ಮಂಜೇಶ್ವರ, ಉಪ್ಪಳ ; ಡ್ರಗ್ಸ್ ದಂಧಾ ಹೈ ದಂಧಾ..! ಉಪ್ಪಿನಕಾಯಿ ಡಬ್ಬದಲ್ಲೂ ಎಂಡಿಎಂಎ

ಕರಾವಳಿ

ವಂಚಕರ ಟಾರ್ಗೆಟ್ ಗೆ ಸಿಲುಕಿ ಜೈಲುಪಾಲಾದ ಅಮಾಯಕರು.!

ಕೇರಳ -ಕರ್ನಾಟಕ ಡ್ರಗ್ಸ್ ದಂಧೆಕೋರರ ಪಾಲಿನ ಹಬ್ ಎಂದೇ ಕುಖ್ಯಾತಿ ಪಡೆದಿರುವಂತದ್ದು. ಅದರಲ್ಲೂ ಮಂಜೇಶ್ವರ ಡ್ರಗ್ಸ್ ದಂಧೆಯಲ್ಲಿ ಹವಾ ಎಬ್ಬಿಸುತ್ತಿದೆ. ಡ್ರಗ್ಸ್ ದಂಧೆಕೋರರ ಕರಾಳ ಛಾಯೆಗೆ ಸಿಲುಕಿ ಕೊಲ್ಲಿ ರಾಷ್ಟ್ರದಲ್ಲಿ ಜೈಲುಪಾಲಾದ ಉಧಾಹರಣೆಯೂ ಇದೆ. ಒಟ್ಟಾರೆ ದಂಧಾ ಹೈ ದಂಧೆಗೆ ಅಮಾಯಕರು ಬಲಿಪಶುವಾಗುತ್ತಿರುವುದು ದು:ಖಕರ ಸಂಗತಿ.

ಇತ್ತೀಚೆಗಷ್ಟೇ ಉಪ್ಪಳ ಸಮೀಪದ ಮುಳಿಯ ಪತ್ವಾಡಿಯ ಮನೆಯೊಂದರಿಂದ 3 ಕೆಜಿ 407 ಕಿಲೋ ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಇದರ ಮುಖ್ಯ ರೂವಾರಿ ಗುರುತು ಪತ್ತೆಯಾಗಿದ್ದು, ಈತ ಮಂಜೇಶ್ವರ ವ್ಯಕ್ತಿಯೆಂಬುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಪತ್ವಾಡಿಯಿಂದ 3.407 ಕಿಲೋ ಎಂಡಿಎಂಎ, 642.65 ಗ್ರಾಂ ಗಾಂಜಾ, 96.65 ಗ್ರಾಂ ಕೊಕೈನ್‌ ಮತ್ತು 30 ಮಾದಕ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಸಂಬಂಧ ಬಂಧಿತ ಪತ್ವಾಡಿ ಅಲ್‌ ಫಲಾಹ್‌ ಮಂಜಿಲ್‌ನ ಅಸ್ಕರ್‌ ಅಲಿ(26)ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದು, ಹೆಚ್ಚಿನ ಮಾಹಿತಿ ಪಡೆಯಲು ಈತನನ್ನು ವಶಕ್ಕೆ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

ಅಮಲು ಪದಾರ್ಥ ದಂಧೆಯಲ್ಲಿ ಉಪ್ಪಳ ಪರಿಸರದ ಇನ್ನೂ ಹಲವರು ಶಾಮೀಲಾಗಿದ್ದು, ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅಂತಹವರ ಬಗ್ಗೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

