ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಕೋಮು ದ್ವೇಷ ಪೋಸ್ಟ್: ಬಂಟ್ವಾಳದ ಯತೀಶ್ ವಿರುದ್ಧ ಎಫ್ಐಆರ್

ಕರಾವಳಿ

ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ..ದ್ವೇಷಕಾರಿ ಪೋಸ್ಟ್ ಹಾಕುವವರ ಚಳಿ ಬಿಡಿಸಲು ಮುಂದಾದ ಪೊಲೀಸ್ ಇಲಾಖೆ

ಮಂಗಳೂರಿನಲ್ಲಿ ನಿರಂತರ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಪ್ರಕರಣಗಳು ನಡೆಯುತ್ತಿರುವುದರಿಂದ ಇದನ್ನು ಮಟ್ಟ ಹಾಕಲು ಉಡುಪಿಯಿಂದ ಮಂಗಳೂರಿಗೆ ವರ್ಗಾವಣೆಯಾಗಿ ಬಂದಿರುವ ಜಿಲ್ಲಾ ಎಸ್ಪಿ ಅರುಣ್ ಇದೀಗ ತನ್ನ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಕರಾವಳಿಯಲ್ಲಿ ಕೋಮು ಸೌಹಾರ್ದ ಕೆಡಲು ಸಾಮಾಜಿಕ ಜಾಲತಾಣದ ಪಾತ್ರ ಬಹಳಷ್ಟಿದೆ. ಇದೀಗ ನಿರಂತರವಾಗಿ ಸಾಮಾಜಿಕ ತಾಣಗಳಲ್ಲಿ ದ್ವೇಷ ಪೂರಿತ ಪೋಸ್ಟ್ ಹಾಕುವವರ ಚಳಿ ಬಿಡಿಸಲು ಮುಂದಾಗಿದ್ದಾರೆ.

ಪೆರುವಾಯಿ ಗ್ರಾಮದ ಯತೀಶ್ ಎಂಬಾತ ಫೇಸ್ ಬುಕ್ ನಲ್ಲಿ ನಿರಂತರವಾಗಿ ಇನ್ನೊಂದು ಸಮುದಾಯದ ವಿರುದ್ಧ ದ್ವೇಷ ಕಾರುವ ಪೋಸ್ಟ್ ಹಾಕುತ್ತಿದ್ದು, ಸಮಾಜದ ಅಶಾಂತಿಗೆ ಕಾರಣರಾಗುತ್ತಿರುವ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಯತೀಶ್ ಪೆರುವಾಯಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

‘ನಾಥುರಾಮ್ ಗೋಡ್ಸೆ ಜೀ ರವರ ಸಿದ್ಧಾಂತಕ್ಕೆ ನನ್ನ ಬದ್ಧತೆ , ಹಿಂದುತ್ವ ಹಾಗೂ ರಾಷ್ಟ್ರೀಯತೆ ನನ್ನ ಉಸಿರು’ ಅನ್ನುವ ಟ್ಯಾಗ್ ಲೈನ್ ನೊಂದಿಗೆ ನಿರಂತರವಾಗಿ ಕೋಮು ದ್ವೇಷ ಉಂಟು ಹಾಕುವ ಪೋಸ್ಟ್ ಹಾಕುತ್ತಿದ್ದು ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದಿನಾಂಕ 31-05-2025 ರಂದು ಅ.ಕ್ರ : 72/2025 ಕಲಂ 353(2) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜಿಲ್ಲಾ ಎಸ್ಪಿ ಅರುಣ್ ಅಧಿಕಾರ ಸ್ವೀಕರಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಪೋಸ್ಟ್ ಸಂಬಂಧ ಇದು ಮೊದಲ ಪ್ರಕರಣ ದಾಖಲಾಗಿದ್ದು, ಸಮಾಜದ ಸ್ವಾಸ್ಥ್ಯ ಕೆಡಿಸುವವರ, ಜಾಲತಾಣಗಳಲ್ಲಿ ಕೋಮು ಗಲಭೆಗೆ ಆಹ್ವಾನಿಸುವವರ ವಿರುದ್ಧ ಇನ್ನಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣದ ಮೂಲಕ ಹಿಂಸೆ ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.