ಬಂಟ್ವಾಳ ತಾಲೂಕಿಗೊಳಪಟ್ಟ ಪೊಳಲಿ ಅಡ್ಡೂರು ಸೇತುವೆ ಬಿರುಕುಗೊಂಡ ಪರಿಣಾಮ ಕಳೆದ ಹಲವಾರು ತಿಂಗಳುಗಳಿಂದ ಈ ಸೇತುವೆಯಲ್ಲಿ ಬಸ್ಸು, ಲಾರಿ ಸೇರಿದಂತೆ ಘನ ವಾಹನ ಸಂಚಾರಕ್ಕೆ ನಿಷೇಧವನ್ನು ಹೇರಲಾಗಿತ್ತು. ಕೈಕಂಬ -ಪೊಳಲಿ- ಬಿಸಿರೋಡ್ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಅಡ್ಡೂರಿನವರೆಗೂ ಮಾತ್ರ ಸಂಚರಿಸುತ್ತಿದ್ದು, ಆ ನಂತರ ಪ್ರಯಾಣಿಕರು ಸೇತುವೆಯಲ್ಲಿ ನಡೆದುಕೊಂಡು ಹೋಗಿ ಸೇತುವೆಯ ಇನ್ನೊಂದು ಬದಿಯಲ್ಲಿ ನಿಂತ ಬಸ್ಸು ಏರಿ ಪ್ರಯಾಣಿಸಲೇಬೇಕಾದ ಕಾರಣ ಈ ಭಾಗದ ಜನರು ತುಂಬಾ ತೊಂದರೆಗೆ ಒಳಗಾಗುತ್ತಿದ್ದರು. ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಇದರಿಂದಾಗಿ ತೀವ್ರ ತೊಂದರೆ ಪಡುತ್ತಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸ್ಥಳಕ್ಕೆ ಭೇಟಿ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು.

ಇದೀಗ ಪೊಳಲಿ ಅಡ್ಡೂರು ಸೇತುವೆ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದ್ದು, ಈ ಮಧ್ಯೆಯೇ ಅನೇಕ ವಿಘ್ನಗಳು ನಿರಂತರವಾಗಿ ಎದುರಾಗುತ್ತಿದೆ. ಹತ್ತು ದಿನಗಳ ಹಿಂದೆಯಷ್ಟೇ ನದಿಯ ಎರಡು ಬದಿಗೆ ಮಣ್ಢು ಹಾಕಿ ಕಾಮಗಾರಿಯನ್ನು ಆರಂಭಿಸಿದ್ದ ಸಂದರ್ಭ ದೊಡ್ಡ ಅನಾಹುತವೊಂದು ನಡೆದಿತ್ತು. ಕಾಮಗಾರಿ ನಡೆಸುತ್ತಿದ್ದ ಟಿಪ್ಪರ್ ಲಾರಿಯೊಂದು ನದಿಯಲ್ಲಿ ಮುಳುಗಿ ಅವಘದ ಸಂಭವಿಸಿತ್ತು. ಅದೃಷ್ಟವಶಾತ್ ಲಾರಿ ಚಾಲಕ ಪಾರಾಗಿದ್ದ. ಇದೀಗ ಎರಡನೇ ಬಾರಿ ಇಂದು ಮಧ್ಯಾಹ್ನದ ಹೊತ್ತಿಗೆ ನದಿಗೆ ಮಣ್ಣು ಹಾಕಿದ್ದ ಜಾಗದಲ್ಲಿ ಸಂಚರಿಸುತ್ತಿದ್ದ ಕಾಮಗಾರಿ ನಡೆಸುತ್ತಿದ್ದವರ ದೊಡ್ಡ ಟಿಪ್ಪರ್ ಲಾರಿ (12 ಚಕ್ರದ ಗಾಡಿ) ಪಲ್ಟಿಯಾಗಿ ನದಿಯಲ್ಲಿ ಮುಳುಗಿದೆ. ಗುತ್ತಿಗೆದಾರ ಕಂಪನಿಗಳು ಕಾಮಗಾರಿ ವೇಳೆ ಮುನ್ನಚ್ಚರಿಕೆ ಕ್ರಮ ವಹಿಸದೇ ಇರುವುದು ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ. ವಹಿಸದಿರುವುದು, ಜೀವದ ಬೆಲೆಗೆ ಗಮನ ಕೊಡದೆ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುವ ಕಾರಣ ಇಂತಹ ಅವಘಡಗಳು ಸಂಭವಿಸಲು ಕಾರಣವಾಗಿದೆ. ಇನ್ನಾದರೂ ಗುತ್ತಿಗೆದಾರ ಕಂಪನಿಗಳು ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ನಡೆಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
