2016ರಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಸಂಘರ್ಷದಲ್ಲಿ ಹಲ್ಲೆಗೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸದೆ ದಾರಿಯಲ್ಲಿ ಪೊಲೀಸ್ ವಾಹನದಿಂದ ಇಳಿಸಿದ ಕ್ರಮವನ್ನು ಖಂಡಿಸಿ ಡಿವೈಎಫ್ಐ ಕಾರ್ಯಕರ್ತರು ಕೂಳೂರು ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ತಪ್ಪಿತಸ್ಥ ಪೋಲೀಸರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು.
ಸುಮಾರು ಒಂದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಸಾರ್ವನಿಕರಿಗೆ ತೊಂದರೆ ನೀಡಿರುತ್ತಾರೆ ಎಂದು ಮಂಗಳೂರಿನ ಕಸಬಾ ಬೆಂಗರೆಯ ಡಿವೈಎಫ್ಐ ಕಾರ್ಯಕರ್ತರಾದ ಎ.ಬಿ.ನೌಷಾದ್, ಹನೀಫ್, ಅಸ್ಲಾಂ ಹಕ್, ಮೊಹಮ್ಮದ್ ಸಾಲಿ, ಅಬ್ದುಲ್ ಜಲೀಲ್, ಅನೀಸ್ ಮತ್ತು ಬೆಂಗ್ರೆ ನಿವಾಸಿ ಕಬೀರ್ ಎಂಬವರ ವಿರುದ್ಧ ಕಾವೂರು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಾನ್ಯ ನ್ಯಾಯಾಲಯವು ಆರೋಪಿಗಳ ವಿರುದ್ಧ ಪೊಲೀಸರು ಆರೋಪ ಸಾಬೀತು ಪಡಿಸಲು ವಿಫಲರಾಗಿದ್ದಾರೆ ಎಂದು ತೀರ್ಪು ನೀಡಿ, ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಮಾನ್ಯ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಆರೋಪಿಗಳ ಪರವಾಗಿ ಯುವ ನ್ಯಾಯವಾದಿ ನಿತೀನ್ ಕುತ್ತಾರ್ ವಾದಿಸಿದ್ದರು.
