ದೇವಸ್ಥಾನದ ಜಾಗವನ್ನೇ ಅಕ್ರಮವಾಗಿ ಒಳಗೆ ಹಾಕಿದ ಕಲ್ಲಡ್ಕ ಭಟ್ರು.
ರಾಜ್ಯದಲ್ಲಿ ಹಿಂದೂಗಳ ಜಮೀನನ್ನು ವಕ್ಫ್ ಮಂಡಳಿಯು ಅಕ್ರಮವಾಗಿ ಸ್ವಾಧೀನಪಡಿಸುತ್ತಿದೆ ಎಂಬ ಬಿಜೆಪಿ- ಸಂಘ ಪರಿವಾರಗಳು ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ ದೇವಸ್ಥಾನಕ್ಕೆ ಸೇರಿದ ಜಾಗವನ್ನೇ ಕಲ್ಲಡ್ಕದ ಭಟ್ರ ನೇತೃತ್ವದ ಸಂಸ್ಥೆಯು ಅಕ್ರಮವಾಗಿ ತನ್ನ ಹೆಸರಿಗೆ ನೋಂದಣಿ ಮಾಡಿ ದೇವಸ್ಥಾನದ ಜಾಗವನ್ನೇ ನುಂಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರ ವಿರುದ್ಧ ಸಿಡಿದೆದ್ದಿರುವ ಸ್ಥಳೀಯ ಹಿಂದೂಗಳು ನವೆಂಬರ್ 11 ರಿಂದ ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಸೇರಿದ ಕೊಕ್ಕಡ ಗ್ರಾಮದ ಸರ್ವೆ ನಂ. 215/4ರಲ್ಲಿನ 1.23 ಎಕರೆ ಸ್ಥಿರಾಸ್ತಿ ಜಮೀನನ್ನು ಕಲ್ಲಡ್ಕ ಭಟ್ರು ಅಧ್ಯಕ್ಷರಾಗಿರುವ ಪುತ್ತೂರು ವಿದ್ಯಾವರ್ಧಕ ಸಂಘದ ಹೆಸರಿಗೆ ದೇವಸ್ಥಾನದ ಭಕ್ತರ ಗಮನಕ್ಕೆ ತಾರದೇ ಅಕ್ರಮವಾಗಿ ನೋಂದಾಯಿಸಿಕೊಂಡಿದೆ ಎಂದು ಸಾರ್ವಜನಿಕವಾಗಿ ಕೇಳಿಬರುತ್ತಿದೆ.
ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ‘ಎ’ ಗ್ರೇಡ್ ದೇವಾಲಯವಾಗಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯಕ್ಕೆ ಒಟ್ಟು 3.46 ಎಕರೆ ಸ್ಥಿರಾಸ್ತಿ ಇದೆ. ಆದರೆ ಕೊಕ್ಕಡದ ಕೆಲವು ಖಾಸಗಿ ವ್ಯಕ್ತಿಗಳೊಂದಿಗೆ ಸೇರಿಕೊಂಡು ಕಲ್ಲಡ್ಕ ಭಟ್ರು ಅಧ್ಯಕ್ಷರಾಗಿರುವ ಪುತ್ತೂರಿನ ಒಂದು ಸಂಘಕ್ಕೆ ದೇವಸ್ಥಾನಕ್ಕೆ ಸೇರಿದ ಕೊಕ್ಕಡ ಗ್ರಾಮದ ಸರ್ವೆ ನಂ. 215/4ರಲ್ಲಿನ 1.23 ಎಕರೆ ಸ್ಥಿರಾಸ್ತಿ ಜಮೀನನ್ನು ತನ್ನ ಹೆಸರಿಗೆ ಅಕ್ರಮವಾಗಿ ಬೆಳ್ತಂಗಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದೆ.

ಇದರ ವಿರುದ್ಧ ತೀವ್ರ ಆಕ್ರೋಶಗೊಂಡಿರುವ ಸ್ಥಳೀಯ ಹಿಂದೂ ಬಾಂಧವರು, ಇತ್ತೀಚೆಗೆ ಸಭೆ ಸೇರಿ ದೇವಸ್ಥಾನಕ್ಕೆ ಮತ್ತು ಭಕ್ತಾಧಿಗಳಿಗೆ ಮಾಡಿದ ವಂಚನೆ ಮತ್ತು ದ್ರೋಹವನ್ನು ಪ್ರತಿಭಟಿಸಲು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ರಚಿಸಿದ್ದು, ನವೆಂಬರ್ 11 ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಘೋಷಿಸಿದೆ.
ಈ ಮಧ್ಯೆ ಇಲ್ಲಿನ ಶಾಸಕರು ಈ ವಿಷಯದಲ್ಲಿ ಯಾವುದೇ ಮಾತನಾಡದಿರುವುದಕ್ಕೆ ಹಿಂದೂ ಬಾಂಧವರು ಆಕ್ರೋಶಿತರಾಗಿದ್ದಾರೆ. ವೇದಿಕೆಯಲ್ಲಿ ಸದಾ ಹಿಂದೂ, ಹಿಂದುತ್ವ ಎಂದು ಬೊಬ್ಬಿಡುವ ಶಾಸಕರು ತನ್ನ ಕ್ಷೇತ್ರದಲ್ಲಿಯೇ ಹಿಂದೂಗಳ ದೇವಸ್ಥಾನಕ್ಕೆ ಸೇರಿದ ಎಕರೆಗಟ್ಟಲೆ ಜಾಗವನ್ನು ಹಿಂದುತ್ವವಾದಿಗಳೇ ಒಳಗೆ ಹಾಕಿದ್ದರೂ, ಈ ಬಗ್ಗೆ ಒಂದು ಶಬ್ದ ಮಾತನಾಡದಿರುವುದು ಈವರ ಹಿಂದುತ್ವದ ಅಸಲಿತನವನ್ನು ಬಹಿರಂಗಪಡಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
