ದೆಹಲಿ ಗದ್ದುಗೆ ಬಿಜೆಪಿ ಗೆದ್ದಿದ್ದು ಹೇಗೆ..?

ರಾಷ್ಟ್ರೀಯ

ರಾಜಕಾರಣಕ್ಕೆ ಹೊಸ ‘ಮಾಡೆಲ್’ ಕೊಟ್ಟು, ದ್ವೇಷ ರಾಜಕಾರಣಕ್ಕೆ ಬಲಿಯಾದ್ರೆ ಕೇಜ್ರಿ..?

ದೆಹಲಿಯ ಜನತೆ ಪೊರಕೆ ತೊರೆದು 27 ವರ್ಷಗಳ ನಂತರ ಕಮಲಕ್ಕೆ ಜೈ ಅಂದಿದ್ದಾರೆ. ಶತಮಾನಗಳಷ್ಟು ಹಳೆಯದಾದ ಕಾಂಗ್ರೆಸ್ ಸೊನ್ನೆ ಸುತ್ತಿದೆ. ದೆಹಲಿ ಫಲಿತಾಂಶ ನಂತರ ಹಲವಾರು ವಿಶ್ಲೇಷಣೆಗಳು ನಡೆಯುತ್ತಿದೆ. ಕಾಂಗ್ರೆಸ್ -ಆಪ್ ಪ್ರತ್ಯೇಕವಾಗಿ ಸ್ಪರ್ಧಿಸಿ ಬಿಜೆಪಿಗೆ ಗೆಲುವಿನ ದಾರಿ ಸುಲಭವಾಗಿ ತಂದುಕೊಟ್ಟಿದೆ ಅನ್ನಲಾಗಿದೆ. ಅದು ದಿಟವೂ ಹೌದು. ಹದಿನೇಳು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಸೋಲಲು ಕಾಂಗ್ರೆಸ್ ಪಕ್ಷವೇ ಪ್ರಮುಖ ಕಾರಣ. ಕಾಂಗ್ರೆಸ್ ಪಡೆದ ಮತಕ್ಕಿಂತ ಕಡಿಮೆ ಅಂತರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ. ಬಿಜೆಪಿ ನಿಜವಾಗಿ ಧನ್ಯವಾದ ಹೇಳಬೇಕಾದುದು ಕಾಂಗ್ರೆಸ್ ಪಕ್ಷಕ್ಕೆ ಅನ್ನುವ ಸಂದೇಶಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

