ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಹಿಂಸೆ ಹರಡುವವರಿಗೆ ಎಫ್ ಐ ಆರ್ ಭಾಗ್ಯ

ಕರಾವಳಿ

ಕಲ್ಲಡ್ಕ ಭಟ್ರು ಮೇಲೂ ಬಿತ್ತು ಕೇಸು..ಕಡಬ ಠಾಣೆಗೆ ಅಕ್ರಮ ಪ್ರವೇಶಗೈದ 15 ಸಂಘಪರಿವಾರ ಕಾರ್ಯಕರ್ತರ ಮೇಲೂ ಎಫ್ ಐ ಆರ್

ಕೋಮು ಅಶಾಂತಿಯ ಕುಲುಮೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳ ಸರಣಿ ಬೇಟೆ ಅಶಾಂತಿಯನ್ನು ಹತ್ತಿಕ್ಕುವಲ್ಲಿ ಪೂರಕವಾಗುತ್ತಿದೆ. ಹಿಂಸೆ ಹರಡುವವರಿಗೆ ಮುಲಾಜಿಲ್ಲದೆ ಎಫ್ ಐ ಆರ್ ದಾಖಲಿಸುತ್ತಿದ್ದಾರೆ. ಇದರಿಂದ ಹಿಂಸೆ ಹರಡುವವರ ಜಂಘಾಬಲ ಹುಡುಗಿ ಹೋಗುವಂತಾಗಿದೆ. ಮಂಗಳೂರಿನ ಜನತೆ ಇದೀಗ ರಾಜಕಾರಣಿಗಳಲ್ಲಿ ಭರವಸೆ ಇಟ್ಟಿಲ್ಲ. ಬದಲಾಗಿ ಇಬ್ಬರು ದಕ್ಷ ಪೊಲೀಸ್ ಅಧಿಕಾರಿಗಳ ಮೇಲೆ ಭರಪೂರ ಭರವಸೆ ಇದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ. ಅರುಣ್ ಇದೀಗ ಹಿಂಸಾಕೋರರ, ಪ್ರಚೋದನೆ ಭಾಷಣಕಾರರ ಹೆಡೆಮುರಿ ಕಟ್ಟಲು ಫೀಲ್ಡಿಗೆ ಇಳಿದಿದ್ದಾರೆ.

ಮೊನ್ನೆಯಷ್ಟೇ ಫೇಸ್ ಬುಕ್ ನಲ್ಲಿ ದ್ವೇಷ ಪೋಸ್ಟ್ ಮಾಡುತ್ತಿದ್ದ ಯತೀಶ್ ಪೆರುವಾಯಿ ಎಂಬಾತನ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆ ಬಳಿಕ ಎರಡು ಇನ್ ಸ್ಟ್ರಾ ಗ್ರಾಂ ಪೇಜ್ ಮೇಲೂ ಎಫ್ ಐ ಆರ್ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ ಪ್ರಚಾರಪಡಿಸುವವರ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸಿದೆ.

ಬಂಟ್ವಾಳ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಮೇ 12 ರಂದು ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಸಭೆ ಜರುಗಿತ್ತು. ಸುಮಾರು ಐನೂರು ಜನರನ್ನುದ್ದೇಶಿಸಿ ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಕಾರಿ ರೀತಿಯಲ್ಲಿ ಭಾಷಣ ಮಾಡಿದ್ದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಪ್ರಚೋದನಕಾರಿ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರ ನಂಬ್ರ: 60/2025, ಕಲಂ 353(2) BNS ರಂತೆ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲಾ ಎಸ್ಪಿಯಾಗಿ ಅರುಣ್ ರವರು ಅಧಿಕಾರ ಸ್ವೀಕರಿಸಿದಂತೆ ವಿವಿಧ ಸಂಘಟನೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು, ಮಾಹಿತಿ ಕಲೆ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರ ಭಾಗವಾಗಿ ಕಡಬದ ಕೆಲವು ಹಿಂದೂ ಸಂಘಟನೆ ಮುಖಂಡರ ಮನೆಗಳಿಗೆ ತೆರಳಿ ಜಿಪಿಎಸ್ ಲೊಕೇಶನ್ ಸಂಗ್ರಹಿಸಿದ್ದಾರೆ. ಪೊಲೀಸರ ಈ ನಡೆಗೆ ಸಂಘಪರಿವಾರದ ಮುಖಂಡರಿಂದ ಆಕ್ಷೇಪ ವ್ಯಕ್ತವಾಗಿತ್ತು. ಪೊಲೀಸರ ಈ ನಡೆಯನ್ನು ವಿರೋಧಿಸಿ ಅನುಮತಿ ಪಡೆಯದೆ ಅಕ್ರಮವಾಗಿ ಕಡಬ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಹದಿನೈದು ಸಂಘಪರಿವಾರದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡಬ ನಿವಾಸಿಗಳಾದ ಪ್ರಮೋದ್ ರೈ ನಂದುಗುರಿ, ತಿಲಕ್, ಮೋಹನ ಕೆರೆಕೋಡಿ, ಚಂದ್ರಶೇಖರ ನೂಜಿಬಾಳ್ತಿಲ, ಮಹೇಶ್ ಕುಟ್ರುಪ್ಪಾಡಿ, ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ, ಶರತ್ ನಂದುಗುರಿ, ಶ್ರೇಯಸ್, ಉಮೇಶ್ ನೂಜಿಬಾಳ್ತಿಲ, ರಾಧಾಕೃಷ್ಣ, ಜಯಂತ್ ಹಾಗೂ ಇತರ ಮೂವರ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 39/2025 ಕಲಂ:189(2) 190 BNS -2023 ರಂತೆ ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರಿನಲ್ಲಿ ನಡೆಯುತ್ತಿರುವ ಮತೀಯ ಸಂಬಂಧಿತ ಗಲಭೆಗಳಿಗೆ ಪೂರ್ಣ ವಿರಾಮ ಹಾಕಲು ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಹಲವಾರು ಕಠಿಣ ಕ್ರಮಕ್ಕೆ ಇಳಿದಿದ್ದು, ಮೊದಲ ಹಂತದಲ್ಲಿ ವಿವಿಧ ಸಂಘಟನೆಗಳ ಮುಖಂಡರ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಠಿಪಡಿಸಿದವರ ಮೇಲೆ ಮುಲಾಜಿಲ್ಲದೆ ಕಾನೂನಿನ ರುಚಿ ತೋರುತ್ತಿದ್ದಾರೆ.