ಮಾದಕ ದ್ರವ್ಯ ಮಾರಾಟ ವ್ಯವಹಾರಕ್ಕಾಗಿ ಈ ಜಾಲ ಪ್ರತ್ಯೇಕ ಮೊಬೈಲ್‌ ಆಯಪ್ ಸಿದ್ಧಪಡಿಸಿದ್ದು, ಇದರ ಮೂಲಕವೇ ಅಗತ್ಯ ಇರುವವರಿಗೆ ಡ್ರಗ್ಸ್ ಸರಬರಾಜು ಮಾಡಲಾಗುತ್ತಿತ್ತು. ಗೂಗಲ್ ಪೇ ಮೂಲಕವೇ ಹಣ ರವಾನಿಸಿದರೆ ಡ್ರಗ್ಸ್ ಸೇರಿದಂತೆ ಅಮಲು ಪದಾರ್ಥ ನೀವು ಇದ್ದ ಜಾಗಕ್ಕೆ ಬಂದು ತಲುಪುವಂತಿತ್ತು. ಮಾದಕ ದ್ರವ್ಯ ದಂಧೆಯ ಕುಣಿಕೆಯಲ್ಲಿ ಸಿಲುಕಿದ ಇಬ್ಬರು ಕೊಲ್ಲಿ ರಾಷ್ಟ್ರದಲ್ಲಿ ಜೈಲು ಸೇರಿರುವುದಾಗಿಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಹಿದಾಯತ್‌ ನಗರ ನಿವಾಸಿ ಯಾಗಿರುವ ಯುವಕ ನೋರ್ವ ಒಂದು ತಿಂಗಳ ಹಿಂದೆ ಕೊಲ್ಲಿಗೆ ಹೋಗುವ ಸಂದರ್ಭದಲ್ಲಿ ಆತನ ಕೈಯಲ್ಲಿ ಓರ್ವರಿಗೆ ತಲುಪಿಸಲೆಂದು ನೀಡಲಾಗಿದ್ದ ಉಪ್ಪಿನಕಾಯಿ ಡಬ್ಬದಲ್ಲಿ ಆತನಿಗೆ ತಿಳಿಯದೆ ಬಚ್ಚಿಟ್ಟಿದ್ದ ಎಂಡಿಎಂಎಯನ್ನು ಕೊಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದರು. ಆಗ ಆತನಿಗೆ ತಾನು ವಂಚನೆಗೆ ಸಿಲುಕಿದ್ದ ವಿಷಯ ಗೊತ್ತಾಗಿತ್ತು. ಇದೇ ರೀತಿ ಉಪ್ಪಳದ ನಿವಾಸಿ ಯುವಕ ಕೂಡ ಇದೇ ಜಾಲಕ್ಕೆ ಸಿಲುಕಿ ಎರಡು ದಿನಗಳ ಹಿಂದೆ ಕತಾರ್‌ನಲ್ಲಿ ಬಂಧಿತನಾಗಿದ್ದಾನೆ.

ಆಗಸ್ಟ್‌ 30 ರಂದು ಮೇಲ್ಪರಂಬದಿಂದ 49.33 ಗ್ರಾಂ ಎಂಡಿಎಂಎ ಸಹಿತ ಅಬ್ದುಲ್‌ ರಹೀಂ ಯಾನೆ ಬಿ.ಇ.ರವಿ(28)ನನ್ನು ಬಂಧಿಸಲಾಗಿತ್ತು. ಈತ ಪ್ರತ್ಯೇಕ ಆಯಪ್‌ ಬಳಸಿದ್ದಾಗಿಯೂ, ಭಾರೀ ಮೊತ್ತ ಬ್ಯಾಂಕ್‌ ಅಕೌಂಟ್‌ಗೆ ಜಮೆ ಮಾಡಿದ್ದಾಗಿಯೂ ತನಿಖೆಯಿಂದ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಣ ಕಳುಹಿಸಿದ ಅಕೌಂಟ್‌ನ ಫೋನ್‌ ನಂಬರ್‌ ಅಸ್ಕರ್‌ ಆಲಿದಾಗಿತ್ತು. ಅಕೌಂಟ್‌ ಇನ್ನೊಬ್ಬನ ಹೆಸರಿನಲ್ಲಿದೆ. ಆಗಸ್ಟ್‌ ತಿಂಗಳಲ್ಲಿ ಮಾತ್ರ 17 ಲಕ್ಷ ರೂ. ವ್ಯವಹಾರ ಅಸ್ಕರ್‌ ಅಲಿ ಅಕೌಂಟ್‌ ಮೂಲಕ ನಡೆದಿದೆ ಎಂದು ತಿಳಿಯಲಾಗಿದೆ. ಈತನ ಅಕೌಂಟ್‌ ಮಾಹಿತಿ ಹಾಗು ಆನ್‌ಲೈನ್‌ ವ್ಯವಹಾರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೂ ಸಂಬಂಧಿಸಿ ಅಸ್ಕರ್‌ ಅಲಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ.

ಅಮಲು ಪದಾರ್ಥ ಮಾರಾಟ ಹಾಗೂ ಬಳಕೆ ಸಂಬಂಧ ಕಳೆದ 30 ದಿನಗಳಲ್ಲಿ ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ 136 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕಾಸರಗೋಡು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಶಿಲ್ಪಾ ತಿಳಿಸಿದ್ದಾರೆ. ಈ ಸಂಬಂಧ 140 ಮಂದಿಯನ್ನು ಬಂಧಿಸಲಾಗಿದೆ. ಆ. 23ರಿಂದ ಸೆ. 20ರ ವರೆಗಿನ ಅಂಕಿ ಅಂಶ ಇದಾಗಿದೆ. ಈ ಸಂಬಂಧ ಅತೀ ಹೆಚ್ಚು ಕೇಸುಗಳನ್ನು ದಾಖಲಿಸಿದ್ದು ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಾಗಿದೆ ಎಂದು ಎಸ್‌ಪಿ ಶಿಲ್ಪಾ ಡಿ. ತಿಳಿಸಿದ್ದಾರೆ.