ಹಣ ಅಕ್ರಮ ವರ್ಗಾವಣೆ ಪ್ರಕರಣ: ಜಾಮೀನು ಪಡೆಯಲು ಒಂದು ವರ್ಷ ಜೈಲಿನಲ್ಲಿರಬೇಕು ಎಂಬ ನಿಯಮವಿಲ್ಲ: ಸುಪ್ರೀಂ ಕೋರ್ಟ್‌

ರಾಷ್ಟ್ರೀಯ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯು ಜಾಮೀನು ಪಡೆಯಲು ಒಂದು ವರ್ಷ ಜೈಲಿನಲ್ಲಿ ಇರಬೇಕು ಎಂಬ ನಿಯಮ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಮತ್ತು ಉಜ್ಜಲ್‌ ಭುಯಾನ್ ಅವರನ್ನು ಒಳಗೊಂಡ ನ್ಯಾಯಪೀಠವು, ರೂಪಾಯಿ 2,000 ಕೋಟಿ ಮದ್ಯ ಹಗರಣ ಪ್ರಕರಣದಲ್ಲಿ ಉದ್ಯಮಿ ಅನ್ವರ್‌ ಧೇಬರ್‌ ಅವರಿಗೆ ಜಾಮೀನು ನೀಡಿತು. ಈ ಸಂದರ್ಭದಲ್ಲಿ ಆರೋಪಿಯು ಜಾಮೀನು ಪಡೆಯಲು ಒಂದು ವರ್ಷ ಜೈಲಿನಲ್ಲಿರಬೇಕು ಎಂಬ ನಿಯಮ ಇಲ್ಲ ಎಂದು ಸ್ಪಷ್ಟಪಡಿಸಿತು.

ಅನ್ವರ್ ಅವರನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಬಂಧಿಸಿದ್ದು, 9 ತಿಂಗಳು ಜೈಲಿನಲ್ಲಿದ್ದಾರೆ. ಆರೋಪಕ್ಕೆ ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಅನ್ವರ್‌ ಅವರ ಪ್ರಕರಣದ ವಿಚಾರಣೆಯು ಶೀಘ್ರವೇ ಆರಂಭವಾಗುವ ಸೂಚನೆಗಳಿಲ್ಲ. ಹೀಗಾಗಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗುತ್ತಿದೆ. ಅನ್ವರ್ ಅವರು ತಮ್ಮ ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.