ಲೋಕಾಯುಕ್ತದಲ್ಲಿ ಲೇಡಿ ಸಿಂಗಂ.. ಆಗಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಗಾನಾ ಪ್ರಸನ್ನಕುಮಾರ್. ಭ್ರಷ್ಟರ ಪಾಲಿಗೆ ಈಕೆ ಸಿಂಹಸ್ವಪ್ನೆ

ಕರಾವಳಿ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಂಗಂ ಆಗಿ ಜನಪ್ರಿಯರಾದವರು ಎಸ್ಪಿ ಅಣ್ಣಾಮಲೈ. ಉಡುಪಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಅಣ್ಣಾಮಲೈರದ್ದೇ ಸುದ್ದಿ. ಪಾತಕಿಗಳು, ದಂಧೆಕೋರರ ಪಾಲಿಗಂತೂ ಅಣ್ಣಾಮಲೈ ಸಿಂಗಂ ಆಗಿ ಗುರುತಿಸಿಕೊಂಡಿದ್ದರು. ಸಿನೆಮಾ ತಾರೆಯರಿಗೆ ಇರುವಷ್ಟು ಜನಪ್ರಿಯತೆ ಪೊಲೀಸ್ ಇಲಾಖೆಯಲ್ಲಿ ಇವರಿಗಿತ್ತು. ಆದರೆ ಯಾವಾಗ ಪೊಲೀಸ್ ಸಮವಸ್ತ್ರ ಕಳಚಿಟ್ಟು ರಾಜಕಾರಣ ಪ್ರವೇಶಿಸಿದರೋ ಸಿಂಗಂ ಅಣ್ಣಾಮಲೈ ಚುಯಿಂಗಂ ಆಗಿ ಬದಲಾದರು.

ಆ ನಂತರ ತುಂಬಾ ಸಮಯದ ನಂತರ ಪೊಲೀಸ್ ಇಲಾಖೆಯಲ್ಲಿ ಸಿಂಗಂ ಇಮೇಜಿನಿಂದ ಯಾರೂ ಗುರುತಿಸಿಕೊಳ್ಳಲಿಲ್ಲ. ಆದರೆ ತರುಣ ಪೊಲೀಸ್ ಅಧಿಕಾರಿಯಾಗಿ ಜಿಲ್ಲೆಗೆ ಪ್ರವೇಶಿಸಿದ ಸಂದೇಶ್ ಪಿ‌.ಜಿ ಸಿಂಗಂ ಇಮೇಜಿನಿಂದ ಗುರುತಿಸಿಕೊಳ್ಳಲಾರಂಭಿಸಿದರು. ಬಜಪೆಯಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಸಂಘಟನೆಯ ನಾಯಕರನ್ನು ದರದರನೆ ಎಳೆದುಕೊಂಡು ಹೋಗಿ ಸುದ್ಧಿಯಾದರು. ಮೂಡಬಿದ್ರೆ ಇನ್ಸ್ ಪೆಕ್ಟರ್ ಆದ ನಂತರ ಅಲ್ಲಿ ಇವರದ್ದೇ ಹವಾ. ಪುಚ್ಚಮೊಗರುವಿನಲ್ಲಿ ಬ್ಯಾನರ್ ವಿವಾದ ಸಂಭವಿಸಿದಾಗ ಪಂಚಾಯತ್ ಪಿಡಿಓರನ್ನು ರಸ್ತೆ ಬದಿಯಲ್ಲಿಯೇ ತರಾಟೆಗೆ ತೆಗೆದುಕೊಳ್ಳುವ ಮೂಲಕ ಸಿಂಗಂ ಆಫೀಸರ್ ಎಂದು ಜನಪ್ರಿಯರಾದರು.

ಆದರೆ ಲೋಕಾಯುಕ್ತ ಪೊಲೀಸರು ಇತರ ಪೊಲೀಸರಂತೆ ಸಾರ್ವಜನಿಕರ ಕೈಗೆ ಹೆಚ್ಚಾಗಿ ಸಿಗುವುದಿಲ್ಲ. ಸಾರ್ವಜನಿಕವಾಗಿ ಜನಪ್ರಿಯತೆಯ ಉತ್ತುಂಗಕ್ಕೇರುವುದು ಕಷ್ಟ. ಆದರೆ ಇದಕ್ಕೆಲ್ಲ ಅಪವಾದ ಎಂಬಂತೆ ಮಂಗಳೂರು ಲೋಕಾಯುಕ್ತದಲ್ಲಿ ಮಹಿಳಾ ಅಧಿಕಾರಿಯೊಬ್ಬರು ‘ಸಿಂಗಂ’ ಆಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಆಕೆ ಬೇರಾರೂ ಅಲ್ಲ. ಮಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಗಾನಾ ಪ್ರಸನ್ನ ಕುಮಾರ್. ಭ್ರಷ್ಟರ ಪಾಲಿಗೆ ಈಕೆ ಸಿಂಹಸ್ವಪ್ನೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ)ದ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಾನಾ ಮೇಡಂ ಹೆಸರು ಕೇಳಿದೊಡನೆ ಬೆವೆತು ಹೋಗುತ್ತಿದ್ದಾರೆ. ಮೂಡ ಅಧಿಕಾರಿಗಳ ಶನಿ ಬಿಡಿಸುತ್ತಿರುವ ಈ ಲೇಡಿ ಸಿಂಗಂ ಹಲವು ವರುಷಗಳ ಹಿಂದೆ ಅನುಮೋದನೆ ನೀಡಿದ ಸಿಂಗಲ್ ಸೈಟ್, ಲೇ ಔಟ್, ಕಟ್ಟಡ ಪರವಾನಿಗೆ ಸಹಿತ ಹಲವು ಕಡತಗಳ ಜನ್ಮ ಜಾಲಾಡಿದ್ದಾರೆ. ನೋಟಿಸಿಗೆ ಉತ್ತರ ಕೊಟ್ಟು ಕೊಟ್ಟು ಮೂಡ ಅಧಿಕಾರಿಗಳು ಸುಸ್ತಾಗಿದ್ದಾರೆ.