‘ಗೆಲುವಿಗೆ ನೂರಾರು ಅಪ್ಪಂದಿರು, ಸೋಲು ಅನಾಥ ‘ ಅನ್ನುವ ಗಾದೆಮಾತಿದೆ. ದೆಹಲಿಯಲ್ಲಿ ಆಮ್ ಆದ್ಮಿ ಸೋಲು ಅರವಿಂದ್ ಕೇಜ್ರಿವಾಲ್ ಅವರನ್ನು ವಿಲನ್ ಸ್ಥಾನದಲ್ಲಿ ಕೂರಿಸಲು ನಡೆಸುವ ಷಡ್ಯಂತ್ರಕ್ಕೆ ಪೈಪೋಟಿ ನಡೆಯುತ್ತಿದೆ. ಪ್ರಬಲ ಜಾತ್ಯತೀತ ನಾಯಕರು, ಅವರ ಅಭಿಮಾನಿಗಳಿಂದಲೇ ಇಂತಹದ್ದು ನಡೆಯುತ್ತಿರುವುದು ಆಶ್ಚರ್ಯ ಮೂಡಿಸುವಂತದ್ದು. ಇನ್ನು ಜಾತ್ಯತೀತ ಬರಹಗಾರರು ಎನಿಸಿಕೊಂಡವರು ಕೂಡ ಸಿಕ್ಕಿದ್ದು ಸೀರುಂಡೆ ಅನ್ನುವಂತೆ ಕೇಜ್ರಿ ವಿರುದ್ಧ ದ್ವೇಷ ಕಕ್ಕಲು ಬಳಸಿಕೊಳ್ಳುತ್ತಿದೆ. ಕೇಜ್ರಿವಾಲ್ ಒಬ್ಬ ದುರಹಂಕಾರಿ, ಅಹಂಕಾರ ಮೈಗೂಡಿಸಿಕೊಂಡವ, ಸರ್ವಾಧಿಕಾರಿ, ವಂಚಕ, ಕೋಮುವಾದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡವ, ಸಿದ್ಧಾಂತದ ನೆಲೆಗಟ್ಟು ಇಲ್ಲದ ವ್ಯಕ್ತಿ ಅನ್ನುವ ರೀತಿಯಲ್ಲಿ ಜಾತ್ಯಾತೀತರು ವ್ಯಾಖ್ಯಾನಿಸುತ್ತಿದ್ದಾರೆ. ಅಷ್ಟಕ್ಕೂ ರಾಜಕಾರಣದಲ್ಲಿ ದುರಹಂಕಾರಿ, ಸರ್ವಾಧಿಕಾರಿ ಇಲ್ಲದವರು ಯಾರಿದ್ದಾರೆ..? ಹೇಳಿ. ಕೇಂದ್ರದಲ್ಲಿ ಇಬ್ಬರು ನಾಯಕರು ನಡೆಸುತ್ತಿರುವುದು ಸರ್ವಾಧಿಕಾರಿಯ ಧೋರಣೆ ಅಲ್ಲದೇ ಇನ್ನೇನು. ಕೇಜ್ರಿವಾಲ್ ಮಿಸ್ಟರ್ ಕ್ಲೀನ್ ಎಂದೇಳಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ‘ನಾ ಖಾವೂಂಗ ನಾ ಖಾನೆ ದೂಂಗ ‘ ಅನ್ನುವ ಡೈಲಾಗ್ ಉದುರಿಸಿ ಉದ್ಯಮಪತಿಗಳಿಗೆ ಲಾಭ ತಂದುಕೊಟ್ಟಿದ್ದು, ಎಲೆಕ್ಟ್ರೋರಲ್ ಬಾಂಡ್ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿದ್ಧು ಕಾಣಿಸುತ್ತಿಲ್ಲವೇ..? ಇದು ಕೂಡ ಭ್ರಷ್ಟಾಚಾರದ ಪರಮಾವಧಿಯಲ್ಲವೇ..? ಕಳೆದ ಹತ್ತುವರ್ಷಗಳಿಂದ ಮೋದಿ ಸರಕಾರದ ವಿರುದ್ಧ ಸಿಂಹ ಗರ್ಜನೆ ಮಾಡಿದ ಕೇಜ್ರಿವಾಲ್ ಯಾಕೆ ಇದೀಗ ಜಾತ್ಯತೀತರಿಗೆ ಅಪಥ್ಯರಾದರು.

ಕೇಜ್ರಿವಾಲ್ ಡೇರ್ ಡೆವಿಲ್ಸ್ ರಾಜಕಾರಣಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಬರೀ ಹನ್ನೆರಡು ವರ್ಷಗಳಲ್ಲಿ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದು ಕೂರಿಸಿದ್ದು, ಸಣ್ಣ ಅವಧಿಯಲ್ಲಿ ರಾಷ್ಟ್ರದಾದ್ಯಂತ ಜನಮನ್ನಣೆ ಗಳಿಸಿದ್ದು, ಈ ಹಿರಿಮೆಯನ್ನು ಕೊಂಡಾಡಲೇಬೇಕಿದೆ. ಸಿನಿನಟರು, ಸೆಲೆಬ್ರಿಟಿಗಳು, ಇತರರು ಪಕ್ಷ ಕಟ್ಟಿ ಇಪ್ಪತ್ತು ಮೂವತ್ತು ವರ್ಷವಾದರೂ ಒಂದೇ ಒಂದು ಶಾಸಕ ಸ್ಥಾನ ಪಡೆಯಲಾಗದೆ, ಬರೀ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕಾರಣ ಮಾಡಲು ಸೀಮಿತವಾಗುತ್ತಿರುವಾಗ ಪಕ್ಷ ಕಟ್ಟಿ ಮೊದಲ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದು ಚಿಲ್ಲರೆ ವಿಷಯವಾ..ಈ ಕಾರಣಕ್ಕಾಗಿ ನಾವು ಕೇಜ್ರಿವಾಲ್ ರನ್ನು ಅಭಿನಂದಿಸಲೇಬೇಕಾಗಿದೆ.

