ಮಂಗಳೂರು: ಗುಂಪು ಹತ್ಯೆಗೆ ಪಾಕಿಸ್ತಾನ ಜಿಂದಾಬಾದ್ ಕಾರಣ; ಗೃಹ ಮಂತ್ರಿಗಳು ಕೂಡಲೇ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು: ದ.ಕ. ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಆಗ್ರಹ

ಕರಾವಳಿ

ಮಂಗಳೂರಿನ ಕುಡುಪುವಿನಲ್ಲಿ ಉತ್ತರಪ್ರದೇಶ, ಬಿಹಾರ ಮಾದರಿಯ ಗುಂಪು ಹಲ್ಲೆ ಮತ್ತು ಹತ್ಯೆ ಆಗಿರುವುದನ್ನು ಸರಿಯಾದ ಮಾರ್ಗದಲ್ಲಿ ತನಿಖೆ ಮಾಡಿಸುವುದನ್ನು ಬಿಟ್ಟು, ಬಾಲಿಶ ಹೇಳಿಕೆ ನೀಡಿದ ಗೃಹ ಮಂತ್ರಿ ಪರಮೇಶ್ವರ್ ಕೂಡಲೇ ತಮ್ಮ ಮಾತನ್ನು ಹಿಂದಕ್ಕೆ ಪಡೆಯಬೇಕು. ತನಿಖೆಯ ದಿಕ್ಕು ತಪ್ಪಿಸುವಂಥ ಹೇಳಿಕೆ ನೀಡುವುದು ಸರಿಯಲ್ಲ. ಈಗಾಗಲೇ ಪೊಲೀಸ್ ಇಲಾಖೆ ತನಿಖೆ ಮಾಡಿ 15 ಜನ ಆರೋಪಿಗಳನ್ನು ಬಂಧಿಸಿ, ಬಾಕಿ ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಯೋನ್ಮಖರಾಗಿರುವ ಸಮಯದಲ್ಲಿ ಈ ಬಾಲಿಶ ರೀತಿಯ ಹೇಳಿಕೆ ಸರಿಯಲ್ಲ. ಉನ್ನತ ಸ್ಥಾನದಲ್ಲಿರುವ ಗೃಹ ಮಂತ್ರಿಗಳು ಯಾರನ್ನು ಮೆಚ್ಚಿಸಲು ಇಂತಹ ಬಾಲಿಶ ಹೇಳಿಕೆ ನೀಡಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಗೃಹಮಂತ್ರಿಗಳು ನೀಡಿರುವ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು.

ಜಾತ್ಯತೀತ ಪಕ್ಷದ ಮೇಲೆ ನಂಬಿಕೆ ಇಟ್ಟ ಮತದಾರರ ಭಾವನೆಗೆ ನೋವು ಆಗಬಾರದು. ಜಾತ್ಯತೀತ ಮನೋಭಾವನೆಯುಳ್ಳ ಜನರು ಈ ಬಾರಿ ನಮಗೆ ಅಧಿಕಾರ ಕೊಟ್ಟಿದ್ದಾರೆ ಅನ್ನುವುದನ್ನು ನೆನಪಿಸಿ, ಮುಂದಿನ ದಿನಗಳಲ್ಲಿ ಮತದಾರರ ಬಳಿಗೆ ಹೋಗಲು ಜನಪ್ರಧಿನಿಧಿಗಳಾದ ನಮಗೆ ಕಷ್ಟ ಆಗಬಹುದು ಮತ್ತು ಕಾರ್ಯಕರ್ತರು ಮುಜುಗರಕ್ಕೆ ಒಳಗಾಗಬಹುದು ಅನ್ನುವುದನ್ನು ಅರ್ಥ ಮಾಡಿಕೊಂಡು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುವ ಸಂಭವ ಬರಬಹುದು. ಎಂದು ದ.ಕ.ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.