ಲೋಕಾಯುಕ್ತವೆಂದರೆ ಹಲ್ಲಿಲ್ಲದ ಹಾವು ಎಂದು ಕರೆಯಿಸಿಕೊಂಡಿದ್ದವು. ಆದರೆ ಯಾವಾಗ ಲೋಕಾಯುಕ್ತಕ್ಕೆ ಗಾನಾ ಎಂಟ್ರಿಯಾಯಿತೋ ‘ಲೋಕಾ’ ಇಲಾಖೆ ಘರ್ಜಿಸಲು ಆರಂಭಿಸಿದೆ. ಸಾಲು ಸಾಲು ಭ್ರಷ್ಟ ಅಧಿಕಾರಿಗಳು ಜೈಲು ಸೇರುವಂತಾಗಿದೆ. ಮೂಲ್ಕಿ ಕಂದಾಯ ನಿರೀಕ್ಷಕ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಠಾಣೆಯಲ್ಲಿ ಚಿಲ್ಲರೆ ಹಣಕ್ಕಾಗಿ ಕೈಯೊಡ್ಡಿದ್ದ ಇನ್ಸ್ ಪೆಕ್ಟರ್ ಶರೀಫ್ ಗೆ ಜೈಲು ದಾರಿ ತೋರಿಸಿದ್ದು ಇದೇ ಗಾನಾ ಪಿ ಕುಮಾರ್. ಪ್ರಚಾರದಿಂದ ದೂರ ಉಳಿದಿರುವ, ರಾಜಕಾರಣಿಗಳೊಂದಿಗೆ ಅಂತರ ಕಾಯ್ದುಕೊಂಡಿರುವ ಗಾನಾ ಮೇಡಂ ಲೋಕಾಯುಕ್ತ ಕಚೇರಿಗೆ ಜನಸಾಮಾನ್ಯರು ಯಾವ ಹೊತ್ತಿಗೆ ಹೋದರೂ ಕೈಗೆ ಸುಲಭದಲ್ಲಿ ಸಿಗುತ್ತಾರೆ. ತನ್ನ ಕೆಲಸ ಕಾರ್ಯದಲ್ಲಿ ಎಳ್ಳಷ್ಟು ರಾಜಿ ಮಾಡದೆ ದಕ್ಷ, ಸೂಪರ್ ಕಾಫ್ ಅಧಿಕಾರಿಯೆಂದೇ ಖ್ಯಾತಿಗೊಳಗಾಗಿದ್ದಾರೆ.

ಸರಕಾರಿ ಕಚೇರಿ ಅಂದರೆ ಸಾಕು ಜನರಿಗೆ ವಾಕರಿಕೆ ಬರುವಂತಹ ಸಂದರ್ಭವೇ ಹೆಚ್ಚು. ಒಂದು ಸಣ್ಣ ಕೆಲಸಕ್ಕೂ ತಿಂಗಳುಗಟ್ಟಲೆ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ದಪ್ಪ ಚರ್ಮದ ಅಧಿಕಾರಿಗಳು ಕಾಸು ಬಿಸಾಕಿದರಷ್ಟೇ ಕೆಲಸ ಮಾಡಿ ಕೊಡುತ್ತಾರೆ. ಯಾರ ಹೆದರಿಕೆಯೂ ಇಲ್ಲ. ಆದರೆ ಇತ್ತೀಚೆಗೆ ಲೋಕಾಯುಕ್ತ ನಡೆಸುವ ‘ಆದಾಲತ್’ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನದಂತೆ ಕಾಡುತ್ತಿರುವ ಗಾನಾ ಮೇಡಂರ ಕಾರ್ಯನಿರ್ವಹಣೆ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟುವಂತಾಗಿದೆ. ಎಂಬಿಬಿಎಸ್ ಡಾಕ್ಟರ್ ಆಗಬೇಕಿದ್ದ ಗಾನಾ ಪೊಲೀಸ್ ಇಲಾಖೆಗೆ ಸೇರಿ ತನ್ನ ಕರ್ತವ್ಯ ಪರತೆ, ದಕ್ಷತೆ, ಪ್ರಾಮಾಣಿಕತೆಯಿಂದ ಪೊಲೀಸ್ ಇಲಾಖೆಗೆ ಹೆಸರು ತಂದಿದ್ದಾರೆ. ಲೋಕಾಯುಕ್ತಕ್ಕೆ ಬರುವ ಮುನ್ನ ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಿದ್ದರು. ನೆಟ್ಟಾರ್ ಹತ್ಯೆ, ಮತೀಯ ಗಲಭೆ, ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥವಾಗಿ ನಿಭಾಯಿಸಿ ಸೈ ಅನ್ನಿಸಿಕೊಂಡಿದ್ದರು. ಇದೀಗ ಲೋಕಾಯುಕ್ತದಲ್ಲೂ ಗಾನಾ ಮಿಂಚಿನ ಸಂಚಾರ ಉಂಟು ಮಾಡಿದ್ದಾರೆ. ಲೇಡಿ ಸಿಂಗಂ ಆಗಿ ಗುರುತಿಸಿಕೊಂಡಿದ್ದಾರೆ. ಭ್ರಷ್ಟರನ್ನು ಮಟ್ಟ ಹಾಕುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಬೆಂಬಲಕ್ಕೆ ನಿಂತಿದ್ದಾರೆ.