ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದೆ. ನವೆಂಬರ್ 20 ರಂದು ನಡೆಯಲಿರುವ ಮಹಾ ಕದನ ದೇಶದ ಗಮನ ಸೆಳೆದಿದೆ. ಈ ನಡುವೆಯೇ ಆತಂಕಕಾರಿ ಘಟನೆಯೊಂದು ವರದಿಯಾಗಿದ್ದು, ದೇಶವನ್ನೇ ಬೆಚ್ಚಿಬೀಳಿಸಿದ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಶ್ರೀಕಾಂತ್ ಪಂಗರ್ಕರ್ ಏಕನಾಥ ಶಿಂಧೆ ಬಣದ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನ ಅವರ ನಿವಾಸದ ಎದುರೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಬಲಪಂಥೀಯ ವಿಚಾರಧಾರೆಯ ವಿರುದ್ಧ ಅಕ್ಷರ ಸಮರ ಸಾರಿದ್ದ ಗೌರಿ ಲಂಕೇಶ್ ಹತ್ಯಾ ಘಟನೆ ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಹತ್ಯೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಶಿವಸೇನೆಯ ಮಾಜಿ ಕೌನ್ಸಿಲರ್ ಆಗಿದ್ದ ಮಹರಾಷ್ಟ್ರದ ಪಂಗರ್ಕರ್ ಅವರನ್ನು ಬಂಧಿಸಲಾಗಿತ್ತು. ಆ ನಂತರ ಜಾಮೀನಿನ ಮೂಲಕ ಹೊರ ಬಂದಿದ್ದರು. ಬಲಪಂಥೀಯ ವಿಚಾರಧಾರೆಯ ಹಿನ್ನೆಲೆಯ ಪಂಗರ್ಕರ್ ಶಿಂಧೆ ಬಣದ ಶಿವಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಈ ಬಗ್ಗೆ ಶಿವಸೇನಾ ನಾಯಕ, ಮಾಜಿ ಸಚಿವ ಅರ್ಜುನ್ ಖೋಟ್ಕರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ” ಪಂಗಾರ್ಕರ್ ಅವರು ಮಾಜಿ ಶಿವಸೈನಿಕ. ಅವರು ಪಕ್ಷಕ್ಕೆ ಮರಳಿದ್ದಾರೆ. ಅವರನ್ನು ಜಲ್ಸಾ ವಿಧಾನಸಭಾ ಚುನಾವಣಾ ಪ್ರಚಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ” ಎಂದಿದ್ದಾರೆ. ಖೋಟ್ಕರ್ ಜಲ್ಸಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
