ಗಾಂಜಾ, ಡ್ರಗ್ಸ್ ಪಿಡುಗನ್ನು ಸಂಘಟಿತ ಹೋರಾಟದಿಂದ ಮಣಿಸೋಣ: ಇನ್ಸ್ ಪೆಕ್ಟರ್ ಸಂದೇಶ್
ನೂರುಲ್ ಇಸ್ಲಾಂ ಮದ್ರಸ ಈದ್ಗಾ ಮೂಡುಬಿದಿರೆ, ಈದ್ಗಾ ಫ್ರೆಂಡ್ಸ್ ಈದ್ಗಾ ಹಾಗೂ SKSSF ಈದ್ಗಾ ಯುನಿಟ್ ಇದರ ವತಿಯಿಂದ ‘ಇಶಲ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡುಬಿದಿರೆ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜೆ ಡ್ರಗ್ಸ್, ಗಾಂಜಾ ಪಿಡುಗಿಗೆ ಯುವ ಜನತೆ ಬಲಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಶೇಕಡಾ 50 ರಷ್ಟು ಡ್ರಗ್ಸ್ ದಂಧೆ ಇದ್ದರೆ, ಉಳಿದ ಶೇಕಡಾ 28 ರಷ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇರುವುದಾಗಿ ಅನೇಕ ಅಧ್ಯಯನ ವರದಿಗಳು ಹೇಳಿವೆ. ಬೆಂಗಳೂರು ಬಿಟ್ಟರೆ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. ಯುವ ಜನತೆ ಇದಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಅದರಲ್ಲೂ ಮುಸ್ಲಿಂ ಸಮುದಾಯದ ಯುವಕರು ಹೆಚ್ಚಾಗಿ ಈ ದಂಧೆಗೆ ಬಲಿಯಾಗುತ್ತಿರುವ ಬಗ್ಗೆ ಮಸೀದಿ ಕಮಿಟಿಗಳು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಕಳೆದ ಒಂದು ವರ್ಷ ನಾಲ್ಕು ತಿಂಗಳಿನಿಂದ ನಿಮ್ಮೆಲ್ಲರ ಪ್ರೀತಿ, ಸಹಕಾರದಿಂದ ಶಾಂತಿಯುತ ಮೂಡಬಿದ್ರೆಗೆ ಪಣತೊಟ್ಟಿದ್ದೇನೆ. ಸಣ್ಣ ಪುಟ್ಟ ಘಟನೆಗಳು ನಡೆದರೂ ಅದನ್ನು ಮಟ್ಟ ಹಾಕಿದ ತೃಪ್ತಿ ನನಗಿದೆ. ಗಾಂಜಾ, ಡ್ರಗ್ಸ್ ದಂಧೆಯ ವಿರುದ್ಧ ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮರ ಸಾರಿದ್ದು ಪೊಲೀಸರು ಏಕಾಂಗಿಯಾಗಿ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸಾರ್ವಜನಿಕರ ಒಗ್ಗೂಡುವಿಕೆ ಇದ್ದರಷ್ಟೇ ಯಶಸ್ಸು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮೂಡಬಿದಿರೆ ನಗರಕ್ಕೆ ಹೆಮ್ಮೆಯ ಅಧಿಕಾರಿಯಾಗಿರುವ ಸಂದೇಶ್ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದುದರಿಂದ ಕಮಿಟಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಸೀದಿಯ ಧರ್ಮಗುರುಗಳು ಹಾಗೂ ಆಡಳಿತ ಸಮಿತಿ ಸದಸ್ಯರು ಹಾಜರಿದ್ದರು.
