ಬೋಳಂತೂರಿನ ನಾರ್ಶದ ಸಿಂಗಾರಿ ಬೀಡಿ ಮಾಲಿಕರಾದ ಸುಲೈಮಾನ್ ಹಾಜಿ ಅವರ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ಹಣ ದರೋಡೆ ಮಾಡಿರುವ ಪ್ರಕರಣ ದಿನಕಳೆದಂತೆ ರೋಚಕ ಸಂಗತಿಗಳು ಹೊರಬರುತ್ತಿದೆ,
ದರೋಡೆ ನಡೆಸಲು ಇ.ಡಿ. ಅಧಿಕಾರಿ ಗಳ ಸೋಗಿನಲ್ಲಿ ಬಂದಿದ್ದವರಿಗೆ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಸಿಕ್ಕಿದೆ. ದರೋಡೆಕೋರರು ಇ.ಡಿ ಅಧಿಕಾರಿಗಳೆಂದು ನಂಬಿದ್ದ ಉದ್ಯಮಿ ಜಾಗ ಮಾರಿ ಬಂದಿದ್ದ ಮೂರು ಕೋಟಿಗೂ ಅಧಿಕ ಹಣವನ್ನು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದರು. ತನಿಖೆ , ವಿಚಾರಣೆ ಯಾವುದೇ ಗೋಜು ಬೇಡ ಅಂತ ಆ ಹಣವನ್ನೆಲ್ಲ ದರೋಡೆಕೋರರ ಕೈಗೆ ಕೊಟ್ಟಿದ್ದರು. ಈ ಹಿಂದೆ ಅಸಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾಗ ಪ್ರಕರಣ ಹೊರ ಜಗತ್ತಿಗೆ ಗೊತ್ತಾಗದ ಹಾಗೆ ಸೆಟ್ಲ್ ಮೆಂಟ್ ನಡೆಸಿ ಮುಗಿಸಿದ್ದಾರಂತೆ. ಈ ಪ್ರಕರಣವನ್ನು ಅದೇ ರೀತಿ ಮುಗಿಸಲು ತನ್ನಲ್ಲಿದ್ದ ಹಣವನ್ನು ಅವರ ಕೈಗೆ ಕೊಟ್ಟಿದ್ದರು. ದರೋಡೆ ಮಾಡಿದಕ್ಕಿಂತ ಎಷ್ಟೋ ಪಾಲು ಹೆಚ್ಚು ಹಣ ಇನಾಮು ರೂಪದಲ್ಲಿ ಸಿಕ್ಕಿದ್ದರಿಂದ ಕಳ್ಳರು ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದರು. ಮನೆಯವರಂತೂ ಇದು ನಿಜವಾಗಿಯೂ ಇ.ಡಿ. ದಾಳಿ ಎಂದೇ ನಂಬಿದ್ದರು.

ಉದ್ಯಮಿ ದರೋಡೆ ಹಿಂದೆ ಆಪ್ತರೇ ಕೈಯಾಡಿಸಿದ್ದು ಅನ್ನುವ ಮಾತುಗಳು ಹರಿದಾಡಿತ್ತು. ನಾಸಿರ್ ಎಂಬಾತ ಪರ್ಲಿಯಾದ ಮಟನ್ ಇಕ್ಬಾಲ್ ಎಂಬಾತನನ್ನು ಬಳಸಿಕೊಂಡು ಬೀಡಿ ಉದ್ಯಮಿಯ ಮನೆಯಲ್ಲಿ ಕೆಲಸಕ್ಕಿದ್ದ ಸಿರಾಜುದ್ದೀನ್‌ನಿಂದ ಮಾಹಿತಿ ಕಲೆ ಹಾಕಿಕೊಂಡು ಈ ದಾಳಿಗೆ ಕಾರಣನಾಗಿದ್ದನು. ಸಿರಾಜುದ್ದೀನ್ ಕಳುಹಿಸಿದ ಉದ್ಯಮಿಯ ಮನೆ ಲೊಕೇಶನ್ ಮೂಲಕ ದರೋಡೆಕೋರರ ತಂಡ ಬೋಳಂತೂರಿಗೆ ಸಂಪರ್ಕ ಸಾಧಿಸಿತ್ತು. ದರೋಡೆಗೆ ಮೊದಲು ಹಲವು ಬಾರಿ ಬೋಳಂತೂರಿಗೆ ಆಗಮಿಸಿ ಇಲ್ಲಿನ ರಸ್ತೆಗಳ ಕುರಿತು ಸಾಕಷ್ಟು ತಿಳಿದುಕೊಂಡೇ ಕೃತ್ಯಕ್ಕೆ ಇಳಿದಿದ್ದರು ಎನ್ನಲಾಗಿದೆ.
ಜ. 3ರ ರಾತ್ರಿ ನಕಲಿ ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿದ್ದ ಖದೀಮರು ಎಲ್ಲವನ್ನೂ ಕರಾರುವಕ್ಕಾಗಿಯೇ ನಡೆಸಿದ್ದರು. ನಕಲಿ ಇ.ಡಿ ಅಧಿಕಾರಿಗಳನ್ನು ಅಸಲಿ ಎಂದೇ ಉದ್ಯಮಿಗಳ ಮನೆ ಮಂದಿ ನಂಬಿದ್ದರು. ದಾಳಿ ನಡೆಸಿದ ಆರಂಭದಲ್ಲಿ ಇ.ಡಿ. ಅಧಿಕಾರಿಗಳ ಮಾದರಿಯಲ್ಲಿಯೇ ಎಲ್ಲರ ಮೊಬೈಲ್‌ಗಳನ್ನು ಪಡೆದಿದ್ದರು. ಅಲ್ಲಿಂದ ತೆರಳುವಾಗ ನಾವು ಬಿ.ಸಿ.ರೋಡ್‌ನ ಹೊಟೇಲ್‌ನಲ್ಲಿದ್ದೇವೆ. ಅಲ್ಲಿ ಮೊಬೈಲ್ ಪಡೆಯಿರಿ ಎಂದಿದ್ದರು. ಇದನ್ನು ನಂಬಿ ಸುಲೈಮಾನ್ ಅವರ ಪುತ್ರ ಹಿಂಬಾಲಿಸಿಕೊಂಡು ಹೋಗುವ ವೇಳೆ ದರೋಡೆಕೋರರು ಕಣ್ತಪ್ಪಿಸಿ ಪರಾರಿಯಾಗಿದ್ದರು. ಆ ನಂತರವಷ್ಟೇ ಇದು ಅಸಲಿ ಇ.ಡಿ ಅಧಿಕಾರಿಗಳಲ್ಲ ಅನ್ನುವ ಅನುಮಾನ ಬಂದಿದ್ದು.
