ಬಿಸಿಸಿಐ, ದುಬೈ ಕಾನ್ಸುಲೇಟ್ ಜಂಟಿಯಾಗಿ ಸಮುದಾಯ ಜಾಗೃತಿ ಕಾರ್ಯಕ್ರಮ: ಕಾನ್ಸುಲ್ ಜನರಲ್ ಸತೀಶ್ ಶಿವನ್ ಸಲಹೆ

ಅಂತಾರಾಷ್ಟ್ರೀಯ

ದುಬೈನಲ್ಲಿ ಇತ್ತೀಚೆಗೆ ನಡೆದ ಬ್ಯಾರಿ ಮೇಳ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕಾನ್ಸುಲ್ ಜನರಲ್ ಆಫ್ ಇಂಡಿಯಾ ಸತೀಶ್ ಶಿವನ್ ಅವರ ವಿಶೇಷ ಆಹ್ವಾನದ ಮೇರೆಗೆ ದುಬೈನ ಕಾನ್ಸುಲೇಟ್ ಕಚೇರಿಗೆ ಭೇಟಿ ನೀಡಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಯುಎಇ ಕಾರ್ಯಕಾರಿ ಸಮಿತಿ ಸದಸ್ಯರು ಸಮುದಾಯದ ಹಾಗೂ ಅನಿವಾಸಿಗಳ ಹಲವಾರು ವಿಷಯಗಳ ಕುರಿತು ಮುಕ್ತವಾಗಿ ಚರ್ಚಿಸಿದರು.

ಇತ್ತೀಚೆಗೆ ಪದೇ ಪದೇ ಕರ್ನಾಟಕದವರು ಎದುರಿಸುತ್ತಿರುವ ವಿಸಾ ಸಮಸ್ಯೆ ಬಗ್ಗೆ ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಗಮನಸೆಳೆದಾಗ ಉತ್ತರಿಸಿದ ಕಾನ್ಸುಲ್ ಜನರಲ್, ಕಳೆದ ವರ್ಷ ಘೋಷಿಸಿದ್ದ ಅಮ್ನೆಸ್ಟಿ ಹಾಗೂ ಅದನಂತರ ಯುಎಇ ಸರ್ಕಾರದ ಕೆಲವು ಕಠಿಣ ವಿಸಾ ನಿಲುವಿನಿಂದಾಗಿ ಈ ಬದಲಾವಣೆ ಕಂಡುಬರುತ್ತಿದೆ, ಇದು ಕೇವಲ ಒಂದು ರಾಜ್ಯ, ಸಮುದಾಯ, ಪ್ರದೇಶಕ್ಕೆ ಸೀಮಿತವಾದ ವಿಚಾರವಲ್ಲ, ದೇಶದ ಎಲ್ಲಾ ರಾಜ್ಯದಲ್ಲೂ ಇದೇ ರೀತಿಯ ಬೆಳವಣಿಗೆ ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಅದೇ ರೀತಿ ಏಜೆಂಟ್ ಗಳ ಮೋಸಕ್ಕೆ ಬಲಿಯಾಗಬಾರದು, ಕೆಲಸದ ಆಮಿಷ ಒಡ್ಡಿ ವಿಸಿಟ್ ವಿಸಾದಲ್ಲಿ ಕಾರ್ಮಿಕರನ್ನು ಕರೆತಂದು ಅತಂತ್ರ ಸ್ಥಿತಿಯಲ್ಲಿ ಸಮಸ್ಯೆಗೆ ಸಿಲುಕಿಸುವವರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಬಿಸಿಸಿಐ ಹಾಗೂ ದುಬೈ ಕಾನ್ಸುಲೇಟ್ ಜಂಟಿಯಾಗಿ ಮಾಡಬೇಕು ಎಂದರು, ಕೆಲಸ ಹರಿಸಿ ವಿಸಿಟ್ ವಿಸಾದಲ್ಲಿ ಬಂದವರು ವಿಸಾ ಅವಧಿ ಮುಗಿದ ಮೇಲೂ ಹಿಂತಿರುಗಿದೇ ಇದ್ದರೆ ಅವರಿಂದ ನಮ್ಮ ದೇಶಕ್ಕೆ ಕೆಟ್ಟ ಹೆಸರು, ಕೆಲಸಕ್ಕಾಗಿ ಬರುವವರು ಕೆಲಸದ ವರ್ಕ್ ಪರ್ಮಿಟ್ ವೀಸಾ ರೆಸಿಡೆನ್ಸ್ ವೀಸಾದಲ್ಲೇ ಬರಲಿ ಎಂಬುದೇ ನನ್ನ ನಿಲುವು ಎಂದರು.

ಬ್ಯಾರಿ ಮೇಳದಲ್ಲಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದ ಬ್ಯಾರಿ ಸಮುದಾಯದ ಜನರ ಒಗ್ಗಟ್ಟು, ಶಿಸ್ತು ಕಂಡು ಹಾಗೂ ಬ್ಯಾರಿಗಳ ಸಾಧನೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕಾನ್ಸುಲ್ ಜನರಲ್ ಸತೀಶ್, ದುಬೈ ಕಾನ್ಸುಲೇಟ್ ನಲ್ಲಿ ಮುಂದೆ ನಡೆಯುವ ಎಲ್ಲಾ ಬ್ಯುಸಿನೆಸ್ ಸಮ್ಮಿಟ್ ಗೆ ಬಿಸಿಸಿಐಗೆ ಆಹ್ವಾನ ನೀಡುವುದಾಗಿ ತಿಳಿಸಿದರು. ಅಲ್ಲದೇ ಬಿಸಿಸಿಐ ನಡೆಸುವ ಎಲ್ಲಾ ವೃತ್ತಿಪರ, ಸಮುದಾಯದ ಪರ, ಬ್ಯಾರಿ ಕಾರ್ಯಕ್ರಮಗಳಲ್ಲಿ ತಾನು ಸಕ್ರಿಯವಾಗಿ ಭಾಗವಹಿಸುವೆನು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಸಿಸಿಐ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್, ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೇನ್, ಮುಸ್ತಾಕ್ ಕದ್ರಿ, ಇಮ್ರಾನ್ ಖಾನ್ ಎರ್ಮಾಳ್ ಹಾಗೂ ಏಮ್ ಇಂಡಿಯಾ ಫೋರಂ ಸ್ಥಾಪಕ ಶೇಕ್ ಮುಝಫರ್, ನಿಯಾಝ್ ಉಪಸ್ಥಿತರಿದ್ದರು.