ಇನ್ನು ರಾಜಕಾರಣದ ದಿಕ್ಕು ದೆಸೆಗೆ ಹೊಸ ಮಾಡೆಲ್ ತೂರಿಸಿದ ರೂವಾರಿ ಕೇಜ್ರಿವಾಲ್. ಉಚಿತ ವಿದ್ಯುತ್, ಮಹಿಳೆಯರಿಗೆ ಫ್ರೀ ಬಸ್, ಮೆಟ್ರೋ ದಲ್ಲಿ ಉಚಿತ ಪ್ರಯಾಣ, ಮೊಹಲ್ಲಾ ಕ್ಲಿನಿಕ್, ಗುಣಮಟ್ಟದ ಶಾಲೆ ಮೊಡೆಲ್ ಕೊಟ್ಟಿದ್ದೆ ಕೇಜ್ರಿವಾಲ್ ರ ಆಮ್ ಆದ್ಮಿ ಪಕ್ಷ. ಇದೀಗ ಇತರ ಪಕ್ಷಗಳು ಇದನ್ನು ನಕಲು ಮಾಡುತ್ತಿದೆ. ದೆಹಲಿಯ ಸರಕಾರಿ ಶಾಲೆಯ ಗುಣಮಟ್ಟವನ್ನೊಮ್ಮೆ ನೋಡಿ, ಅದೇ ರೀತಿ ಮಾಜಿ ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿಯಾದವರು ಮತ ಹಾಕಲು ಬರುವ ಹುಟ್ಟೂರ ಶಾಲೆಯನ್ನೊಮ್ಮೆ ನೋಡಿ. ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿರುತ್ತದೆ. ರಾಜಕಾರಣದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿದರೂ ತಾನು ಕಲಿತ ಶಾಲೆಗೆ ಕಾಂಕ್ರೀಟ್ ಹಾಕಲು ಆಗದವರು, ಶಿಕ್ಷಣದ ಅಪೂರ್ವ ಕಾಳಜಿಯೊಂದಿಗೆ ದೆಹಲಿಯ ಸರಕಾರಿ ಶಾಲೆಯನ್ನೇ ಬದಲಾವಣೆ ಮಾಡಿದ ಕೇಜ್ರಿ ಐಡಿಯಾಲಜಿಗೆ ಭೇಷ್ ಅನ್ನಬೇಕು.

ಕೇಂದ್ರದ ಸರ್ವಾಧಿಕಾರಿಯ ವಿರುದ್ಧ ನಿರಂತರ ಗುಡುಗುತ್ತಿದ್ದ ಕೇಜ್ರಿ ಇಡೀ ರಾಷ್ಟ್ರ ಗೆದ್ದವರಿಗೆ ದೆಹಲಿ ಗೆಲ್ಲದಂತೆ ಮಾಡಿದ್ದು ಕೇಜ್ರಿಯ ರಾಜಕಾರಣದ ತಾಕತ್ತು ಅಲ್ಲವೇ.. ಕಳೆದ ಹತ್ತು ವರ್ಷಗಳಲ್ಲಿ ಕನಿಷ್ಠ ಹತ್ತು ರಾಜ್ಯಗಳಲ್ಲೂ ಆಪರೇಷನ್ ಕಮಲ ಮಾಡಿ ಸಕ್ಸಸ್ ಆದವರಿಗೆ ದೆಹಲಿಯಲ್ಲಿ ಆಪರೇಷನ್ ಮಾಡಲು ಸಾಧ್ಯವಾಗದೇ ಕೈ ಕೈ ಹಿಸುಕುವಂತೆ ಮಾಡಿದ್ದು ಇದೇ ಕೇಜ್ರಿ ಅಲ್ಲವೇ.. ಒಂದು ವೇಳೆ ದೆಹಲಿಯಲ್ಲಿ ಆಮ್ ಆದ್ಮಿ ಬದಲಿಗೆ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಆಪರೇಷನ್ ಗೆ ಒಳಗಾಗಿ ಯಾವತ್ತೂ ಬಿದ್ದುಹೋಗುತ್ತಿತ್ತು. ಇ.ಡಿ, ಸಿಬಿಐ ಗೆ ಬೆದರದೆ ತಮ್ಮ ಪಕ್ಷವನ್ನು ಪ್ರಭಾವಿಗಳ ಎದುರು ನಿರಂತರ ಕಾಪಾಡಿಕೊಂಡು ಬಂದ ಕೇಜ್ರಿ ಕರಾಮತ್ತನ್ನು ಪ್ರಶಂಸಿಸಲೇಬೇಕಿದೆ.

