ರಾಮಸೇನೆ ಮುಖಂಡನ ವಾಮಾಚಾರಕ್ಕೆ ಬಿಗ್ ಟ್ವಿಸ್ಟ್; ಪ್ರಸಾದ್ ಅತ್ತಾವರ ಪತ್ನಿ ಉಡುಪಿ ಮಹಿಳಾ ಠಾಣೆ ಪಿಎಸ್ಐ ಸುಮಾ ಆಚಾರ್ಯ ಪಾತ್ರ.!

ಕರಾವಳಿ

ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ ಎಂಬವರ ಪತ್ನಿ, ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಸುಮಾ ಆಚಾರ್ಯ ಅವರ ಹೆಸರೂ ಕೂಡ ವಾಮಾಚಾರ ಪ್ರಕರಣದಲ್ಲಿ ಬಯಲಾಗಿದೆ. ಇತ್ತೀಚೆಗೆ ಪ್ರಸಾದ್ ಅತ್ತಾವರ ಮತ್ತು ಸಹಚರರಿಂದ ಮಂಗಳೂರಿನ ಸ್ಪಾ ಮತ್ತು ಪಾರ್ಲರ್ ಮೇಲಿನ ದಾಳಿ ಪ್ರಕರಣದಲ್ಲಿ ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ ಎಂಬವರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಅತ್ತಾವರ ಮೊಬೈಲ್ ಪರಿಶೀಲಿಸಿದಾಗ, ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರಿಗೆ ಬಲ ತುಂಬಲು 5 ಕುರಿಗಳನ್ನು ಕಾಳಿದೇವಿಗೆ ಬಲಿ ಕೊಟ್ಟಿರುವ ವಿಡಿಯೋ ಪತ್ತೆಯಾಗಿತ್ತು.

ಆ ಕುರಿತು ಸಮಗ್ರ ತನಿಖೆ ನಡೆಸಿದ ಮಂಗಳೂರು ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಪ್ರಮುಖ ದೂರುದಾರರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಪರವಾಗಿ ಪ್ರಸಾದ್ ಅತ್ತಾವರ ಆಪ್ತರು ವಾಮಾಚಾರ ನಡೆಸಿರುವುದು ಮತ್ತು ಅದರಲ್ಲಿ ಪ್ರಸಾದ್ ಅತ್ತಾವರ ರವರ ಪತ್ನಿ, ಉಡುಪಿ ಮಹಿಳಾ ಪೊಲೀಸ್ ಠಾಣೆ ಪಿಎಸ್‌ಐ ಸುಮಾ ಆಚಾರ್ಯ ಕೂಡ ಭಾಗಿಯಾಗಿರುವ ಸಂಗತಿ ತಿಳಿದುಬಂದಿದೆ.

ಆ ಮೂಲಕ ಪ್ರಾಣಿ ಬಲಿ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ಸಿದ್ದರಾಮಯ್ಯ ವಿರುದ್ಧ ದೂರುದಾರರಿಗೆ ಬಲ ತುಂಬುವ ಯತ್ನವಾಗಿ ಪ್ರಸಾದ್ ಅತ್ತಾವರ ನೇತೃತ್ವದ ರಾಮಸೇನೆ ಸೇರಿದಂತೆ ಕೆಲವು ಸಂಘಟನೆಗಳು ವಾಮಾಚಾರದ ಮೊರೆ ಹೋಗಿರುವುದು ಬಯಲಾಗಿದೆ. ಪೊಲೀಸರಿಗೆ ದೊರೆತ ವಿಡಿಯೋದಲ್ಲಿ 5 ಕುರಿಗಳನ್ನು ಬಲಿ ಕೊಟ್ಟಿರುವುದು ಕಂಡುಬಂದಿದೆ.

ಈ ಬಲಿ ಎಲ್ಲಿ ನೀಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಅನಂತ ಭಟ್ ಎಂಬಾತ ಈ ಬಲಿ ಮಾಡಿಸಿರುವುದು ತಿಳಿದುಬಂದಿದೆ. ಅನಂತ್ ಭಟ್ ಯಾರೆಂದು ಪೊಲೀಸರಿಗೆ ಮಾಹಿತಿ ದೊರೆತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸ್ನೇಹಮಯಿ, ಗಂಗರಾಜು ಪರವಾಗಿ ಈ ಪ್ರಾಣಿಬಲಿ ಮಾಡಲಾಗಿದೆ. ಈ ಪ್ರಕರಣದ ಸಂಬಂಧ ಸ್ವಯಂಪ್ರೇರಿತ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಪೊಲೀಸರು. ಈ ನಡುವೆ ಅನಂತ್ ಭಟ್ಟನಿಗಾಗಿ ಹುಡುಕಾಟ ನಡೆಯುತ್ತಿದೆ. ಹಣ ತುಂಬಿದ ಬ್ಯಾಗಿನ ಫೋಟೋವನ್ನು ಪ್ರಸಾದ್ ತನ್ನ ಪತ್ನಿಗೆ ಕಳಿಸಿರುವುದು ಕೂಡ ವಾಟ್ಸಪ್ ಚಾಟ್ ರಿಟ್ರೀವ್ ಮಾಡಿದಾಗ ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಪತ್ನಿ ಸುಮಾ ಆಚಾರ್ಯ ಮಾತ್ರವಲ್ಲದೆ ತನ್ನ ಸಹಚರರಾದ ಪ್ರಶಾಂತ ಬಂಗೇರ, ಹರ್ಷ ಮೈಸೂರು, ಅನಂತ ಭಟ್ಟನಿಗೂ ಹಣದ ಬ್ಯಾಗಿನ ಫೋಟೋ ಕಳುಹಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಸಂಬಂಧ ಮಂಗಳೂರಿನ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟಾರೆ, ಇದೀಗ ಪ್ರಾಣಿಬಲಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ದೂರುದಾರರಿಗೂ ಪ್ರಸಾದ್ ಅತ್ತಾವರಗೂ ಇರುವ ಸಂಬಂಧವೇನು.? ಯಾವ ಕಾರಣಕ್ಕೆ ದೂರುದಾರರ ಫೋಟೋ ಇಟ್ಟು ಪ್ರಾಣಿಬಲಿ ಕೊಡಲಾಗಿದೆ.? ಪ್ರಾಣಿಬಲಿ ಘಟನೆಗೂ ಹಣದ ಬ್ಯಾಗಿನ ಪೋಟೋಗು ಇರುವ ನಂಟೇನು.? ಈ ಪ್ರಕರಣದ ಹಿಂದೆ ಇನ್ನೂ ಯಾರೆಲ್ಲಾ ಇದ್ದಾರೆ.? ಎಂಬ ಬಗ್ಗೆ ಪೊಲೀಸರಿಂದ ಕೂಲಂಕುಷ ತನಿಖೆ ನಡೆಯುವ ಸಾಧ್ಯತೆ ಇದೆ.