ಚಿಕ್ಕಮಗಳೂರು ಹಾಸ್ಟೆಲ್ ಮಕ್ಕಳ ನಶೆಯಾಟ.!
ಸಿಗರೇಟ್ ಸೇದಿಕೊಂಡು, ಬಿಯರ್ ಹೊಡೆಯುತ್ತಾ, ವೈಟರ್ ಸ್ಮೈಲ್ ಎಳೆದುಕೊಂಡು ಆವಾಂತರ ಸೃಷ್ಟಿಸಿದ ಘಟನೆ ಚಿಕ್ಕಮಗಳೂರು ವಸತಿ ಶಾಲೆಯೊಂದರಲ್ಲಿ ವರದಿಯಾಗಿದೆ.
ಬಡತನದ ಕಾರಣಕ್ಕೆ ಹಾಸ್ಟೆಲ್ ನಲ್ಲಿ ಓದುವ ಪ್ರೌಢಶಾಲೆ ವಿದ್ಯಾರ್ಥಿಗಳು ಮದ್ಯ, ತಂಬಾಕಿನ ದಾಸರಾಗಲು ಹೊರಟಿರುವ ಬೆಳವಣಿಗೆ ಚಿಕ್ಕಮಗಳೂರಿನ ವಸತಿ ಶಾಲೆಯೊಂದರಲ್ಲಿ ನಡೆದಿದೆ.
ರಾತ್ರಿ ಹೊತ್ತಿನಲ್ಲಿ ಬಾಲಕರು ಕೊಠಡಿಯಲ್ಲಿ ಗಲಾಟೆ ಮಾಡುತ್ತಿರುವುದು ಕಂಡ ಭದ್ರತಾ ಸಿಬ್ಬಂದಿ, ಕೊಠಡಿ ಬಳಿ ಹೋದಾಗ ಧೂಮಪಾನದ ವಾಸನೆ ಬಂತು. ಬಾಗಿಲು ತೆಗೆಸಿ ಕೊಠಡಿ ಪರಿಶೀಲನೆ ಮಾಡಿದಾಗ 9 ಮತ್ತು 10 ನೇ ತರಗತಿಯ 6 ಬಾಲಕರು ಬಿಯರ್ ಸೇವನೆಗೆ ಮುಂದಾಗಿರುವುದು ಗೊತ್ತಾಯಿತು. ಮದ್ಯದ ಬಾಟಲಿ, ಸಿಗರೇಟ್, ಚಿಪ್ಸ್, ಖಾರವನ್ನು ವಶಕ್ಕೆ ಪಡೆದು ನಿಯಮ ಪಾಲಕರಿಗೆ ತಿಳಿಸಿದ್ದಾರೆ.

ನಿಯಮ ಪಾಲಕರು ವಿಚಾರಣೆ ಮಾಡಿದಾಗ, ರಾತ್ರಿ ಊಟದ ಸಮಯದಲ್ಲಿ ಹಾಸ್ಟೆಲ್ ತಂತಿ ಬೇಲಿ ದಾಟಿ ಪಕ್ಕದ ವೈನ್ ಶಾಪ್ ನಿಂದ ಮದ್ಯ ಖರೀದಿ ಮಾಡಿಕೊಂಡು ಬಂದಿರುವ ಬಗ್ಗೆ ವಿದ್ಯಾರ್ಥಿಗಳು ಬಾಯ್ಬಿಟ್ಟಿದ್ದರು.
ಕಳೆದ ವರ್ಷವೂ ಸಹ ಬಾಲಕರು ಹೊಸ ವರ್ಷದ ಹಿನ್ನೆಲೆಯಲ್ಲಿ ಹೊರಗಿನಿಂದ ಚಿಕನ್ ಖರೀದಿಸಿ, ಹಾಸ್ಟೆಲ್ ನ ಅಡುಗೆ ಮನೆಯಿಂದ ಪಾತ್ರೆಗಳನ್ನು ಎತ್ತಿಕೊಂಡು ಬಂದು ಕಟ್ಟಡ ಹೊರಭಾಗದ ಬಯಲು ಪ್ರದೇಶದಲ್ಲಿ ಬಾಡೂಟ ತಯಾರಿಸುವಾಗ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ. ಇದೇ ವಸತಿ ಶಾಲೆಯ ಮತ್ತೊಂದು ಬದಿಯಲ್ಲಿ ವಿದ್ಯಾರ್ಥಿನಿಯರ ವಸತಿ ಶಾಲೆಯೂ ಇದೆ. ಈ ರೀತಿಯ ಚಟುವಟಿಕೆಯಿಂದ ಅನಾಹುತವಾದರೆ ಯಾರು ಹೊಣೆ ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿದೆ.