ಆದರೆ ದೆಹಲಿಯಲ್ಲಿ ದ್ವೇಷ ರಾಜಕಾರಣ ಮಾಡಿ ಇಲ್ಲಿ ಕೇಜ್ರಿವಾಲ್ ಪಕ್ಷವನ್ನು ಕೆಳಗಿಳಿಸಲಾಯಿತು ಅನ್ನುವುದು ನೂರಕ್ಕೆ ನೂರು ಸತ್ಯ. ಒಂದು ವೇಳೆ ಅಬಕಾರಿ ಭ್ರಷ್ಟಾಚಾರ ಆರೋಪದಲ್ಲಿ ಕೇಜ್ರಿವಾಲ್, ಸಿಸೋಡಿಯಾ ರನ್ನು ಐದು ತಿಂಗಳುಗಳ ಕಾಲ ಜೈಲಿನಲ್ಲಿರಿಸದದಿದ್ದರೆ ಬಿಜೆಪಿ ಇಲ್ಲಿ ಉಸಿರಾಡುವುದೇ ಕಷ್ಟವಾಗಿತ್ತು. ಕೇಜ್ರಿವಾಲ್ ಜೈಲಿಗೆ ಹೋದದ್ದೇ ತಡ ದೆಹಲಿಯಲ್ಲಿ ಆಮ್ ಆದ್ಮಿ ಯ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ ಹಾಕಲಾಯಿತು. ಬಿಜೆಪಿ ಸೈಲೆಂಟಾಗಿ ಆಟ ಆರಂಭಿಸಿತು. ಇದರ ಪರಿಣಾಮವಾಗಿ ಕೇಜ್ರಿಗೆ ಸೋಲಾಯಿತು. ಇದೇ ಮಾದರಿಯನ್ನು ಕರ್ನಾಟಕದಲ್ಲಿ ಸಿದ್ದರಾಮಯ್ಯ ವಿರುದ್ಧ ಖೆಡ್ಡಾ ತೋಡಿಸಿ ಮೂಡಾ ಹಗರಣದಲ್ಲಿ ಜೈಲು ಪಾಲಾಗುವಂತೆ ಮಾಡಿ ಕಾಂಗ್ರೆಸ್ ನಿರ್ನಾಮ ಮಾಡಲು ಪ್ರಯತ್ನಿಸಿತ್ತು ‌ ಆದರೆ ಆ ಪ್ರಯೋಗ ವಿಫಲವಾಯಿತು. ಆಪರೇಷನ್ ಗೆ ಬಗ್ಗದಿದ್ದಾಗ ದ್ವೇಷ ರಾಜಕಾರಣದ ಖೆಡ್ಡಾ ತೋಡಿಸಿ ಬಲಿಪಶು ಮಾಡುತ್ತಿರುವ ತಂತ್ರ ದೆಹಲಿಯಲ್ಲಿ ಯಶಸ್ವಿಯಾಗಿದೆ. ಆದರೆ ಕೇಜ್ರಿವಾಲ್ ಸೋಲಿಗೆ ಬಲಪಂಥೀಯರಿಗಿಂತ ಹೆಚ್ಚಾಗಿ ಜಾತ್ಯಾತೀತವಾದಿಗಳು ವಿಚಿತ್ರ ಮ್ಯಾನರಿಸಂ ಸೃಷ್ಟಿಸಿ ಸಂಭ್ರಮ ಪಡುತ್ತಿರುವುದು ಕೋಮುವಾದಿ ರಾಜಕಾರಣದ ಅಪಾಯದ ಬಗ್ಗೆ ಅರಿವಿಲ್ಲವೋ..ಅಥವಾ ಎಲ್ಲ ಅರಿವಿದ್ದು ನಟನೆಯೋ..

