ಸಾರ್ವಜನಿಕ ರಸ್ತೆ, ಸರ್ಕಾರಿ ಜಮೀನು ಅತಿಕ್ರಮಣ, ತೋಟಕ್ಕೂ ಸಿಸಿ ಟೀವಿ ಕಣ್ಗಾವಲು, ಕಂದಾಯ ಅಧಿಕಾರಿಗಳ ದಾಳಿ

ಕರಾವಳಿ

ಸೊತ್ತುಗಳು ಮುಟ್ಟುಗೋಲು. ಅತಿಕ್ರಮಣ ತೆರವುಗೊಳಿಸಿದ ಕಂದಾಯ ಅಧಿಕಾರಿಗಳು.

ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದಲ್ಲಿ ಬಡ ಕುಟುಂಬಗಳ ಮನೆಗೆ ಹೋಗುವ ರಸ್ತೆಯ ಸರ್ಕಾರಿ ಜಮೀನನ್ನು ವ್ಯಕ್ತಿಗಳಿಬ್ಬರು ಅತಿಕ್ರಮಿಸಿ ಕೃಷಿ ಮಾಡಿರುವುದನ್ನು ಕಂದಾಯ ಅಧಿಕಾರಿಗಳ ತಂಡ ತೆರವುಗೊಳಿಸಿದೆ.

ಕರೋಪಾಡಿ ಗ್ರಾಮದ ನಡುಮಜಲು ಎಂಬಲ್ಲಿ ಅನಿತಾ ವೇಗಸ್ ಮತ್ತು ವಿಕ್ಟರ್ ವೇಗಸ್ ಎಂಬವರ ಮನೆಗಳಿಗೆ ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ರಸ್ತೆ ಸಂಪರ್ಕವಿತ್ತು. ಅದೇ ಪರಿಸರ ನಿವಾಸಿಗಳಾದ ಲಿಯೋ ಡಿಸೋಜಾ ಮತ್ತು ಟೈಟಿಸ್ ಡಿಸೋಜಾ ಎಂಬವರು ರಸ್ತೆಯನ್ನು ತುಂಡರಿಸಿ ಸರ್ಕಾರಿ ಜಮೀನಿನಲ್ಲಿ ಅಡಿಕೆ ಸಸಿಗಳನ್ನು ನೆಟ್ಟು ರಕ್ಷಣೆಗಾಗಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಈ ಬಗ್ಗೆ ತೊಂದರೆಗೊಳಗಾದ ಅನಿತಾ ವೇಗಸ್ ಮತ್ತು ವಿಕ್ಟರ್ ವೇಗಸ್ ಅವರುಗಳು ಬಂಟ್ವಾಳ ತಹಶೀಲ್ದಾರರಿಗೆ ದೂರು ನೀಡಿದ್ದರು.

ದೂರಿಗೆ ಸಂಬಂಧಿಸಿದಂತೆ ತಹಶೀಲ್ದಾರರ ಆದೇಶದನ್ವಯ ವಿಟ್ಲ ಹೋಬಳಿ ಕಂದಾಯ ನಿರೀಕ್ಷಕ ಎಂ.ಎನ್.ರವಿ ಮತ್ತು ಸಿಬ್ಬಂದಿಗಳ ತಂಡ ವಿಟ್ಲ ಪೊಲೀಸರ ಸಹಕಾರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅತಿಕ್ರಮಣ ಎಸಗಿ ನೆಟ್ಟಿರುವ ಅಡಿಕೆ ಸಸಿಗಳನ್ನು ತೆರವುಗೊಳಿಸಿ ದೂರುದಾರರಿಗೆ ರಸ್ತೆ ಸಂಪರ್ಕ ನೀಡಿದ್ದಲ್ಲದೇ ಸ್ಥಳದಲ್ಲಿ ಹಾಕಲಾಗಿದ್ದ ಸಿಸಿ ಕ್ಯಾಮೆರಾಗಳನ್ನು ಮತ್ತು ಇತರ ಸೊತ್ತುಗಳನ್ನು ವಶಕ್ಕೆ ಪಡೆದು ಗ್ರಾಮ ಪಂಚಾಯಿತಿಗೆ ಒಪ್ಪಿಸಿದ್ದಾರೆ.