ಸರಕಾರದ ಹಣ ಪೋಲು ಮಾಡುತ್ತಿರುವ PWD ಇಲಾಖೆ; ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ

ರಾಜ್ಯ

ರಿಯಲ್ ಎಸ್ಟೇಟ್ ಮಾಫಿಯಾದವರನ್ನು ತೃಪ್ತಿಪಡಿಸಲು, ಕೋಟಿ, ಕೋಟಿ ನದಿಗೆ ಸುರಿಯುತ್ತಿರುವ ಇಲಾಖೆ

ಮಳವೂರು ಸೇತುವೆ ಕೆಳಗೆ ಭಾಗದ ಉಳ್ಳವರ ಖಾಸಗಿ ಜಮೀನಿಗೆ PWD ಇಲಾಖೆಯಿಂದ ತಡೆಗೋಡೆ ನಿರ್ಮಿಸುವ ಮಹತ್ಕಾರ್ಯಕ್ಕೆ ಪಿಡಬ್ಲ್ಯೊಡಿ ಇಲಾಖೆ ಕೈ ಹಾಕಿದೆ. ಶಾಂತವಾಗಿ ಹರಿಯುತ್ತಿದ್ದ ವಿಶಾಲವಾದ ಪಲ್ಗುಣಿ ನದಿಗೆ ಮಣ್ಣು ತುಂಬಿಸಿ ನದಿಯನ್ನು ಕಿರಿದಾಗಿಸುವ ಕೆಲಸವು ಭರದಿಂದ ಸಾಗುತ್ತಿದೆ. ನದಿಗೆ ಮಣ್ಣು ಹಾಕಿ ಮಣ್ಣಿನಿಂದ ಅಮೇದ್ಯ ತಿನ್ನುವ ಸಕಲಕಲಾ ಪಂಡಿತ್ಯವನ್ನು ಅರಿತ ಅಧಿಕಾರಿಗಳು ತರಾತುರಿಯಿಂದ ನದಿಗೆ ಮಣ್ಣು ತುಂಬಿಸಿ ತಡೆಗೋಡೆ ನಿರ್ಮಿಸಿ ಉಳ್ಳವರನ್ನು ಉದ್ದಾರ ಮಾಡಲು ಹೊರಟಂತಿದೆ ಎಂದು ನಾಗರಿಕರು ದೂರಿಕೊಂಡಿದ್ದಾರೆ.

ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಈ ಪ್ರದೇಶದ ಬಗ್ಗೆ ಮುತುವರ್ಜಿ, ಕಾಳಜಿ ತೋರಿಸಿರುವ ಜನಪ್ರತಿನಿಧಿಗಳು, ಬಜ್ಪೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ ಬಳಿಕ ಜನಸಾಮಾನ್ಯರ ಮೂಲಭೂತ ಕೆಲಸ ಮಾಡಲು ಅನುದಾನವಿಲ್ಲದೆ ಒದ್ದಾಡುತ್ತಿರುವಾಗ, ಸುಮಾರು 4 ಕೋಟಿಯಷ್ಟು ಹಣವನ್ನು ವಿನಿಯೋಗಿಸುತ್ತಿರುವ ಘನವೆತ್ತ PWD ಇಲಾಖೆ, ಸರಕಾರದ ಖಜಾನೆಗೆ ಕಣ್ಣ ಹಾಕುತ್ತಿರುವುದು ಈ ಭಾಗದ ಜನಪ್ರಧಿನಿಧಿಗಳಿಗೆ ಕಾಣದೆ ಇರುವುದು ವಿಪರ್ಯಾಸ. ಮಾತ್ರವಲ್ಲ ಇದು ಕುರುಡು ಕಾಂಚಣದ ಮಹಿಮೆಯಾಗಿರಬಹುದೇ.? ಇದರಲ್ಲಿ ಜನಪ್ರತಿನಿಧಿಗಳ ಪಾಲು ಬಹಿರಂಗಪಡಿಸಬೇಕು. ನದಿಗೆ ಮಣ್ಣು ತುಂಬಿಸುವುದರಿಂದ ಮಳೆಗಾಲದಲ್ಲಿ ರಭಸದಿಂದ ಹರಿಯುವ ನದಿಯ ನೀರು ಸರಾಗವಾಗಿ ಹರಿಯಲು ತಡೆಯಾಗಿ ಸಮೀಪದ ಜಾಮೀನು ಮತ್ತು ಮನೆಗಳಿಗೆ ಹಾನಿಯಾಗುವುದಕ್ಕೂ ಕಾರಣವಾಗಬಹುದು.

ರಿಯಲ್ ಎಸ್ಟೇಟ್ ಮಾಫಿಯಾದವರನ್ನು ತೃಪ್ತಿಪಡಿಸಲು ಹೊರಟ ಇಲಾಖೆ, ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜನರ ಕಣ್ಣಿಗೆ ಕಾಣುವುದಿಲ್ಲ ಅನ್ನುವ ಭ್ರಮೆ ಬಿಟ್ಟು ಅದರಿಂದ ಹೊರ ಬಂದರೆ ಲೇಸು.! ಕೂಡಲೇ ಈ ಘನಂಧಾರಿ ಕೆಲಸವನ್ನು ನಿಲ್ಲಿಸಿ, ನದಿಗೆ ಹಾಕಿರುವ ಮಣ್ಣನ್ನು ತೆಗೆಯಬೇಕು. ಉಳ್ಳವರ ರಕ್ಷಣೆ, ಹಿತಕಾಯುವುದನ್ನು ಕೂಡಲೇ ನಿಲ್ಲಿಸದಿದ್ದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಇದರ ವತಿಯಿಂದ ನಾಗರಿಕರನ್ನು ಒಟ್ಟು ಸೇರಿಸಿ ಶೀಘ್ರವೇ ದೊಡ್ಡ ಮಟ್ಟದ ಹೋರಾಟ ಮತ್ತು ಕಾನೂನು ಕ್ರಮ ಮಾಡುವ ಮೂಲಕ ನದಿಗೆ ಹಾಕಿದ ಮಣ್ಣನ್ನು ವಾಪಾಸು ತೆಗೆಸಬೇಕಾಗುತ್ತದೆ. PWD ಇಲಾಖಾಧಿಕಾರಿಗಳಿಗೆ, ಹಾಗೂ ಜನಪ್ರತಿನಿಧಿಗಳಿಗೆ ಈ ಮೂಲಕ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಎಚ್ಚರಿಸುತ್ತಿದೆ.