ಗಂಜಿಮಠ ಕೈಗಾರಿಕಾ ವಲಯದಲ್ಲಿ “ಪ್ಲಾಸ್ಟಿಕ್ ಪಾರ್ಕ್” ಘಟಕ ತೊಡಕುಗಳನ್ನು ನಿವಾರಿಸಿ ತಕ್ಷಣ ಆರಂಭಿಸಲು, ಸ್ಥಳೀಯರಿಗೆ ಉದ್ಯೋಗ ಖಾತರಿಗೊಳಿಸಲು ಒತ್ತಾಯಿಸಿ ನಿರ್ಣಯ

ಕರಾವಳಿ

ಕುಪ್ಪಪದವಿನಲ್ಲಿ ನಡೆದ ಸಿಪಿಐಎಂ ವಲಯ ಸಮ್ಮೇಳನದಲ್ಲಿ ನಿರ್ಣಯ

ಗುರುಪುರ ಹೋಬಳಿಯ ಗಂಜಿಮಠ ಕೈಗಾರಿಕಾ ವಲಯದಲ್ಲಿ “ಪ್ಲಾಸ್ಟಿಕ್ ಪಾರ್ಕ್” ನಿರ್ಮಾಣದ ಘೋಷಣೆಯನ್ನು 2014ರಲ್ಲಿ ಮಾಡಲಾಗಿತ್ತು. ಕೇಂದ್ರ ಸರಕಾರದ ಬಜೆಟ್ ನಲ್ಲೂ ಪ್ರಸ್ಥಾಪ ಮಾಡಲಾಗಿತ್ತು. ಘೋಷಣೆಯಾದ ಪ್ಲಾಸ್ಟಿಕ್ ಪಾರ್ಕ್ ಘಟಕ ಸ್ಥಾಪಿಸಲು 2021ರಲ್ಲಿ ಅಧಿಕೃತ ಅನುಮೋದನೆ ದೊರಕಿತ್ತು. ಮೂರು ವರ್ಷಗಳು ಸಂದರೂ ಕೂಡ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣದ ಕನಿಷ್ಟ ಸಿದ್ದತೆಗಳಾಗಲಿ, ಅಥವಾ ಈ ಪ್ಲಾಸ್ಟಿಕ್ ಪಾರ್ಕ್ ನ ಒಳಗಡೆ ನಿರ್ಮಾಣಗೊಳ್ಳುವ ಕೈಗಾರಿಕೆಗಳು, ಹೂಡಿಕೆ ಆಗುವ ಒಟ್ಟು ಬಂಡವಾಳ, ಅವುಗಳ ಉತ್ಪಾದನೆ, ಘಟಕದಲ್ಲಿ ಹೂಡಿಕೆ ಖಾಸಾಗಿಯೊ, ಸಾರ್ವಜನಿಕ ರಂಗದಲ್ಲಿಯೊ, ಅದರಲ್ಲಿ ಸೃಷ್ಟಿಯಾಗುವ ಉದ್ಯೋಗಗಳು, ಸ್ಥಳೀಯರಿಗೆ ಸಿಗುವ ಅವಕಾಶಗಳ ಕುರಿತಾದ ವಿವರಣಾತ್ಮಕ ಮಾಹಿತಿಯನ್ನು ಸಾರ್ವಜನಿಕವಾಗಿ ಈವರಗೆ ಪ್ರಕಟಿಸಿಲ್ಲ.

ಸ್ಥಳೀಯ ಶಾಸಕರು, ಸಂಸದರು ಭಾಷಣಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ಕೈಗಾರಿಕಾ ಯೋಜನೆಯ ಕುರಿತು ಭಾಷಣಗಳನ್ನಷ್ಟೆ ಮಾಡುತ್ತಿದ್ದಾರೆ. ಒಂದೆರಡು ಎಕರೆ ಜಮೀನಿಗೆ ಸಂಬಂಧಿಸಿ ಉಳ್ಳ ಸಮಸ್ಯೆಗಳನ್ನೆ ದೊಡ್ಡದಾಗಿ ತೋರಿಸಿ ಯೋಜನೆ ಜಾರಿ ತಡವಾಗುತ್ತಿರುವುದಕ್ಕೆ ನೆಪ ಹೇಳಲಾಗುತ್ತಿದೆ. ಇದು ಸ್ಥಳೀಯ ಸಂಸದ, ಶಾಸಕರ ವೈಫಲ್ಯವಲ್ಲದೆ ಮತ್ತೇನಲ್ಲ.

ಈಗಾಗಲೇ ಗಂಜಿಮಠ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಬಿಗ್ ಬ್ಯಾಕ್ ಕಂಪನಿ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದರೂ, ಉದ್ಯೋಗಾವಕಾಶದಲ್ಲಿ ಸ್ಥಳೀಯರನ್ನು ಪೂರ್ತಿ ಕಡೆಗಣಿಸುತ್ತಿದೆ. ಹೊರ ರಾಜ್ಯಗಳ ಕಾರ್ಮಿಕರನ್ನು ಕರೆತಂದು ಅಗ್ಗದ ದರದಲ್ಲಿ ದುಡಿಸಿಕೊಳ್ಳುತ್ತಿದೆ. ಹಾಗಾಗಿ ಈಗಿನ ಯೋಜಿತ ಪ್ಲಾಸ್ಟಿಕ್ ಪಾರ್ಕ್ ನಲ್ಲಿ ಉದ್ಯೋಗ ಸೃಷ್ಟಿ, ಸ್ಥಳೀಯರಿಗೆ ಅವಕಾಶಗಳ ಕುರಿತಾಗಿ ಒಂದು ಸ್ಪಷ್ಟ ಚಿತ್ರಣವನ್ನು ಸಂಬಂಧ ಪಟ್ಟವರು ಸಾರ್ವಜನಿಕವಾಗಿ ಒದಗಿಸಬೇಕು‌. ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣದ ತೊಡಕುಗಳನ್ನು ನಿವಾರಿಸಿ ಇಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶವನ್ನು ಒದಗಿಸುವ ಮತ್ತು ಈ ಜಿಲ್ಲೆಯ ಯುವಜನತೆಗೆ ಪ್ರಥಮ ಆದ್ಯತೆಯ ಭಾಗವಾಗಿ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಿ ಕೈಗಾರಿಕೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಕುಪ್ಪೆಪದವು ನಾರಾಯಣ ಗುರು ಸಮುದಾಯ ಭವನದಲ್ಲಿ ಜರುಗಿದ ಗುರುಪುರ ವಲಯ ಸಮ್ಮೇಳನದಲ್ಲಿ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.