ಪತ್ನಿಗೆ ಹಲ್ಲೆ ನಡೆಸಿ, ಬಲವಂತದ ವಿಷಪ್ರಾಶನ ಮಾಡಿ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ.

ಕರಾವಳಿ

ಪತ್ನಿಗೆ ಹಲ್ಲೆ ನಡೆಸಿ ವಿಷಪ್ರಾಶನ ಮಾಡಿ ಹತ್ಯೆಗೈದ ಪತಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ಆರೋಪಿಯನ್ನು ಉಳ್ಳಾಲ ತಾಲೂಕಿನ ಸೋಮೇಶ್ವರ ಕುಂಪಲ ನಿವಾಸಿ ಜೋಸೆಫ್ ಫ್ರಾನ್ಸಿಸ್ ರೆನ್ಸನ್ ಅಲಿಯಾಸ್ ರೆನ್ಸನ್ ಎಂದು ಗುರುತಿಸಲಾಗಿದೆ.

ಜೋಸೆಫ್ ಫ್ರಾನ್ಸಿಸ್ ರೆನ್ಸನ್ ಮದ್ಯಪಾನ, ಜೂಜಾಟ ಮತ್ತು ಇತರ ದುಶ್ಚಟಗಳಿಗೆ ವ್ಯಸನಿಯಾಗಿದ್ದು, ಮೇ 11, 2022 ರಂದು, ಶೈಮಾ ಮನೆಯಲ್ಲಿದ್ದ ಸಮಯ ತನ್ನ ಗಂಡನಿಗೆ ಬುದ್ದಿ ಮಾತು ಹೇಳಿದ್ದಳು. ಇದರಿಂದ ಕೋಪಗೊಂಡ ಗಂಡ ಜೋಸೆಫ್ ಫ್ರಾನ್ಸಿಸ್ ರೆನ್ಸನ್ ಅವಳನ್ನು ಕೋಣೆಗೆ ತಳ್ಳಿ, ಬಾಗಿಲು ಲಾಕ್ ಮಾಡಿ, ದೈಹಿಕವಾಗಿ ಹಲ್ಲೆ ಮಾಡಿದ್ದ, ಮಾತ್ರವಲ್ಲದೆ ಅವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಳು ಎಂಬಂತೆ ಬಿಂಬಿಸಲು ಆರೋಪಿಯು ಅವಳ ಬಾಯಿಗೆ ವಿಷಕಾರಿ ವಸ್ತುವನ್ನು ಸುರಿದಿದ್ದನು. ಘಟನೆ ಸಮಯದಲ್ಲಿ ಇಬ್ಬರು ಮಕ್ಕಳು ಮನೆಯಲ್ಲಿದ್ದರು.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶೈಮಾಳನ್ನು ಮಕ್ಕಳು ಆಟೋ ರಿಕ್ಷಾದಲ್ಲಿ ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಶೈಮಾ ಅಂದೇ ಸಾವನ್ನಪ್ಪಿದಳು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಆರೋಪಿ ಗಂಡ ಜೋಸೆಫ್ ಫ್ರಾನ್ಸಿಸ್ ರೆನ್ಸನ್ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ, ಮಾನ್ಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ಮಾನ್ಯ ನ್ಯಾಯಾಲಯವು ಎರಡೂ ಕಡೆಯ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಆರೋಪಿಯನ್ನು ತಪ್ಪಿತಸ್ಥ ಎಂದು ಘೋಷಿಸಿ, ಮಾರ್ಚ್ 12 ರಂದು ತೀರ್ಪು ನೀಡಿದರು. ನ್ಯಾಯಾಲಯವು ಅರೋಪಿ ಗಂಡನಿಗೆ ಜೀವಾವಧಿ ಶಿಕ್ಷೆ ಮತ್ತು ಒಟ್ಟು 35,000 ರೂ. ದಂಡ ವಿಧಿಸಿತು.

ಪ್ರಕರಣದಲ್ಲಿ, ಪ್ರಮುಖ ಸಾಕ್ಷಿಗಳಾಗಿದ್ದ ಅವರ ಇಬ್ಬರು ಪುತ್ರರು ಪ್ರಾಸಿಕ್ಯೂಷನ್‌ಗೆ ವಿರುದ್ಧವಾದ ಹೇಳಿಕೆಗಳನ್ನು ನೀಡಿದರು. ಆರಂಭದಲ್ಲಿ, ಪ್ರಕರಣವನ್ನು ಆತ್ಮಹತ್ಯೆಗೆ ಪ್ರಚೋದನೆ ಎಂದು ದಾಖಲಿಸಲಾಗಿತ್ತು. ಆದಾಗ್ಯೂ, ಕೆಎಸ್ ಹೆಗ್ಡೆ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ವರ್ಷಾ ಎ. ಶೆಟ್ಟಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ, ಶೈಮಾ ತಲೆಗೆ ತೀವ್ರವಾದ ಗಾಯವಾಗಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಯಿತು. ಈ ವರದಿಯ ಆಧಾರದ ಮೇಲೆ, ಪ್ರಕರಣವನ್ನು ಅದೇ ದಿನ ಕೊಲೆ ತನಿಖೆಯಾಗಿ ಪರಿವರ್ತಿಸಲಾಯಿತು. ಮಾನ್ಯ ನ್ಯಾಯಾಲಯದ ವಿಚಾರಣೆಯ ವೇಳೆ ಡಾ. ವರ್ಷಾ ಎ. ಶೆಟ್ಟಿ ಮರಣೋತ್ತರ ಪರೀಕ್ಷೆಯ ಸಂಶೋಧನೆಗಳಿಗೆ ಸಂಬಂಧಿಸಿದಂತೆ ಪೋಷಕ ಸಾಕ್ಷ್ಯಗಳನ್ನು ಒದಗಿಸಿದರು.

ಆಗಿನ ಮಂಗಳೂರು ಪೊಲೀಸ್ ಆಯುಕ್ತರಾದ ಶ್ರೀ ಶಶಿಕುಮಾರ್ ರವರ ನಿರ್ದೇಶನದಂತೆ, ಎಸಿಪಿ ದಿನಕರ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ಉಲ್ಲಾಳ ಪೊಲೀಸ್ ಇನ್ಸ್ ಪೆಕ್ಟರ್ ಸಂದೀಪ್ ರವರು ತನಿಖಾಧಿಕಾರಿಯಾಗಿ, ಉಳ್ಳಾಲ ಠಾಣೆಯ ಎ.ಎಸ್.ಐ ಮಹಮ್ಮದ್ ಮನ್ಸೂರ್ ರವರು ಸಹಾಯಕ ತನಿಖಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಿ ಆರೋಪಿಗೆ ಶಿಕ್ಷೆಗೊಳಪಡಿಸುವಲ್ಲಿ ಮುತುವರ್ಜಿ ವಹಿಸಿರುತ್ತಾರೆ.