ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಮೂವರು ಪ್ರಭಾವಿಗಳ ಕಣ್ಣು.! ಮುಂದಿನ ರಾಜ್ಯಾಧ್ಯಕ್ಷ ಯಾರಾಗಲಿದ್ದಾರೆ.?

ರಾಜ್ಯ

ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರ ಅಧಿಕಾರದ ಅವಧಿ ಸದ್ಯದಲ್ಲೇ ಮುಗಿಯಲಿದ್ದು, ಈ ಸ್ಥಾನಕ್ಕೆ ಮೂವರು ಪ್ರಭಾವಿಗಳು ಕಣ್ಣಿಟ್ಟಿದ್ದಾರೆ. ಮುಂದಿನ ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲವಿದೆ.

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅವಧಿ ವಿಸ್ತರಿಸಲು ಬಯಸುತ್ತಿದ್ದಾರೆ. ಆದರೆ ಅವರ ಮೇಲೆ ಕೆಲವು ನಾಯಕರು ಈಗಾಗಲೇ ಬಂಡಾಯವೆದ್ದಿದ್ದಾರೆ. ಹೀಗಾಗಿ ಮತ್ತೆ ಅವರನ್ನೇ ಮುಂದುವರಿಸಿದರೆ ಈ ನಾಯಕರ ಆಕ್ರೋಶ ಹೆಚ್ಚಾಗುವುದು ಖಚಿತ. ಈ ಹಿನ್ನಲೆಯಲ್ಲಿ ವಿಜಯೇಂದ್ರ ವಿಚಾರದಲ್ಲಿ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆಯಿಡಬೇಕಾಗುತ್ತದೆ. ಆದರೆ ಅಷ್ಟು ಸುಲಭವಾಗಿ ರಾಜ್ಯ ಬಿಜೆಪಿ ಚುಕ್ಕಾಣಿ ತಮ್ಮ ಕೈ ತಪ್ಪಿ ಹೋಗಲು ಬಿಎಸ್ ಯಡಿಯೂರಪ್ಪ ಬಿಡಲ್ಲ ಎನ್ನುವುದೂ ಅಷ್ಟೇ ಸತ್ಯ.

ಒಂದು ವೇಳೆ ವಿಜಯೇಂದ್ರಗೆ ಎರಡನೇ ಅವಧಿಗೆ ಅಧ್ಯಕ್ಷ ಪಟ್ಟ ವಿಸ್ತರಣೆ ಮಾಡಲು ಹೈಕಮಾಂಡ್ ಒಪ್ಪದೇ ಇದ್ದರೆ ಯಡಿಯೂರಪ್ಪನವರು ಬಸವರಾಜ ಬೊಮ್ಮಾಯಿಯವರನ್ನು ಆ ಪಟ್ಟಕ್ಕೇರಿಸಲು ಹೈಕಮಾಂಡ್ ಮನ ಒಲಿಸಲಿದ್ದಾರೆ. ಬೊಮ್ಮಾಯಿ ತಮ್ಮ ಆಪ್ತರಾಗಿದ್ದು ಅವರು ಅಧ್ಯಕ್ಷರಾದರೂ ಬಿಜೆಪಿ ಮೇಲೆ ತನ್ನ ಹಿಡಿತ ಸಾಧಿಸಬಹುದು ಎಂಬುದು ಬಿ ಎಸ್ ವೈ ಅವರ ಲೆಕ್ಕಾಚಾರವಾಗಿದೆ. ಈ ಕಾರಣಕ್ಕೆ ಈಗಾಗಲೇ ಗುಪ್ತವಾಗಿ ಬೊಮ್ಮಾಯಿ ಜೊತೆ ಯಡಿಯೂರಪ್ಪ ಮಾತುಕತೆಯನ್ನೂ ನಡೆಸಿದ್ದಾರೆ ಎಂಬ ಗುಸು ಗುಸು ಇದೀಗ ಕೇಳಿಬರುತ್ತಿದೆ.

ಒಂದು ವೇಳೆ ಬೊಮ್ಮಾಯಿ ಬೇಡವೆಂದಾದರೆ ಶೋಭಾ ಕರಂದ್ಲಾಜೆಗೆ ಅಧ್ಯಕ್ಷ ಪಟ್ಟಕಟ್ಟಲು ಯಡಿಯೂರಪ್ಪ ಡಿಮ್ಯಾಂಡ್ ಮಾಡಬಹುದು. ಶೋಭಾ ಕರಂದ್ಲಾಜೆಗೆ ಎಲ್ಲಾ ನಾಯಕರ ಜೊತೆ ಉತ್ತಮ ಸಂಬಂಧವಿದೆ. ಹೀಗಾಗಿ ಅವರನ್ನು ಆಯ್ಕೆ ಮಾಡಿದರೆ ಯಾರೂ ವಿರೋಧಿಸಲ್ಲ ಎಂಬ ಲೆಕ್ಕಾಚಾರವೂ ಇದೆ. ಜೊತೆಗೆ ಅವರಿಗೆ ತಟಸ್ಥ ನಾಯಕರ ಬೆಂಬಲವೂ ಇದೆ. ಒಟ್ಟಿನಲ್ಲಿ ಸದ್ಯದಲ್ಲೇ ಹೊಸ ನಾಯಕನ ಆಯ್ಕೆ ಬಗ್ಗೆ ಅಧಿಕೃತ ತೀರ್ಮಾನ ಹೊರಬೀಳಲಿದೆ.