ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥಧಾರಿ ಬರೆ ಕೇಶವ ಭಟ್ಟ (84) ಶನಿವಾರ (25. 1. 25) ನಿಧನ ಹೊಂದಿದರು. ಇವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಹಾಗೂ ಅಕಾಡೆಮಿಯ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಕೇಶವ ಭಟ್ಟರು ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ, ಕಲಾ ಸಂಯೋಜಕರಾಗಿ, ಕಲಾವಿಮರ್ಶಕರಾಗಿ, ಲೇಖಕರಾಗಿ ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದರು. ನಿವೃತ್ತಿಯ ಅನಂತರ ವಾಸುದೇವ ಸಾಮಗರ ಸಂಯಮಂ ತಂಡದಲ್ಲಿ ಕೆಲವು ವರ್ಷ ತಿರುಗಾಟ ಮಾಡಿದ್ದರು. ಅಪಾರ ಪುರಾಣ ಜ್ಞಾನ, ಭಾವಪೂರ್ಣ ಅರ್ಥಗಾರಿಕೆಯಿಂದ ಕಲಾಭಿಮಾನಿಗಳ ಗೌರವಕ್ಕೆ ಪಾತ್ರರಾಗಿದ್ದರು.
ಸಂಸ್ಥೆಯ ತಾಳಮದ್ದಲೆ ಸಪ್ತಾಹದಲ್ಲಿ ಅರ್ಥಧಾರಿಯಾಗಿ, ಅವಲೋಕನಕಾರರಾಗಿ ಸಹಕರಿಸಿದ್ದರು. ಅವರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಬರೆ ಕೇಶವ ಭಟ್ಟ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
