ಗುರುಪುರ ಪಲ್ಘುಣಿ ನದಿಯಲ್ಲಿ ಅಕ್ರಮ ಮರಳು ದಂಧೆ: ರಾಷ್ಟ್ರಪ್ರೇಮಿ ಮುಖಂಡರದ್ದೇ ಕಾರ್ಬಾರು.!

ಕರಾವಳಿ

ಪ್ರಭಾವಿ ಗುತ್ತಿಗೆದಾರನ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟಿಗೆ ಹರಿದು ಬರುತ್ತಿದೆ ದಿನನಿತ್ಯ ನೂರಾರು ಲೋಡ್ ಅಕ್ರಮ ಮರಳು .!

ಗ್ರಾಮ ಪಂಚಾಯತ್, ಪೊಲೀಸ್, ಗಣಿ, ಕಂದಾಯ ಇಲಾಖೆಯನ್ನೇ ಬಾಯಿಮುಚ್ಚಿಸಿದ ಕರಾಮತ್ತಾದರೂ ಏನು.?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿ ವರ್ಗ ಸಂಪೂರ್ಣ ವಿಫಲವಾಗಿದೆ. ಸರಕಾರದ ಅಧಿಕೃತ ಕಾನೂನುಗಳನ್ನು ಕಸದ ಬುಟ್ಟಿಗೆ ಎಸೆದು ಪ್ರಭಾವಿಗಳು ತಮಗೆ ಬೇಕಾದ ರೀತಿಯಲ್ಲಿ ಕಾನೂನುಗಳನ್ನು ರಚಿಸಿ ಅಧಿಕಾರಿ ವರ್ಗಕ್ಕೆ ‘ಮಾಮೂಲಿ’ ಸಂದಾಯ ಮಾಡಿ ಮರಳನ್ನು ದೋಚುತ್ತಿದ್ದಾರೆ. ಸರಕಾರದ ಖಜಾನೆಗೆ ವಂಚನೆ ಮಾಡಿ ಜೇಬನ್ನು ತುಂಬಿಸಿಕೊಳ್ಳುವ ಈ ದಂಧೆಕೋರರನ್ನು ನಿಯಂತ್ರಿಸುವ ತಾಕತ್ತು, ಧೈರ್ಯ ಎರಡನ್ನೂ ಎಂಜಲು ಕಾಸಿಗೆ ಅಧಿಕಾರಿಗಳು ಮಾರಿಕೊಂಡಿದ್ದಾರೆಂದು ಜನ ರಾಜಾರೋಷವಾಗಿಯೇ ಮಾತನಾಡುವಂತಾಗಿದೆ. ಕಾನೂನು ಬಾಹಿರವಾಗಿ ಮರಳು ದೋಚುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ. ಇದರ ಮರ್ಮವೇನು.? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮಂಗಳೂರು ತಾಲೂಕಿನ ಗುರುಪುರ ಪಲ್ಘುಣಿ ನದಿಯ ಸೇತುವೆ ಅಡಿ ಭಾಗದಲ್ಲಿ ರಾಜಾರೋಷವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಹತ್ತಕ್ಕೂ ಅಧಿಕ ದೋಣಿ, ಡ್ರೆಜ್ಜಿಂಗ್ ಮೆಷಿನ್ ಅಳವಡಿಸಿ ಪ್ರಾಕೃತಿಕ ಸಂಪತ್ತನ್ನು ಲೂಟಿಗೈಯುತ್ತಿದ್ದರೂ ಇಲಾಖೆಗಳು ಮೌನಕ್ಕೆ ಶರಣಾಗಿರುವುದು ನಾಗರೀಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ಅಕ್ರಮದ ವಿಚಾರದಲ್ಲಿ ಎಲ್ಲಾ ಪಕ್ಷಗಳೂ ಭಾಯಿ -ಭಾಯಿಗಳು ಎನ್ನುವ ಮಾತು ಇಲ್ಲಿ ನಿಜವಾಗಿದೆ. ಗುರುಪುರ ಸೇತುವೆಯ ಅಡಿ ಭಾಗದಲ್ಲಿ ನಡೆಯುತ್ತಿರುವ ಮರಳು ಮಾಫಿಯಾದಲ್ಲಿ ಬಿಜೆಪಿಯ ಕೆಲವು ಮುಖಂಡರೆಂದು ಹೇಳಿಕೊಂಡವರೇ ಕೈ ಕೈ ಜೋಡಿಸಿಕೊಂಡು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆಡಳಿತ ಮತ್ತು ವಿಪಕ್ಷಗಳು ಕೈ ಜೋಡಿಸಿಕೊಂಡು ಸೌಹಾರ್ದತೆ ಮೆರೆದಿರುವುದರಿಂದ ವಿವಿಧ ಇಲಾಖೆಗಳ ಅಧಿಕಾರಿಗಳು ತಮಗೇನೂ ಕೆಲಸ ಇಲ್ಲ ಅನ್ನುವಂತೆ ಪುಲ್ ಖುಷ್ ಆಗಿದ್ದಾರೆ.

