯ ಸಂಸ್ಥೆಗೆ ಮೊದಲೇ ಗೊತ್ತಿರುತ್ತದೆ ಎಂಬಂತೆ ಪ್ರತಿ ವರ್ಷ ಬಜೆಟ್‌ನಲ್ಲಿ ಹತ್ತಾರು ಕೋಟಿ ರೂಪಾಯಿಯನ್ನು ರಸ್ತೆ ಗುಂಡಿ ದುರಸ್ತಿಗೇ ಮೀಸಲಿಡಲಾಗುತ್ತದೆ. ಇದು ರಸ್ತೆ ಕಾಮಗಾರಿ ಮೇಲೆ ಎಂಜಿನಿಯರ್‌ಗಳಿಗೆ ಇರುವ ಭರವಸೆಯನ್ನು ತೋರುತ್ತದೆ!

ಟೆಂಡರ್‌ ಪ್ರಕ್ರಿಯೆಯಿಂದ ಹಿಡಿದು ಕಾರ್ಯಾದೇಶ, ಕಾಮಗಾರಿಗೆ ಚಾಲನೆ, ಕಾಮಗಾರಿ ನಡೆಯುತ್ತಿರುವಾಗ, ಮುಗಿದು ಬಿಲ್‌ ಪಡೆಯುವ ಎಲ್ಲ ಹಂತದಲ್ಲೂ ಎಲ್ಲರಿಗೂ ಪರ್ಸೆಂಟೇಜ್‌ ಕೊಡಲೇಬೇಕು. ನಿಯಮ ಪಾಲಿಸುತ್ತಾ ಕಾಮಗಾರಿ ಮಾಡಲು ಮುಂದಾದರೂ ಪರ್ಸೆಂಟೇಜ್‌ ಪಡೆಯುವವರು ಬಿಡುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗುತ್ತಿಗೆದಾರರು ಬೇಸರ ವ್ಯಕ್ತಪಡಿಸುತ್ತಾರೆ.

ಮುಂಜಾಗ್ರತೆ ಕ್ರಮವಿಲ್ಲ, ಕಳಪೆ ಕಾಮಗಾರಿ ಎಂದು ಗೊತ್ತಾದರೆ ಅವರಿಗೆ ಉಗ್ರ ಶಿಕ್ಷೆಯಾಗಬೇಕು. ಹೀಗಾದರೆ ರಸ್ತೆಗಳು ಚೆನ್ನಾಗಿರುತ್ತವೆ. ನಮ್ಮಲ್ಲಿ ಇಂತಹ ವ್ಯವಸ್ಥೆ ಇಲ್ಲ. ಕಾಮಗಾರಿ ನಡೆದ ಮೇಲೆ ಮೂರನೇ ಸಂಸ್ಥೆಯಿಂದ ಪರಿಶೀಲನೆಯನ್ನೂ ಮಾಡಿಸುವುದಿಲ್ಲ. ರಸ್ತೆ ಗುಂಡಿ ಬೀಳುವುದೇ ಇವರಿಗೆಲ್ಲ ಬೇಕಿರುವುದು. ಗುತ್ತಿಗೆದಾರ, ಮೇಲ್ವಿಚಾರಣೆ ಹೊಂದಿರುವ ಎಂಜಿನಿಯರ್‌ಗಳಿಗೆ ಉಗ್ರ ಶಿಕ್ಷೆಯಾಗಿ ಎಲ್ಲರಿಗೂ ಅದು ಬಹಿರಂಗವಾದರೆ ನಮ್ಮ ರಸ್ತೆಗಳ ಗುಣಮಟ್ಟ ಹೆಚ್ಚಾಗುತ್ತದೆ. ಹೆಲ್ಮೆಟ್‌ ಧರಿಸದೇ ಇದ್ದರೆ, ದಾಖಲೆಗಳನ್ನು ತೋರಿಸದಿದ್ದರೆ ಪೊಲೀಸರು ದಂಡ ವಿಧಿಸುತ್ತಾರೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ದಂಡ ವಿಧಿಸುವವರು ಯಾರು.?