ಕೇಜ್ರಿವಾಲ್ ಮಹಾತ್ಮನೇನಲ್ಲ. ವಂಚಕ ರಾಜಕಾರಣ ಮಾಡಿಯೇ ದೆಹಲಿ ಗದ್ದುಗೆ ಪಡೆದಿದ್ದು ಸತ್ಯ. ವಂಚಕ ರಾಜಕಾರಣ ಮಾಡದವರು ಯಾರಿದ್ದಾರೆ ಹೇಳಿ. ಗುಜರಾತ್, ಉತ್ತರ ಪ್ರದೇಶದಿಂದ ಬಂದವರು ಎಲ್ಲಾ ಉತ್ತಮ ರಾಜಕಾರಣ ಮಾಡಿದವರೇನಾ..? ಕೇಜ್ರಿವಾಲ್ ಗೆ ಸಿದ್ಧಾಂತ ಇಲ್ಲ ಅನ್ನುವವರಿದ್ದಾರೆ. ಪ್ರಸಕ್ತ ರಾಜಕಾರಣದಲ್ಲಿ ಸಿದ್ಧಾಂತ ಮಣ್ಣಾಂಗಟ್ಟಿ ಇದ್ದವರು ಯಾರಿದ್ದಾರೆ ತಿಳಿಸಿ. ಬೆಳಿಗ್ಗೆ ಒಂದು ಪಕ್ಷ, ರಾತ್ರಿ ಇನ್ನೊಂದು ಪಕ್ಷದೊಂದಿಗೆ ಕುಚುಕು ಕುಚುಕು ಹಾಕುವವರೇ ರಾಜಕಾರಣದಲ್ಲಿ ಇರುವವರು. ಸಿದ್ಧಾಂತ ನಂಬಿ ಕೂತವರು ಮೂಲೆ ಸೇರಿ ಹಾಗಿದೆ. ಈಗೇನಿದ್ದರೂ ವ್ಯವಹಾರ ರಾಜಕಾರಣಕ್ಕೆ ಹೆಚ್ಚು ಪ್ರಾಶಸ್ತ್ಯ. ಗುಜರಾತಿನಿಂದ ಬಂದು ಮಾಡಿದವರು ಇದೇ, ರಾಯ್ ಬರೇಲ್ವಿಯಿಂದ ಬಂದವರು ಮಾಡಿದ್ದು ಇದೇ. ಆದರೆ ಕೇಜ್ರಿವಾಲ್ ಜಾತ್ಯಾತೀತರಿಗೆ ಅಪಥ್ಯ ಯಾಕೆ.. ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ರಾಷ್ಟ್ರ ರಾಜಕಾರಣದಲ್ಲಿ ಹೊಸ ಮಾಡೆಲ್ ಹುಟ್ಟು ಹಾಕಿ ಕೇಜ್ರಿ ನಿರ್ಗಮಿಸಿದ್ದಾರೆ. ಹತ್ತು ವರ್ಷಗಳಲ್ಲಿ ಪಕ್ಷ ಕಟ್ಟಿದ ಅದ್ಭುತ ಕಲೆಗೆ, ಪಕ್ಷದ ಶಾಸಕರನ್ನು ಜತನದಿಂದ ಕಾಪಾಡಿಕೊಂಡು ಬಂದ ರೀತಿಗೆ, ಅಧಿಕಾರ ಸಿಕ್ಕರೆ ಹೀಗೂ ಮಾಡಬಹುದು ಅನ್ನುವ ಅಭಿವೃದ್ಧಿಯ ಹೊಸ ಪರಿಕಲ್ಪನೆಗೆ ಶಹಬ್ಬಾಸ್ ಗಿರಿ ಕೊಡಲೇಬೇಕಿದೆ‌.