ಗುರುಪುರ ಬ್ರಿಡ್ಜ್ ಗಳ ನಡುವಿನ ಕುದುರು ಜಾಗದಲ್ಲಿ ಅಕ್ರಮವಾಗಿ ಮರಳು ಲೂಟಿ ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ. ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದರೂ ರಾತ್ರಿ ಸಮಯ 10 ರಿಂದ ಬೆಳಗಿನ ಜಾವ 5ರ ತನಕ ಕನಿಷ್ಠ ಹತ್ತಾರು ನಾಡದೋಣಿಗಳನ್ನು ಬಳಸಿ ಒಂದು ಗುಂಪು ಅಕ್ರಮವಾಗಿ ನೂರಾರು ಲೋಡು ಮರಳನ್ನು ನಿರಂತರವಾಗಿ ಲೂಟಿಗೈದು, ಅಲ್ಲೇ ಪಕ್ಕದಲ್ಲಿರುವ ಪ್ರಭಾವಿ ಗುತ್ತಿಗೆದಾರರೊಬ್ಬರ ಪ್ಲಾಂಟಿಗೆ ನದಿಯಿಂದಲೇ ನೇರವಾಗಿ ತೋಡು ಕೊರೆದು, ದೋಣಿ ಸಾಗುವಂತೆ ಮಾಡಿ ಮರಳು ಜಮಾವಣೆಯಾಗುತ್ತಿರುವುದು ಸ್ಥಳೀಯವಾಗಿ ಸುದ್ದಿಯಲ್ಲಿರುವ ವಿಚಾರ. ವಿರೋಧ ಪಕ್ಷದ ಪ್ರಮುಖರೊಬ್ಬರು ಇವರ ಬೆನ್ನಿಗೆ ನಿಂತಿದ್ದು, ಇವರ ಅಕ್ರಮ ದಂಧೆಗೆ ಸಾಥ್ ನೀಡುತ್ತಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಇದನ್ನು ಪ್ರಶ್ನಿಸಿದರೆ ಮಾಮೂಲಿ ನೀಡಿ ಬಾಯ್ಮುಚ್ಚಿಸುತ್ತಾರೆ ಅನ್ನುವ ಮಾತುಗಳು ಹರಿದಾಡುತ್ತಿವೆ. ಇವರ ಅಕ್ರಮ ಮರಳು ಲೂಟಿಗೆ ಸ್ಥಳೀಯರು ಬೇಸತ್ತಿದ್ದು, ಪ್ರಭಾವ ಬಳಸಿ ತಮ್ಮ ದಂಧೆಯನ್ನು ಚಾಲೂ ಇಟ್ಟಿದ್ದಾರೆ ಅನ್ನಲಾಗುತ್ತಿದೆ. ಸೇತುವೆ ಪಕ್ಕದಲ್ಲಿಯೇ ಇವರು ಅಕ್ರಮ ಮರಳು ಲೂಟಿಗೆ ಮುಂದಾಗಿರುವುದರಿಂದ ಮೂಲರಪಟ್ನ ಸೇತುವೆ ಪರಿಸ್ಥಿತಿ ಗುರುಪುರಕ್ಕೆ ಬರಬಹುದೋ ಅನ್ನುವ ಆತಂಕ ನಾಗರಿಕರಲ್ಲಿ ಎದುರಾಗಿದೆ. ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ನಾಗರೀಕರು ಆಗ್ರಹಿಸುತ್ತಿದ್ದಾರೆ.

ಇಂತಹ ಅಕ್ರಮಕೋರರ ವಿರುದ್ಧ ಮಾಹಿತಿ ನೀಡಿದವರ ಮೇಲೆಯೇ ಕೆಲವೊಮ್ಮೆ ವೈಯಕ್ತಿಕ ದಾಳಿ ನಡೆಯುವ ಸಂಗತಿಗಳೂ ಇವೆ. ಒಟ್ಟಾರೆ ಅಕ್ರಮ ವ್ಯವಹಾರದಲ್ಲಿ ಪ್ರಮುಖ ಪಕ್ಷಗಳ ನಾಯಕರ ಭಾಯಿ ಭಾಯಿ ಸಂಬಂಧದಿಂದಾಗಿ ಪ್ರಶ್ನಿಸುವವರೇ ಇಲ್ಲವಾಗಿದೆ. ಅಕ್ರಮ ಮರಳುಗಾರಿಕೆಯಿಂದ ಜಿಲ್ಲೆಗಾದ ನಷ್ಟ ಅಷ್ಟಿಷ್ಟಲ್ಲ. ಮೂಲರಪಟ್ನದಲ್ಲಿ ಸೇತುವೆ ಕುಸಿಯಲು ಮುಖ್ಯ ಕಾರಣವೇ ಅಕ್ರಮ ಮರಳುಗಾರಿಕೆ. ಸೇತುವೆ ತಳಭಾಗದಲ್ಲಿ ಮರಳು ತೆಗೆದ ಪರಿಣಾಮ ಸೇತುವೆಯೇ ಕುಸಿದುಬಿದ್ದಿತ್ತು. ಇದರ ಪರಿಣಾಮ ಈ ಭಾಗದ ಜನತೆ ಮೂರು-ನಾಲ್ಕು ವರ್ಷಗಳ ಸಂಕಷ್ಟಕ್ಕೊಳಗಾದರು. ಕೆಲವು ಸಮಯಗಳ ಹಿಂದೆ ಬಜ್ಪೆ ವಿಮಾನ ನಿಲ್ದಾಣ ಸಂಪರ್ಕದ ಮರವೂರು ಸೇತುವೆ ಕೂಡ ಕಂಪಿಸಿ ವಾಲಿತ್ತು. ಇದಕ್ಕೆಲ್ಲಾ ಅಲ್ಲಿ ನಡೆಸುತ್ತಿದ್ದ ಅಕ್ರಮ ಮರಳುಗಾರಿಕೆಯೇ ಕಾರಣವಾಗಿತ್ತು. ಇದೀಗ ಗುರುಪುರ ಪಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಹಾಗೂ ರಾಷ್ಟ್ರೀಯ ಹೆದ್ದಾರಿಯ ನಡು ಭಾಗದ ಕುದುರು ಪ್ರದೇಶದಲ್ಲಿ ನಡೆಯುವ ಅಕ್ರಮ ಮರಳುಗಾರಿಕೆಯಿಂದ ಎರಡೂ ಬದಿಯ ಸೇತುವೆಗಳಿಗೂ ಗಂಡಾಂತರ ತಪ್ಪಿದ್ದಲ್ಲ.!

ನದಿಬದಿಯಲ್ಲಿ ಜೆಸಿಬಿಯನ್ನು ಬಳಸಿ ಟಿಪ್ಪರ್ ಗಳಿಗೆ ಮರಳು ತುಂಬಿಸಲಾಗುತ್ತಿದೆ. ಮರಳು ಸಾಗಾಟದ ಟಿಪ್ಪರ್ ಗಳ ಅಬ್ಬರಕ್ಕೆ ಇತರ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಸ್ಥಳೀಯ ಗ್ರಾಮ ಪಂಚಾಯತ್ ಪಿಡಿಒ, ತಹಶೀಲ್ದಾರ್, ಪೊಲೀಸ್ ಇಲಾಖೆ, ಗಣಿ ಇಲಾಖೆ ಈ ಅಕ್ರಮವನ್ನು ಕಂಡೂ ಕಾಣದಂತೆ ಮೌನವಾಗಿರುವುದರ ಹಿಂದೆ ಕರಾಮತ್ತಾದರೂ ಏನು.?